Thursday, 12th December 2024

Mandya Violence: ಮಂಡ್ಯದಲ್ಲಿ ಪೆಟ್ರೋಲ್‌ ಬಾಂಬ್‌, ತಲ್ವಾರ್! ಏನ್ರೀ ಇದೆಲ್ಲಾ ಎಂದು ಎಚ್‌ಡಿ ಕುಮಾರಸ್ವಾಮಿ ಗರಂ

HD Kumaraswamy

ಬೆಂಗಳೂರು: ಗಣೇಶ ಮೆರವಣಿಗೆ (Ganeshotsava) ವೇಳೆ ತಲ್ವಾರ್‌ ಝಳಪಿಸುವುದು, ಪೆಟ್ರೋಲ್‌ ಬಾಂಬ್‌ ಎಸೆಯುವುದು ಇದನ್ನೆಲ್ಲ ಮಂಡ್ಯದಲ್ಲಿ (Mandya Violence, nagamangala Violenece) ಮೊದಲ ಬಾರಿಗೆ ನೋಡ್ತಿದ್ದೇನೆ. ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣವೇ ಇದಕ್ಕೆಲ್ಲ ಕಾರಣ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಗುಡುಗಿದ್ದಾರೆ.

ಕೋಮುಗಲಭೆ ನಡೆದ ಮಂಡ್ಯದ (Mandya news) ನಾಗಮಂಗಲದ ಸ್ಥಳಕ್ಕೆ ಶುಕ್ರವಾರ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯ ಸರಕಾರ ಹಾಗೂ ಇದೊಂದು ಸಣ್ಣ ಪ್ರಕರಣ ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವ‌ರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಂಡ್ಯದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ಚಪ್ಪಲಿ ಎಸೆತ, ಬೆಂಕಿ ಹಚ್ಚುವುದು, ತಲ್ವಾರ್, ಕತ್ತಿ ಹಿಡಿದು ಝಳಪಿಸುವುದು, ಪೆಟ್ರೋಲ್ ಬಾಂಬ್ ಎಸೆಯುವುದನ್ನು ಇದೇ ಮೊದಲ ಬಾರಿಗೆ ನೋಡಿದ್ದು. ಮಂಡ್ಯದಲ್ಲಿ ನಡೆದಿರುವುದು ಅತ್ಯಂತ ಕಳವಳಕಾರಿ ಘಟನೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆ, ತುಷ್ಟಿಕರಣದ ರಾಜಕಾರಣವೇ ಇದಕ್ಕೆ ಕಾರಣ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುತ್ತಿರುವುದೇ ಇಂಥ ಘಟನೆಗಳಿಗೆ ಕಾರಣ. 30ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸಿಕ್ಕಸಿಕ್ಕ ಕಡೆ ಅಂಗಡಿಗಳ ಬಾಗಿಲು ಒಡೆದು ದೋಚಲಾಗಿದೆ. ಮನಸೋ ಇಚ್ಛೆ ದೊಂಬಿ ಎಬ್ಬಿಸಲಾಗಿದೆ. ಇಂತಹ ಕಳವಳಕಾರಿ ಘಟನೆಯನ್ನು ರಾಜ್ಯದ ಗೃಹ ಸಚಿವರು ಸಣ್ಣ ವಿಚಾರ ಎಂದು ಹೇಳಿರುವುದು ದುರದೃಷ್ಟಕರ ಎಂದರು.

ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಈ ರೀತಿಯ ಕೆಲಸವಾಗುತ್ತಿರಬಹುದು. ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಮನಗರ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕರೇ ಬೆಂಕಿ ಹಚ್ಚಿಸಿ ಗಲಭೆ ಮಾಡಿಸಿದ್ದರು. ಈಗ ನಾಗಮಂಗಲದಲ್ಲಿ ಗಲಭೆ ಮಾಡಿಸಲಾಗಿದೆ. ಕೆಲವರು ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರು ಮುಖ್ಯಮಂತ್ರಿ ಕುರ್ಚಿಗಾಗಿ ಟವೆಲ್ ಹಾಕಿದ್ದಾರೆ ಎಂದು ಹೇಳಿದರು.

ನಾಗಮಂಗಲದಲ್ಲಿ ಗಣೇಶ ಕೂರಿಸಿದವರನ್ನೇ ಎ1 ಮಾಡಿದ್ದಾರೆ. ಲೋಪ ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿದ್ದಾರೆ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಅಮಾಯಕರನ್ನು ಬಂಧಿಸಿರುವುದು ತಪ್ಪು. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯ ಸ್ಪಾನ್ಸರ್ ‘ಕೈ’ ನಾಯಕರು. ಆ ಘಟನೆಯಿಂದ ಜೈಲಿಗೆ ಹೋದವರು ಈಗ ಏನು ಮಾಡ್ತಿದ್ದಾರೆ. ಈ ರೀತಿ ನಾಗಮಂಗಲದಲ್ಲೂ ಆಗಬೇಕಾ ಎಂದು ಪ್ರಶ್ನಿಸಿದರು.

ಇದು ಸಣ್ಣ ಗಲಾಟೆ ಎಂಬ ಗೃಹ ಸಚಿವ ಜಿ ಪರಮೇಶ್ವರ್ ಹೇಳುತ್ತಾರೆ. ಈ ಎಫ್​ಐಆರ್​ ನೋಡಿದರೆ ಅವರನ್ನು ಗೃಹ ಸಚಿವ ಅನ್ನೋಕೆ ಆಗುತ್ತಾ? ಸ್ಥಳೀಯ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಈ ಘಟನೆಯಿಂದ ಅಮಾಯಕ‌ ಜನರ ಬದುಕು‌ ಬೀದಿಗೆ ಬಂದಿದೆ. ಪೊಲೀಸರನ್ನು ಕೊಲೆ ಮಾಡಲು ಬಂದಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರಿಗೂ ಭದ್ರತೆ ನೀಡದ ದರಿದ್ರ ಸರ್ಕಾರ ಇದು ಎಂದು ಟೀಕಿಸಿದರು.

ಇದನ್ನೂ ಓದಿ: Mandya Violence: ನಾಗಮಂಗಲ ಗಲಭೆ: ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಅಮಾನತು