Friday, 22nd November 2024

MB Patil: ಕರ್ನಾಟಕ ಪ್ರಗತಿ ಕೇಂದ್ರಿತ ಹೊಸ ಕೈಗಾರಿಕಾ ನೀತಿ ರಚನೆ: ಎಂ.ಬಿ. ಪಾಟೀಲ್‌

MB Patil

ಬೆಂಗಳೂರು: ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ (ರೂ 85 ಲಕ್ಷ ಕೋಟಿ) ಆರ್ಥಿಕತೆಯಾಗಿ ಬೆಳೆಸುವ ಗುರಿಯೊಂದಿಗೆ ಉದ್ಯಮ ಪರಿಣತರ ಅಭಿಪ್ರಾಯ ಆಧರಿಸಿ 2025-30 ರ ಅವಧಿಗೆ ಪ್ರಗತಿ ಕೇಂದ್ರಿತ ಕೈಗಾರಿಕಾ ನೀತಿ ರೂಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ಹೇಳಿದರು. ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾ (ಆಮ್ ಚಾಮ್) ಇಲ್ಲಿ‌ನ ಹೋಟೆಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ “ಪರಿವರ್ತನೆಯಾಗುತ್ತಿರುವ ಕರ್ನಾಟಕ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉದ್ದಿಮೆದಾರರು ನೀತಿ ರೂಪಿಸುವಲ್ಲಿ ಸಹಕರಿಸಿ

ಅಗತ್ಯಕ್ಕೆ ತಕ್ಕಂತೆ ಆಗಾಗ್ಗೆ ತಿದ್ದುಪಡಿಗೆ ಅವಕಾಶ ಇರುವ ಹಾಗೆ ನೀತಿ ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ವಲಯಗಳ ಉದ್ದಿಮೆದಾರರು ನೀತಿ ರೂಪಿಸುವಲ್ಲಿ ಸಹಕರಿಸಬೇಕು. ಎಲ್ಲಾ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ ಮುಂದುವರಿಸಲಾಗುವುದು ಎಂದು ಸಚಿವರು ಹೇಳಿದರು.

ಈ ಸುದ್ದಿಯನ್ನೂ ಓದಿ | Gruhalakshmi Scheme: ಮಂಟೂರು ಗ್ರಾಮದಲ್ಲಿ ನಿರ್ಮಾಣಗೊಂಡಿದೆ ಗೃಹಲಕ್ಷ್ಮೀ ಗ್ರಂಥಾಲಯ

ಆರ್ಥಿಕತೆಯ ಗುರಿಗೆ ಅನುಗುಣವಾಗಿ ಹೆಚ್ಚಿನ ಸಹಭಾಗಿತ್ವಗಳನ್ನು ಸಾಧಿಸಲಾಗುವುದು. ಜತೆಗೆ, ಮೂಲಸೌಕರ್ಯ, ಕೌಶಲಾಭಿವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿನ ಕೊರತೆಗಳನ್ನು ನಿವಾರಿಸಲು ಒತ್ತು ನೀಡಲಾಗುವುದು ಎಂದರು

ಗುರಿ ಕೇಂದ್ರಿತ ತರಬೇತಿ ನೀಡಲು ವ್ಯವಸ್ಥೆ

ಹೊಸದಾಗಿ ಸ್ಥಾಪನೆಯಾಗುತ್ತಿರುವ ಉದ್ದಿಮೆಗಳ ಬೇಡಿಕೆಗಳನ್ನು ಈಡೇರಿಸಲು ನಮ್ಮ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲು ಗಮನ ಕೇಂದ್ರೀಕರಿಸಲಾಗುವುದು. ಸರ್ಕಾರಿ ಸಂಸ್ಥೆಗಳ ನೆರವಿನಿಂದ ಸಮಗ್ರ ಕೌಶಲ ಕೊರತೆ ಅಧ್ಯಯನ ಕೈಗೊಳ್ಳಲಾಗುವುದು. ಈ ಮೂಲಕ, ಪ್ರಸ್ತುತ ಇರುವ ಕೌಶಲಗಳು ಯಾವುವು ಹಾಗೂ ಉದ್ದಿಮೆಗಳಿಗೆ ಅಗತ್ಯವಿರುವ ಕೌಶಲಗಳು ಯಾವುವು ಎಂಬುದನ್ನು ಗುರುತಿಸಲಾಗುವುದು. ಇದನ್ನು ಆಧರಿಸಿ ಗುರಿ ಕೇಂದ್ರಿತ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಎಲ್ಲರನ್ನೂ ಒಳಗೊಳ್ಳುವಂತಹ ಪ್ರಗತಿ ಸಾಧಿಸುವುದು ನಮ್ಮ ಉದ್ದೇಶ

ಕೇವಲ ಆರ್ಥಿಕ ಬೆಳವಣಿಗೆ‌ ಮಾತ್ರವಲ್ಲದೆ ನಮ್ಮ ವಿವಿಧ ಸಮುದಾಯಗಳ ಜನರನ್ನು ಮೇಲೆತ್ತುವಂತಹ ಅವಕಾಶಗಳ ಸೃಷ್ಟಿಗೆ ಸರ್ಕಾರ ಆದ್ಯತೆ ನೀಡಲಿದೆ. ಯುವ ಜನತೆಯ ಸಬಲೀಕರಣದ ಮೂಲಕ ರಾಜ್ಯದಲ್ಲಿ ಎಲ್ಲರನ್ನೂ ಒಳಗೊಳ್ಳುವಂತಹ ಪ್ರಗತಿ ಸಾಧಿಸುವುದು ನಮ್ಮ ಉದ್ದೇಶವಾಗಿದೆ. ಉದ್ಯಮದ ನಿರೀಕ್ಷೆ ಹಾಗೂ ನಾಗರಿಕರ ನಿರೀಕ್ಷೆ‌ ಇವೆರಡಕ್ಕೂ ಸರಿಹೊಂದುವಂತಹ ಪರಿಸರ ಸೃಷ್ಟಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Railway Accident: ಇತ್ತೀಚಿಗೆ ರೈಲು ಅಪಘಾತಗಳು ಹೆಚ್ಚುತ್ತಿರುವುದೇಕೆ?

ಈ ಸಂದರ್ಭದಲ್ಲಿ ಅಮೆರಿಕ ಚೇಂಬರ್ ಆಫ್ ಕಾಮರ್ಸ್ ಇನ್ ಇಂಡಿಯಾ (ಆಮ್ ಚಾಮ್) ರಂಜನಾ ಖನ್ನಾ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್. ಸೆಲ್ವಕುಮಾರ್ ಸೇರಿದಂತೆ ವಿವಿಧ ಉದ್ಯಮಗಳ ಪ್ರತಿನಿಧಿಗಳು ಇದ್ದರು.