Thursday, 12th December 2024

ಸಾಮೂಹಿಕ ವಿವಾಹ ಬಸವಣ್ಣನವರೆ ಪ್ರಾರಂಭ ಮಾಡಿದ್ದು ಶಿವನಗೌಡ ನಾಯಕ್

ದೇವದುರ್ಗ: ಬಸವಣ್ಣನವರ ಆಶಯದಂತೆ ಬಸವ ತತ್ವದ ಮಾದರಿಯ ಮದುವೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಶ್ರೀ ಗುರು ಬಸವದೇವದರು ಅರಿವಿನಮನೆ ಚಾರಿಟೇಬಲ್ ಟ್ರಸ್ಟ್ ಹಾಗೂ ತಾಲೂಕು ಬಸವ ಕೇಂದ್ರವು ಬಸವ ಜಯಂತಿ ಅಂಗವಾಗಿ ಆಯೋಜಿ ಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ವಿವಾಹ ಹಮ್ಮಿಕೊಳ್ಳ ಲಾಗಿದೆ.

ಬಸವ ತತ್ವದ ಮಾದರಿಯ ಮದುವೆಗಳ ಸಂಖ್ಯೆ ಹೆಚ್ಚಾಗಬೇಕು. ಈ ಮೂಲಕ ಬಸವಣ್ಣನವರ ಮತ್ತು ಅವರ ಸಮಕಾಲೀನರ ವಿಚಾರಧಾರೆಗಳು ಜನರಿಗೆ ಹೆಚ್ಚು ಹೆಚ್ಚು ತಲುಪಬೇಕು. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳವಳಿಯು ಮಹಾನ್ ಕ್ರಾಂತಿಕಾರಕ ಸಂದೇಶ ಸಾರಿದೆ. ಸಾಮಾಜಿಕ ಸಮಾನತೆಗಾಗಿ ಇಡೀ ಜೀವಿತಾವಧಿಯವರೆಗೆ ಬಸವೇಶ್ವರರು ಹೋರಾಟ ಮಾಡಿ ಕಾಯಕ ಮತ್ತು ನಿಜಧರ್ಮದ ಅರ್ಥ ತಿಳಿಸಿದವರು ಎಂದರು.

ಸಾಮೂಹಿಕ ವಿವಾಹ ಸಂದರ್ಭದಲ್ಲಿ 25 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಶಾಸಕ ಕೆ.ಶಿವನಗೌಡ ನಾಯಕ ಅವರು ವಧು-ವರರಿಗೆ ತಾಳಿ, ಬಟ್ಟೆಗಳನ್ನು ದೇಣಿಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಮಠದ ಪೂಜ್ಯರು, ಬಿಜೆಪಿ ಹಿರಿಯ ಮುಖಂಡ ವಿಶ್ವನಾಥ ಬನಹಟ್ಟಿ, ಜಿಪಂ ಮಾಜಿ ಸದಸ್ಯ ಪ್ರಕಾಶ ಪಾಟೀಲ್ ಜೇರಬಂಡಿ, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.