ಮಂಗಳೂರು: ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Mangalore News) ನಗರದ ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ (Lady Goschen Hospital) ಕಾರ್ಕಳದ ರಂಜಿತಾ ಆಚಾರ್ಯ (28) ಆತ್ಮಹತ್ಯೆ ಮಾಡಿಕೊಂಡವರು.
ರಂಜಿತಾ ಅವರಿಗೆ ಅವಧಿಪೂರ್ವ ಪ್ರಸವವಾಗಿತ್ತು. ಅ.30ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೀಗಾಗಿ ಎನ್‌ಐಸಿಯುನಲ್ಲಿ ಆರೈಕೆಯಲ್ಲಿದ್ದ ಶಿಶು ನ.3ರಂದು ಮೃತಪಟ್ಟಿತ್ತು. ಇಂದು ರಂಜಿತಾ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬೇಕಾಗಿತ್ತು. ಆದರೆ, ರಂಜಿತಾ ಅವರು ಆಸ್ಪತ್ರೆ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ.
ರಂಜಿತಾ ಅವರನ್ನು ಹೆರಿಗೆಗಾಗಿ ಮೊದಲು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೆಲವು ಗಂಭೀರ ಆರೋಗ್ಯ ಸಮಸ್ಯೆ ಇದ್ದುದರಿಂದ ನಗರದ ಲೇಡಿಗೋಷನ್ ಆಸ್ಪತ್ರೆಗೆ ಅ.28ರಂದು ದಾಖಲಿಸಲಾಗಿತ್ತು. ರಂಜಿತಾ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲು ಮನೆಯವರು ಇಂದು ಆಸ್ಪತ್ರೆಗೆ ಬಂದಿದ್ದರು. ಆದರೆ ರಂಜಿತಾ ಏಕಾಏಕಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Waqf issue: ಮಕ್ಕಳ ಕೈಗೆ ಪೆನ್ನು ಬದಲಾಗಿ ತಲ್ವಾರ್ ಕೊಡಿ ಹೇಳಿಕೆ; ಮರುಳಾರಾಧ್ಯ ಶಿವಾಚಾರ್ಯ ಶ್ರೀ ವಿರುದ್ಧ ಎಫ್‌ಐಆರ್
ಸಂಶಯಪಿಶಾಚಿ ಗಂಡನ ಮೇಲೆ ಸಿಟ್ಟಿಗೆದ್ದು ಮಗುವನ್ನೇ ಇರಿದು ಕೊಂದ ತಾಯಿ
ಚಿಕ್ಕೋಡಿ: ತನ್ನ ಮೇಲೆ ಪದೇ ಪದೆ ಸಂಶಯಪಡುತ್ತಿದ್ದ ಗಂಡನ ಭಂಡತನದಿಂದ ಬೇಸತ್ತುಹೋದ ಪತ್ನಿಯೊಬ್ಬಳು “ನೀನೂ ಬೇಡ, ನಿನ್ನಿಂದ ಜನಿಸಿದ ಮಗುವೂ ಬೇಡ” ಎಂದು ಹಸುಗೂಸನ್ನೇ ಚಾಕುವಿನಿಂದ ಇರಿದು ಕೊಂದ (Stabbing, Murder Case)ಬರ್ಬರ ಘಟನೆ ಚಿಕ್ಕೋಡಿಯಿಂದ (Chikkodi news) ವರದಿಯಾಗಿದೆ.
ಗಂಡ-ಹೆಂಡತಿ ನಡುವಿನ ಜಗಳದಲ್ಲಿ ಹಸುಗೂಸು ಬಲಿಯಾದ ದುರಂತ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಗಾರ ಖುರ್ದ್ ಪಟ್ಟಣದ ಪರೀದಖಾನವಾಡಿಯ ತೋಟದ ಮನೆಯಲ್ಲಿ ನಡೆದಿದೆ. ಸಾತ್ವಿಕ್ ರಾಹುಲ್ ಕಟಗೇರಿ ಮೃತ ಬಾಲಕ, ಭಾಗ್ಯಶ್ರಿ ಕೊಲೆಗೈದ ತಾಯಿ.
ಕಳೆದ 7 ವರ್ಷಗಳ ಹಿಂದೆ ರಾಹುಲ್ ಕಟಗೇರಿ ಎಂಬಾತನೊಂದಿಗೆ ಭಾಗ್ಯಶ್ರೀ ಮದುವೆಯಾಗಿದ್ದಳು. ಮದುವೆಯಾಗಿದ್ದರೂ ನೆಮ್ಮದಿ ಇರಲಿಲ್ಲ. ಗಂಡ ದಿನನಿತ್ಯ ಜಗಳವಾಡುತ್ತಿದ್ದ. ಜಗಳಕ್ಕೆ ಬೇಸತ್ತು ಭಾಗ್ಯಶ್ರೀ ತವರುಮನೆಗೆ ಹೋಗಿದ್ದರೂ ಗಂಡ ರಾಹುಲ್ ಆಕೆಯ ಊರಿಗೆ ಹೋಗಿ ಮನೆಯ ಹಿರಿಯರೊಟ್ಟಿಗೆ ಮಾತಾಡಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದ.
ಇಂದು ಬೆಳ್ಳಂಬೆಳಗ್ಗೆ ಮತ್ತೆ ಪತಿ-ಪತ್ನಿ ನಡುವೆ ಜಗಳ ಮಾಡಿಕೊಂಡಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಸಂಶಯ ಪಡುತ್ತೀಯಾ, ನಿನ್ನ ವಂಶದ ಕುಡಿಯನ್ನು ಉಳಿಸಲಾರೆ ಎಂದು ಮಗುವಿನ ಮೇಲೆ ಚಾಕುವಿನಿಂದ ತಿವಿದು ತೀವ್ರ ಗಾಯಗೊಳಿಸಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಭಾಗ್ಯಶ್ರೀ ಯತ್ನಿಸಿದ್ದಾಳೆ. ಮಗು ಸ್ಥಳದಲ್ಲೇ ಅಸುನೀಗಿದೆ. ಭಾಗ್ಯಶ್ರೀ ಬದುಕುಳಿದಿದ್ದಾಳೆ. ಆಸ್ಪತ್ರೆಗೆ ಸೇರಿಸಲಾಗಿದೆ.
ಸದ್ಯ ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.