ಮಂಗಳೂರು: ಮಂಗಳೂರು ನಗರದ (Mangaluru news) ಹೊರವಲಯದಲ್ಲಿರುವ ಉಚ್ಚಿಲ ಬೀಚ್ ಬಳಿ ಮೂವರು ಯುವತಿಯರು ಈಜುಕೊಳದಲ್ಲಿ (Swimming Pool) ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವ ಖಾಸಗಿ ರೆಸಾರ್ಟ್ ಅನ್ನು ಪೊಲೀಸರು ಬಂದ್ ಮಾಡಿಸಿದ್ದು, ಮಾಲಿರನ್ನು ವಶಕ್ಕೆ (Crime news) ಪಡೆದುಕೊಂಡಿದ್ದಾರೆ. ರೆಸಾರ್ಟ್ ವ್ಯವಹಾರದಲ್ಲಿ ನ್ಯೂನತೆ ಕಾರಣದಿಂದ ಬಂದ್ ಮಾಡಿಸಲಾಗಿದ್ದು, ಮಾಲಿಕರ ವಿಚಾರಣೆ ನಡೆಯುತ್ತಿದೆ.
ದುರಂತ ಘಟನೆ ಭಾನುವಾರ ಮಧ್ಯಾಹ್ನ ನಡೆದಿತ್ತು. ಈ ಪ್ರಕರಣದ ತನಿಖೆ ಮುಗಿಯುವವರೆಗೂ ರೆಸಾರ್ಟ್ ಸೀಲ್ಡೌನ್ ಮಾಡಲಾಗಿದೆ. ರೆಸಾರ್ಟ್ನಲ್ಲಿ ನ್ಯೂನತೆಗಳು ಇರುವ ಕಾರಣ ಸೀಲ್ ಡೌನ್ ಮಾಡಲಾಗಿದ್ದು, ರೆಸಾರ್ಟ್ನ ಉದ್ದಿಮೆ ಪರವಾನಿಗೆ ರದ್ದುಪಡಿಸಿ ಉಳ್ಳಾಲ ಪುರಸಭೆ ಆದೇಶ ಹೊರಡಿಸಿದೆ. ತನಿಖೆ ಮುಗಿಯುವವರೆಗೂ ರೆಸಾರ್ಟ್ಗೆ ಯಾರಿಗೂ ಪ್ರವೇಶ ಇರುವುದಿಲ್ಲ.
ದುರ್ಘಟನೆ ಬಳಿಕ ರೆಸಾರ್ಟ್ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಲೀಕ ಮನೋಹರ್ ಪುತ್ರನ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರೆಸಾರ್ಟ್ನಲ್ಲಿ ಸುರಕ್ಷತಾ ನಿಯಮ ಪಾಲಿಸದೇ ಇರುವುದೇ ಈ ಅವಘಡಕ್ಕೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ರೆಸಾರ್ಟ್ನಲ್ಲಿ ಲೈಫ್ ಗಾರ್ಡ್ ಇರಲಿಲ್ಲ. ಆಳದ ಬಗ್ಗೆಯೂ ಮಾಹಿತಿ ಫಲಕ ಅಳವಡಿಸಿಲ್ಲ. ಯುವತಿಯರು ಬೊಬ್ಬೆ ಹೊಡೆದು ಕೂಗಾಡಿದರೂ ಯಾರೂ ರಕ್ಷಣೆಗೆ ಬರಲಿಲ್ಲ. ಈ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಮೂವರು ಯುವತಿಯರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ತಡ ರಾತ್ರಿಯೇ ಕುಟುಂಬಸ್ಥರು ಮೃತ ದೇಹಗಳೊಂದಿಗೆ ಮೈಸೂರಿಗೆ ತೆರಳಿದ್ದಾರೆ. ಮೃತರು ಮೈಸೂರು ಕುರುಬರಹಳ್ಳಿಯ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್ (21) ಎಂದು ಗುರುತಿಸಲಾಗಿದೆ.
ಮೂವರು ಸ್ನೇಹಿತೆಯರು ವೀಕೆಂಡ್ ಪ್ರವಾಸಕ್ಕೆಂದು ಆಗಮಿಸಿದ್ದರು. ಭಾನುವಾರ ಬೆಳಗ್ಗೆ ಹೊರವಲಯದ ಬೀಚ್ ಬಳಿ ಬಂದವರು ರೆಸಾರ್ಟ್ಗೆ ಬಂದು ರೂಂ ಬುಕ್ ಮಾಡಿದ್ದಾರೆ. ನಂತರ ಸ್ವಿಮ್ಮಿಂಗ್ ಪೂಲ್ಗೆ ಇಳಿದ್ದಾರೆ. ಈ ವೇಳೆ ಕೊಳದ ಒಂದು ಬದಿ ಆರು ಅಡಿಯಷ್ಟು ಆಳವಿದ್ದು, ಆಯತಪ್ಪಿ ಓರ್ವ ಯುವತಿ ಮುಳುಗಿದ್ದಾಳೆ. ಆ ಯುವತಿಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ. ಮೂವರಿಗೂ ಈಜು ಬರುತ್ತಿರಲಿಲ್ಲ. ಹೀಗಾಗಿ ಸಾವು ಸಂಭವಿಸಿದೆ. ಮೂವರೂ ಮೈಸೂರು ಮೂಲದವರು ಹಾಗೂ ಇಂಜಿನಿಯರಿಂಗ್ ಪೈನಲ್ ಇಯರ್ ಸ್ಟೂಡೆಂಟ್ಸ್ ಆಗಿದ್ದರು.
ಇದನ್ನೂ ಓದಿ: Mangalore News: ರೆಸಾರ್ಟ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರ ಸಾವು