Friday, 1st November 2024

ಬಿಜೆಪಿ ಬೆಳವಣಿಗೆ: ನನಗೂ ಬೇಸರವಿದೆ- ಸಿ.ಟಿ.ರವಿ

‘ಬಿಜೆಪಿಯ ಇತ್ತೀಚಿನ ಬೆಳವಣಿಗೆಯಿಂದ ನನಗೂ ಬೇಸರವಾಗಿದೆ. ಇದರ ಶಮನಕ್ಕೆ ಪಾರದರ್ಶಕ ಮತ್ತು ಜನಕೇಂದ್ರಿತ ಆಡಳಿತ ಮಾತ್ರ ಪರಿಹಾರ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ‘ವಿಶ್ವವಾಣಿ’ ಸುದ್ದಿ ಸಂಪಾದಕ ಶಿವಕುಮಾರ್ ಬೆಳ್ಳಿತಟ್ಟೆ ಅವರೊಂದಿಗೆ ಮಾತನಾಡಿದ್ದು, ಈ ಸಂದರ್ಭದಲ್ಲಿ ಪಕ್ಷದಲ್ಲಿನ ಅತೃಪ್ತಿಯ ಬೆಳವಣಿಗೆ ಮತ್ತು ಮುಂಬರುವ ತಮಿಳುನಾಡು ಹಾಗೂ ಗೋವಾ ಚುನಾವಣೆಗಳ ತಯಾರಿ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ನೀವು ರಾಷ್ಟ್ರೀಯ ಸಂಘಟನೆಗೆ ಹೋಗಿದ್ದಿರಿ. ನಿಮ್ಮದೇ ಅಜೆಂಡಾ ಏನಾದರೂ ಇದೆಯೇ?
ನಾನು ಹಿಂದಿನಿಂದಲೂ ಸಂಘಟನೆಯಲ್ಲಿ ಇದ್ದವನು. ಹಾಗೆಯೇ ಪಕ್ಷದ ಎಲ್ಲ ನಾಯಕರೂ ಸಂಘಟನೆಯಲ್ಲಿ ಕಾರ್ಯಕರ್ತರಾಗಿ ಬಂದವರು. ಅದೇ ರೀತಿ ನಾನು ಸಂಘಟನೆಗೆ ಒತ್ತು ನೀಡುವುದನ್ನು ಬಿಟ್ಟರೆ ಯಾವುದೇ ಅಜೆಂಡಾ ಇಲ್ಲ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಮ್ಮ ನೇತೃತ್ವದಲ್ಲಿ ತಂದ ಬದಲಾವಣೆ ಏನು?
ತಮಿಳುನಾಡಿನಲ್ಲಿ ಜನಪರ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಿದ್ದೇವೆ. ಅನೇಕ ಧಾರ್ಮಿಕ ಮತ್ತು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆ ಎತ್ತಿ ಹಿಡಿಯುವ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಈ ಮೂಲಕ ಡಿಎಂಕೆ ಪಕ್ಷ ಕೂಡ ನಮ್ಮ ವಿಚಾರಗಳಿಗೆ ತಿರುಗುವಂತೆ ಮಾಡಿದ್ದೇವೆ. ಇದೇ ರೀತಿ ಗೋವಾದಲ್ಲೂ ಅನೇಕ ಕಾರ್ಯಕ್ರಮಗಳ ಮೂಲಕ ಪಕ್ಷ ಬಲಪಡಿಸಿ ಇನ್ನೊಂದು ವರ್ಷದಲ್ಲಿ ನಡೆಯುವ
ಚುನಾವಣೆಗೆ ತಯಾರಿ ಮಾಡಿದ್ದೇವೆ.

ಮಹಾರಾಷ್ಟ್ರದಲ್ಲಿ ನೀವೇಕೆ ಕನ್ನಡಿಗರ ಅಭಿವೃದ್ಧಿ ಪ್ರಾಧಿಕಾರಕ್ಕೆ ಒತ್ತಾಯಿಸಬಾರದು ?
ಹೌದು. ರಾಜ್ಯದಲ್ಲಿ ಮರಾಠಿಗರ ಅಭಿವೃದ್ಧಿಗೆ ಸರಕಾರ ಪ್ರಾಧಿಕಾರ ರಚಿಸಿದೆ. ಅದೇ ರೀತಿ ಮಹಾರಾಷ್ಟ್ರ ಕೂಡ ಕನ್ನಡಿಗರಿಗಾಗಿ ಪ್ರಾಧಿಕಾರ ರಚಿಸಲು ಮುಂದಾಗಲಿ. ಈ ನಿಟ್ಟಿನಲ್ಲಿ ಶಿವಸೇನೆ ಕ್ರಮ ಕೈಗೊಳ್ಳಬೇಕು.

ತಮಿಳುನಾಡು ಚುನಾವಣೆಗೆ ಬಿಜೆಪಿ ಸಿದ್ಧತೆ ಹೇಗಿದೆ?  ಶಶಿಕಲಾ ಪುನರ್ ಪ್ರವೇಶದ ಬಗ್ಗೆೆ ಏನಂತೀರಿ?
ಮುಂಬರುವ ತಮಿಳುನಾಡು ಚುನಾವಣೆಗೆ ನಮ್ಮ ಪಕ್ಷ ಅಲ್ಲಿನ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಆದರೆ ಎಷ್ಟು ಸ್ಥಾನಗಳ ಹೊಂದಾಣಿಕೆ ಎನ್ನುವ ನಿರ್ಧಾರ ಆಗಿಲ್ಲ. ಇನ್ನು ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಅವರ ಬಿಡುಗಡೆ ನಂತರ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುವುದೋ ಗೊತ್ತಿಲ್ಲ. ಏಕೆಂದರೆ ಶಶಿಕಲಾ ಪುನರ್ ಪ್ರವೇಶವನ್ನು ಎಐಎಡಿಎಂಕೆ ಯಾವ ರೀತಿ ಸ್ವೀಕರಿಸುತ್ತದೆ ಎನ್ನುವುದನ್ನು ನೋಡಿ ನಾವು ಅವರನ್ನು ಅನುಸರಿಸುತ್ತೇವೆ.

ರಾಜ್ಯ ಬಿಜೆಪಿ ಒಳಗಿನ ಅತೃಪ್ತಿ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಮ್ಮ ನಿಲುವೇನು ?
ಸಚಿವ ಸ್ಥಾನ ವಿಚಾರವಾಗಿ ಆಕಾಂಕ್ಷಿಗಳಲ್ಲಿ ಅತೃಪ್ತಿ ಆಗುವುದು ಸಹಜ. ಇದನ್ನು ನಿವಾರಿಸಬೇಕಾದರೆ ಸರಕಾರ ಜನ ಕೇಂದ್ರವಾಗಬೇಕು. ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ನಡೆಸಬೇಕು. ಆ ನಿಟ್ಟಿನಲ್ಲಿ ಯಡಿಯೂರಪ್ಪ ಕ್ರಮ ಕೈಗೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ.

ನಾಯಕತ್ವ ಬದಲಾವಣೆ ಪ್ರಸ್ತಾಪ, ಅತೃಪ್ತರ ಸಭೆ ಇದು ಸರಿಯೇ? ನೀವೇಕೆ ಸಿಎಂ ಔತಣಕೂಟಕ್ಕೆ ಹೋಗಿಲ್ಲ?
ಕಾರ್ಯಭಾರದ ಹೊರೆಯಿಂದಾಗಿ ನಾನು ಮುಖ್ಯಮಂತ್ರಿಗಳು ಕರೆದ ಔತಣಕೂಟಕ್ಕೆ ಹೋಗಿಲ್ಲ. ಆದರೆ ಬಿಜೆಪಿಯಲ್ಲಿನ ಅತೃಪ್ತಿಯ ಬೆಳವಣಿಗೆ ಬಗ್ಗೆ ನನಗೂ ಬೇಸರವಿದೆ. ಕೇವಲ ಮಾತುಕತೆ ಮೂಲಕ ಅತೃಪ್ತಿ ಸರಿಪಡಿಸಲು ಸಾಧ್ಯವಿಲ್ಲ. ಏಕೆಂದರೆ ವ್ಯಕ್ತಿಗತ ತೃಪ್ತಿಯಿಂದ ಸಮಸ್ಯೆ ಬಗೆಹರಿಯದು. ಇದೆಲ್ಲವನ್ನೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗಮನಿಸುತ್ತಿದ್ದಾರೆ. ಸೂಕ್ತ ಕಾಲದಲ್ಲಿ ಉತ್ತರಿಸುತ್ತಾರೆ.

ಮಹಾರಾಷ್ಟ್ರದ ಉಸ್ತುವಾರಿಯಾದ ನೀವು, ಗಡಿ ತಂಟೆ ಬಗ್ಗೆ ಏಕೆ ಮೌನ?
ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಸರಕಾರದಲ್ಲಿ ಹಾವು- ಮುಂಗುಸಿ ಆಟ ನಡೆಯುತ್ತಿದೆ. ಈ ದೋಸ್ತಿ ಸರಕಾರ ಎಷ್ಟು ದಿನ ಇರುವುದು
ಗೊತ್ತಿಲ್ಲ. ಸದ್ಯದಲ್ಲೇ ಪಕ್ಷದ ಚಿಂತನಾ ಬೈಠಕ್ ನಡೆಯಲಿದ್ದು, ಆ ನಂತರ ಪಕ್ಷ ಮಾತನಾಡುತ್ತದೆ.