Sunday, 17th November 2024

Master Rohit: ಭೀಕರ ರಸ್ತೆ ಅಪಘಾತ; ʻಕಾಟೇರʼ ಖ್ಯಾತಿಯ ಮಾಸ್ಟರ್‌ ರೋಹಿತ್‌ಗೆ ಗಂಭೀರ ಗಾಯ

Master Rohit

ಮಂಡ್ಯ: ನಟ ದರ್ಶನ್‌ ನಟನೆಯ ʻಕಾಟೇರʼ ಸಿನಿಮಾದಲ್ಲಿ (Kaatera Cinema) ನಟಿಸಿದ್ದ ಬಾಲನಟ ಮಾಸ್ಟರ್‌ ರೋಹಿತ್‌ (Master Rohit) ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ತಮ್ಮ ಕುಟುಂಬಸ್ಥರ ಜೊತೆಗೆ ರೋಹಿತ್‌ ಪ್ರಯಾಣಿಸುತ್ತಿದ್ದ ಕಾರು ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ಕಾರು-ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ರೋಹಿತ್‌ ಗಾಯಗೊಂಡಿದ್ದಾರೆ. ಸದ್ಯ ಮಾಸ್ಟರ್‌ ರೋಹಿತ್‌ಗೆ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಖಾಸಗಿ ಕಾರ್ಯಕ್ರಮ ಮುಗಿಸಿ ವಾಪಸ್ ಮನೆಗೆ ತೆರಳುವಾಗ ಘಟನೆ ನಡೆದಿದೆ, ಘಟನೆಯಲ್ಲಿ ರೋಹಿತ್ ತಾಯಿಯೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನಟ ರೋಹಿತ್ ದಂತದ ವಸಡು ಕಟ್ ಆಗಿ, ತಲೆ ಬುರುಡೆಗೆ ಗಾಯವಾಗಿದೆ. KA11 N 4173 ನಂಬರಿನ ಕಾರಿಗೆ ಟೂರಿಸ್ಟ್‌ ಬಸ್ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ರೋಹಿತ್ ತಾಯಿ ಛಾಯಾಲಕ್ಷ್ಮಿ‌ ಅವರ ಕಾಲು, ಕೈಗಳಿಗೆ ಗಾಯವಾಗಿದೆ. ಕಾರಿನಲ್ಲಿದ್ದ ರೋಹಿತ್ ಗೆಳೆಯ ಹಾಗು ಉಪನ್ಯಾಸಕ ಸೇರಿ‌ ನಾಲ್ವರಿಗೆ ಗಾಯವಾಗಿದ್ದು, ಮೈಸೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮಾಸ್ಟರ್ ರೋಹಿತ್​ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗ್ತಿದೆ.

ಬಾಲನಟ ಮಾಸ್ಟರ್ ರೋಹಿತ್‌ ಅವರು ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ಅಭಿನಯಿಸಿದ್ದರು. ಒಂದಲ್ಲ ಎರಡಲ್ಲ ಸಿನಿಮಾದ ಅಭಿನಯಕ್ಕೆ ಮಾಸ್ಟರ್ ರೋಹಿತ್‌ ರಾಷ್ಟ್ರಪ್ರಶಸ್ತಿ ಪಡೆದಿದ್ರು. ನಟ ರೋಹಿತ್ ಅವರನ್ನು ಈ ಹಿಂದೆ ದರ್ಶನ್ ಕೂಡ ವೇದಿಕೆ ಮೇಲೆ ಕೊಂಡಾಡಿದ್ರು. ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದುಕೊಂಡಿದ್ದರು.

ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿಸಿದ್ದಾರೆ. ಯಾವುದೋ ಕಾರ್ಯಕ್ರಮಕ್ಕೆ ತೆರಳಿದ್ದ ಇವರು ಮತ್ತೆ ತಮ್ಮ ಮನೆಗೆ ವಾಪಸ್ ಬರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. KA11 N 4173 ನಂಬರಿನ ಕಾರಿನಲ್ಲಿ ಇವರು ಬರುತ್ತಿರುವಾಗ ಟೂರಿಸ್ಟ್‌ ಬಸ್ ಒಂದು ಇವರ ಕಾರಿಗೆ ಡಿಕ್ಕಿಯಾಗಿದೆ.

ಈ ಸುದ್ದಿಯನ್ನೂ ಓದಿ: Railway Accident: ಇತ್ತೀಚಿಗೆ ರೈಲು ಅಪಘಾತಗಳು ಹೆಚ್ಚುತ್ತಿರುವುದೇಕೆ?