Thursday, 19th September 2024

Mandya violence: ಒಂದು ಸಮುದಾಯದ ಓಲೈಕೆ, ತುಷ್ಟೀಕರಣದಿಂದ ಇಂಥ ಘಟನೆಗಳು ನಡೆಯುತ್ತಿವೆ; ಎಚ್.ಡಿ.ಕುಮಾರಸ್ವಾಮಿ ಆರೋಪ

HD Kumaraswamy

ನವದೆಹಲಿ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ಎಸೆತ ಹಾಗೂ ಬೆಂಕಿ ಹಚ್ಚುವುದು, ತಲ್ವಾರ್, ಕತ್ತಿ ಹಿಡಿದು ಝಳಪಿಸುವುದು, ಪೆಟ್ರೋಲ್ ಬಾಂಬ್ ಎಸೆಯುವುದನ್ನು ಮಂಡ್ಯ ಜಿಲ್ಲೆಯಲ್ಲಿ (Mandya violence) ಇದೇ ಮೊದಲ ಬಾರಿಗೆ ನೋಡಿದ್ದೇನೆ ಎಂದು ಮಂಡ್ಯ ಸಂಸದ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು. ನವದೆಹಲಿಯಲ್ಲಿ ಇಂದು ಸಚಿವಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇದೊಂದು ಸಣ್ಣ ಪ್ರಕರಣ ಎಂದು ಲಘುವಾಗಿ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನಾಗಮಂಗಲ ಗಲಭೆ ಪ್ರಕರಣ ಬುಧವಾರ ಕೇಂದ್ರ ಕ್ಯಾಬಿನೆಟ್ ಸಭೆ ಮುಗಿದ ಮೇಲೆ ನನಗೆ ಗೊತ್ತಾಯಿತು. ನಂತರ ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಆ ವಲಯದ ಐಜಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡೆ. ಸ್ಥಳೀಯರಿಂದ ಸಾಕಷ್ಟು ವಿಷಯ ತಿಳಿದು ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿದ್ದೇನೆ ಮತ್ತು ಕಠಿಣ ಕ್ರಮ ಕೈಗೊಳ್ಳಲು ಸೂಚಿದ್ದೆನೆ ಎಂದರು.

ಈ ಸುದ್ದಿಯನ್ನೂ ಓದಿ | Mandya Violence: ಕರ್ನಾಟಕವನ್ನು ಪಾಕಿಸ್ತಾನ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ; ಜೋಶಿ ಆಕ್ರೋಶ

ಅಲ್ಲದೆ, ಶಾಂತಿಯುತವಾದ ಮಂಡ್ಯ ಜಿಲ್ಲೆಯಲ್ಲಿ ಒಂದು ಕೋಮಿನ ಜನರು ಕತ್ತಿ, ತಲ್ವಾರ್ ಝಳಪಿಸುವುದು, ಗಣಪತಿ ಮೆರವಣಿಗೆ ಮೇಲೆ ಚಪ್ಪಲಿ, ಕಲ್ಲು, ಪೆಟ್ರೋಲ್ ಬಾಂಬ್ ಎಸೆಯುವುದು ಅತ್ಯಂತ ಕಳವಳಕಾರಿ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆ, ತುಷ್ಟೀಕರಣ ರಾಜಕಾರಣವೇ ಕಾರಣ ಎಂದು ಅವರು ಆರೋಪಿಸಿದರು.

ತಲ್ವಾರ್ ಝಳಪಿಸುವುದು ಸಣ್ಣ ವಿಚಾರವೇ?

ಗೃಹ ಸಚಿವ ಪರಮೇಶ್ವರ್ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುತ್ತಿರುವುದರ ಪರಿಣಾಮವೇ ಇಂಥ ಘಟನೆಗಳಿಗೆ ಕಾರಣ. 30ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸಿಕ್ಕಸಿಕ್ಕ ಕಡೆ ಅಂಗಡಿಗಳ ಬಾಗಿಲು ಒಡೆದು ದೋಚಲಾಗಿದೆ. ಮನಸೋ ಇಚ್ಛೆ ದೊಂಬಿ ಎಬ್ಬಿಸಲಾಗಿದೆ. ಇಂತಹ ಕಳವಳಕಾರಿ ಘಟನೆಯನ್ನು ರಾಜ್ಯದ ಗೃಹ ಸಚಿವರು ಚಿಕ್ಕ ವಿಚಾರ ಎಂದು ಹೇಳಿರುವುದು ದುರದೃಷ್ಟಕರ ಎಂದರು.

ಪೆಟ್ರೋಲ್ ಬಾಂಬ್ ಎಸೆಯುವುದು, ಸ್ಕೂಟರ್ ಗಳಿಗೆ ಬೆಂಕಿ ಹಚ್ಚಿರುವುದು, ತಲ್ವಾರ್ ಹಿಡಿದು ಹೆದರಿಸುವುದು ಸಣ್ಣ ವಿಚಾರವೇ? ಎರಡು ಬಾರಿ ನಾನು ಸಿಎಂ ಆಗಿ ಕೆಲಸ ಮಾಡಿದ್ದೆನೆ. ಯಾವತ್ತೂ ನಾನು ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದರು.

ರಾಜಕೀಯ ಮಾಡುತ್ತಿಲ್ಲ

ಗಣಪತಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು ಒಂದು ಪಕ್ಷದವರಷ್ಟೇ ಅಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನವರು ಎಲ್ಲರೂ ಪಕ್ಷಾತೀತವಾಗಿ ಆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಇದರಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಎಲ್ಲರ ಪರವಾಗಿ ಮಾತನಾಡುತ್ತಿದ್ದೇನೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕ್ರಮ ವಹಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

ಹಿಂದೆ ನಡೆದಿರುವ ಘಟನೆಗಳು ಅವರೇ ಕಣ್ಣಾರೆ ನೋಡಿದ್ದಾರೆ. ಈಗ ರಾಜಕೀಯ ಮಾಡಬಾರದು ಎಂದು ನನಗೆ ಉಪದೇಶ ಮಾಡುತ್ತಿದ್ದಾರೆ. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂದಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು? ನಾನು ರಾಜಕೀಯ ಮಾಡುವುದಕ್ಕೆ ಹೇಳುತ್ತಿಲ್ಲ, ರಾಜಕೀಯಕ್ಕೆ ಟೀಕೆ ಮಾಡುತ್ತಿಲ್ಲ, ನಮ್ಮೆಲ್ಲರ ಜವಾಬ್ದಾರಿ ಇದೇ ಎಂದು ಅರಿತುಕೊಂಡಿದ್ದೇನೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಸರ್ವ ಜನಾಂಗದ ಶಾಂತಿಯ ತೋಟದ ತತ್ವ ನನ್ನದು

ಈ ಹಿಂದೆ ನಾಗಮಂಗಲದಲ್ಲಿ ಒಂದು ಘಟನೆ ನಡೆದಿದ್ದಾಗ ಅವರಿಗೆ ರಕ್ಷಣೆ ಕೊಡಬೇಕೆಂದು ಹೇಳಿ ಅವರ ಪರವಾಗಿ ಹೋರಾಟ ಮಾಡಿದ್ದೆ. ನಾನು ಯಾವುದೇ ಒಂದು ಸಮುದಾಯದ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ, ಸರ್ವ ಜನಾಂಗದ ಶಾಂತಿಯ ತೋಟದ ತತ್ವ ನನ್ನದು. ಇವತ್ತು ಕಾಂಗ್ರೆಸ್ ಓಟ್ ಗಾಗಿ ಬೇರೆ ಬೇರೆ ರೀತಿಯಲ್ಲಿ ಅಪಪ್ರಚಾರ ಮಾಡಿಕೊಂಡು ಸಮಾಜವನ್ನು ಒಡೆಯುತ್ತಿದೆ ಎಂದು ಅವರು ಸರ್ಕಾರದ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನೂ ಓದಿ | Mandya violence: ಸರ್ಕಾರದಿಂದ ಕೋಮುಗಲಭೆಗಳಿಗೆ ಕುಮ್ಮಕ್ಕು: ವಿಜಯೇಂದ್ರ ಕಿಡಿ

ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ

ನಾಗಮಂಗಲ ಪಟ್ಟಣದಲ್ಲಿ ತಲ್ವಾರ್ ಹಿಡಿದುಕೊಂಡು, ಪೆಟ್ರೋಲ್ ಬಾಂಬ್ ಎಸೆಯುತ್ತಾರೆ ಎಂದರೆ ಈ ಸರ್ಕಾರ ಯಾವ ಮಟ್ಟಕ್ಕೆ ಆಡಳಿತ ನಡೆಸುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಯಾರಿಗೂ ಭಯ ಇಲ್ಲ. ಈ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ಅಧಿಕಾರಿಗಳ ಶಕ್ತಿಯನ್ನು ಸಂಪೂರ್ಣವಾಗಿ ನಿಷ್ಕ್ರೀಯ ಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದರು.