Sunday, 15th December 2024

Mandya violence: ನಾಗಮಂಗಲ ಗಲಭೆಯ ನಷ್ಟದ ಪ್ರಮಾಣ 2.66 ಕೋಟಿ ರೂ.; ವ್ಯಾಪಾರಿಗಳು ಅತಂತ್ರ

Mandya Violence

ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲ (Mandya violence, nagamangala violenece) ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ (Ganesha Visarjan) ವೇಳೆ ನಡೆದ ಗಲಭೆಯಲ್ಲಿ ಮತಾಂಧರ ಅಟ್ಟಹಾಸಕ್ಕೆ ಒಟ್ಟು 2.66 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಮಂಡ್ಯ (Mandya news) ಜಿಲ್ಲಾಡಳಿತ ಗಲಭೆಯಿಂದ ನಷ್ಟವಾಗಿರುವ ಆಸ್ತಿ ಮೌಲ್ಯವನ್ನು ಅಂದಾಜಿಸುತ್ತಿದ್ದು, ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ.

ನಾಗಮಂಗಲದ ಗಲಭೆಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದ ಇಡೀ ಪಟ್ಟಣದಲ್ಲಿ ಕ್ಷೋಭೆ ನೆಲೆಸಿದೆ. ಹಲವು ಜನರ ಬದುಕು ಬೀದಿಗೆ ಬಂದಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದ್ದ ವ್ಯಾಪಾರಿಗಳು ಅಪಾರ ನಷ್ಟ ಅನುಭವಿಸಿದ್ದಾರೆ. ಸದ್ಯ ಈ ಜನರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ವೈಯಕ್ತಿಕವಾಗಿ ಒಂದಿಷ್ಟು ಪರಿಹಾರ ನೀಡಿದ್ದಾರೆ.

ಈ ಬೆನ್ನಲ್ಲೇ ರಾಜ್ಯಸರ್ಕಾರವೂ ಹಾನಿಗೊಳಗಾದ ಮಾಲೀಕರು ಹಾಗೂ ವ್ಯಾಪಾರಸ್ಥರಿಗೆ ಪರಿಹಾರ ನೀಡಲು ಮುಂದಾಗಿದೆ. ಈ ಸಂಬಂಧ ಮಂಡ್ಯ ಜಿಲ್ಲಾಡಳಿತ ಸಮೀಕ್ಷೆ ಮಾಡಿ ಹಾನಿಯಾದ ಕಟ್ಟಡ ಹಾಗೂ ವಸ್ತುಗಳಿಗೆ ಮೌಲ್ಯವನ್ನು ಅಂದಾಜು ಮಾಡಿ ವರದಿಯೊಂದನ್ನು ಸಿದ್ಧಪಡಿಸಿದೆ.

ಈ ಸಂಬಂಧ ನಾಗಮಂಗಲ ತಹಸೀಲ್ದಾರ್‌ ನೇತೃತ್ವದಲ್ಲಿ ಪಿಡಬ್ಲ್ಯೂಡಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಒಂದು ತಂಡ ರಚನೆ ಮಾಡಲಾಗಿತ್ತು. ಈ ತಂಡ ಎಸ್‌‍ಆರ್‌ ರೇಟ್‌ ಪ್ರಕಾರ ಗಲಭೆಯಿಂದ ಹಾನಿಗೆ ಒಳಗಾಗಿರುವ ಕಟ್ಟಡ ಪ್ರಮಾಣ ಮೌಲ್ಯ 1.47 ಕೋಟಿ ರೂ. ಹಾಗೂ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಸರಕಿನ ಮೌಲ್ಯ 1.18 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ನೀಡಿ ಸೂಕ್ತ ಪರಿಹಾರ ನೀಡುವಂತೆ ಮಂಡ್ಯ ಡಿಸಿ ಡಾ.ಕುಮಾರ್‌ ಮನವಿ ಮಾಡಿದ್ದಾರೆ.

ಇದನ್ನೂ ಓದಿ: V Somanna: ನಾಗಮಂಗಲ ಪ್ರಕರಣ ಸಂಬಂಧ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ- ಸಚಿವ ಸೋಮಣ್ಣ