Sunday, 15th December 2024

Media Awards: 5000 ರೂ. ಹೆಚ್ಚು ಕೊಟ್ಟರೆ ಬೇರೆ ಪತ್ರಿಕೆಗೆ ಜಿಗಿಯುವ ಇಂದಿನ ಪತ್ರಕರ್ತರು ಟಿಎಸ್‌ಆರ್‌, ಹಣಮಂತರಾಯರ ಹಾದಿ ಗಮನಿಸಬೇಕು: ವಿಶ್ವೇಶ್ವರ ಭಟ್

Media Awards

ಬೆಂಗಳೂರು: ಹಲವು ವರ್ಷಗಳ ಕಾಲ ಒಂದೇ ಪತ್ರಿಕೆಯಲ್ಲಿ ಸೇವೆ ಮಾಡಿದ ಟಿ.ಎಸ್. ರಾಮಚಂದ್ರರಾವ್ (ಟಿಎಸ್‌ಆರ್) ಹಾಗೂ ಮೊಹರೆ ಹಣಮಂತರಾಯರು ತಮ್ಮ ವೃತ್ತಿ ಬದ್ಧತೆಯಿಂದ ಮಾದರಿಯಾಗಿದ್ದಾರೆ. 5000 ರೂ. ಜಾಸ್ತಿ ಕೊಟ್ಟರೆ ಬೇರೆ ಪತ್ರಿಕೆಗಳ ಕಡೆ ಮುಖ ಮಾಡುವ ಇಂದಿನ ಪತ್ರಕರ್ತರಿಗೆ (Media Awards) ದಾರಿ ದೀಪವಾಗುತ್ತಾರೆ ಎಂದು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಹೇಳಿದರು.

ಬೆಂಗಳೂರಿನ ಪ್ರೆೆಸ್ ಕ್ಲಬ್‌ನಲ್ಲಿ ಕೆಯುಡಬ್ಲ್ಯುಜೆ ಹಾಗೂ ಪ್ರೆೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಟಿಎಸ್‌ಆರ್ ಹಾಗೂ ಮೊಹರೆ ಹನುಮಂತರಾಯ ಪ್ರಶಸ್ತಿ (TSR and Mohare Hanumantharaya Award) ಪುರಸ್ಕೃತರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಫಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಟಿ.ಎಸ್.ಆರ್ ಬಿಡುವಿನ ವೇಳೆಯಲ್ಲಿ ಪತ್ರಿಕೆಗಳನ್ನು ಓದಿ ಅಕ್ಷರ ಪ್ರೇಮ ಬೆಳೆಸಿಕೊಂಡು, ನಂತರ ಪ್ರಜಾವಾಣಿಯ ಸಂಪಾದಕರಾಗುವ ಮಟ್ಟಕ್ಕೆೆ ಬೆಳೆದರು ಎಂಬ ಸಂಗತಿ ತಿಳಿಸಿದರು.

ಪತ್ರಿಕೆ ರದ್ದಿಗೆ ಹಾಕಿ ದಿನಸಿ ತಂದಿದ್ದರು!

ಟಿ.ಎಸ್‌.ಆರ್‌ ಅವರ ಮನೆಯಲ್ಲಿ ಇದ್ದ ಒಂದು ಚೇರ್‌ಗೆ ಮೂರು ಕಾಲು ಮಾತ್ರ ಇತ್ತು. ಪತ್ರಿಕೆಗಳ ಸಹಾಯದಿಂದ ನಾಲ್ಕನೇ ಕಾಲು ಮಾಡಿದ್ದರು. ಆದರೆ ದಿನಸಿಗೂ ಇಲ್ಲದ ಪರಿಸ್ಥಿತಿ ನಿರ್ಮಾಣವಾದಾಗ ನಾಲ್ಕನೇ ಕಾಲಿನಲ್ಲಿದ್ದ ಪ್ರಜಾವಾಣಿ ಪತ್ರಿಕೆಯನ್ನು ರದ್ದಿಗೆ ಹಾಕಿ, ಅದರಲ್ಲಿ ಬಂದಂತಹ ಹಣದಿಂದ ದಿನಸಿ ತಂದಿದ್ದರು ಎಂಬ ಕಷ್ಟದ ದಿನಗಳ ಬಗ್ಗೆೆ ತಮ್ಮ ಆತ್ಮಕಥನದಲ್ಲಿ ಬರೆದ ಸಾಲುಗಳನ್ನು ವಿಶ್ವೇಶ್ವರ ಭಟ್ ಮೆಲುಕು ಹಾಕಿ ಗಮನ ಸೆಳೆದರು.

ಸಂಬಳಕ್ಕಾಗಿ ಪತ್ನಿಯ ಒಡವೆ ಅಡವಿಟ್ಟರು

ಮೊಹರೆ ಹಣಮಂತರಾಯರು ಸಂಯುಕ್ತ ಕರ್ನಾಟಕ, ಕರ್ಮವೀರ ಸೇರಿ ವಿವಿಧ ಪತ್ರಿಕೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಆ ಕಾಲದಲ್ಲಿ ಪ್ರತಿ ತಿಂಗಳು ಸರಿಯಾಗಿ ಸಂಬಳ ಬರುತ್ತಿತ್ತು. ಆದರೆ ಒಂದು ಬಾರಿ ಒಂದು ತಿಂಗಳು ಸಂಬಳ ಬರಲು ವಿಳಂಬವಾದಾಗ ಎಲ್ಲರೂ ಮೊಹರೆ ಹಣಮಂತರಾಯರ ಬಳಿ ದೂರು ನೀಡಿದರು. ಆಗ ಉಪ ಸಂಪಾದಕರಿಗೆ 8 ರೂಪಾಯಿ ಸೇರಿ ಎಲ್ಲಾ ಸಿಬ್ಬಂದಿಗೆ ಒಟ್ಟು 40 ರೂಪಾಯಿ ಬೇಕಿತ್ತು. ಆಗ ಪತ್ನಿಯ ಬಂಗಾರವನ್ನು ಅಡವಿಟ್ಟು ತಮ್ಮ ಬಳಿ ಇದ್ದ 11 ರೂಪಾಯಿ ಸೇರಿಸಿ ಎಲ್ಲರಿಗೂ ಮೊಹರೆ ಹಣಮಂತರಾಯರು ಸಂಬಳ ನೀಡಿದ್ದರು. ಅವರು ಹೊತ್ತಿಸಿದ ಜ್ಯೋತಿಯಿಂದ ಇಂದು ಸಂಯುಕ್ತ ಕರ್ನಾಟಕ ನಡೆದುಕೊಂಡು ಬರುತ್ತಿದೆ ಎಂದರು.

ಕರ್ನಾಟಕ ಪುಲಿಟ್ಜರ್ ಪ್ರಶಸ್ತಿ

ಕರ್ನಾಟಕ ಸರಕಾರ ಟಿಎಸ್‌ಆರ್ ಹಾಗೂ ಮೊಹರೆ ಹಣಮಂತರಾಯ ಪ್ರಶಸ್ತಿ ಘೋಷಿಸಲು ಐದು ವರ್ಷ ತೆಗೆದುಕೊಂಡಿದ್ದು ಬೇಸರದ ಸಂಗತಿಯಾಗಿದೆ. ಪ್ರಶಸ್ತಿಗೆ ಅದರದೇ ಆದ ಘನತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೋಸೆಫ್ ಪುಲಿಟ್ಜರ್ ಪ್ರಶಸ್ತಿಯಂತೆ ಕರ್ನಾಟಕದಲ್ಲಿ ಟಿಎಸ್‌ಆರ್ ಹಾಗೂ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಮಹತ್ವವಿದ್ದು, ಮುಂದಿನ ದಿನಗಳಲ್ಲಿ ಸರಕಾರ ತಡ ಮಾಡದೇ ಪ್ರಶಸ್ತಿಗಳನ್ನು ಆಯಾ ವರ್ಷವೇ ಘೋಷಿಸುವಂತೆ ಒತ್ತಾಯಿಸಿದರು.

ಎಷ್ಟೋ ಮಂದಿಯ ನಿಧನ ವಾರ್ತೆ ಬರೆದಂತಹ ಪತ್ರಕರ್ತರು ಮೃತಪಟ್ಟಾಗ ಗುರುತಿಸುವುದೇ ವಿರಳ. ಕೇವಲ ಎಲ್ಲೋ ಒಂದೆಡೆ ಒಂದು ಪ್ಯಾರಾ ಬರೆದು ಸುಮ್ಮನಾಗುವ ಪರಿಸ್ಥಿತಿ ಇದೆ. ಅದಕ್ಕೆೆ ಇತ್ತೀಚೆಗಷ್ಟೇ ನಿಧನರಾದ ವಸಂತ ನಾಡಿಗೇರ ಸುದ್ದಿಗೆ ಪ್ರಾಮುಖ್ಯತೆ ನೀಡಿ, ಎರಡು ಪುಟಗಳಷ್ಟು ಸುದ್ದಿ ವಿಶ್ವವಾಣಿಯಲ್ಲಿ ಪ್ರಕಟಿಸಿ ಅವರ ಸೇವೆಗೆ ಮನ್ನಣೆ ನೀಡಿದೆವು. ಆದರೆ ಅವರೇ ಸಂಪಾದಕರಾಗಿದ್ದ ಪತ್ರಿಕೆ ಕೇವಲ ಅರ್ಧ ಪುಟ ಮೀಸಲಿರಿಸಿತ್ತು. ಇದು ಪತ್ರಕರ್ತರ ವೃತ್ತಿ ನಂತರದ ಕರಾಳ ಮುಖ ಎಂದು ವಿಶ್ವೇಶ್ವರ ಭಟ್ಟರು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಿವಾಜಿ ಎಸ್‌ ಗಣೇಶನ್‌, ಶ್ರೀಕಾಂತಾಚಾರ್ಯ ಆರ್‌ ಮಣೂರ, ಡಾ ಆರ್‌ ಪೂರ್ಣಿಮಾ, ಪದ್ಮರಾಜ ದಂಡಾವತಿ ಮತ್ತು ಡಾ ಸರಜೂ ಕಾಟ್ಕರ್‌ ಅವರಿಗೆ ಟಿಎಸ್‌ಆರ್‌ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜೀವ ಕಿದಿಯೂರ, ಇಂಧೂಧರ ಹೊನ್ನಾಪುರ, ಎನ್‌ ಮಂಜುನಾಥ, ಚಂದ್ರಶೇಖರ್‌ ಪಾಲೆತ್ತಾಡಿ ಮತ್ತು ಶಿವಲಿಂಗಪ್ಪ ದೊಡ್ಡಮನಿ ಅವರಿಗೆ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು, ಪೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆೆ ಮತ್ತಿತರರು ಉಪಸ್ಥಿತರಿದ್ದರು.

ವಿಜ್ಞಾನ-ತಂತ್ರಜ್ಞಾನ ಬದಲಾದಂತೆ ನಾವು ಬದಲಾಗಬೇಕು. ನಮ್ಮನ್ನು ನಾವು ಮೊದಲು ಅರಿಯಬೇಕು. 2040ಕ್ಕೆ ಮಾನವನನ್ನು ಚಂದ್ರ, ಮಂಗಳ ಗ್ರಹಕ್ಕೆ ಕರೆದುಕೊಂಡು ಹೋಗುವ ಮಾತುಗಳು ಕೇಳಿ ಬರುತ್ತಿವೆ. ವಿಜ್ಞಾನ- ತಂತ್ರಜ್ಞಾನ ಎಷ್ಟು ವೇಗವಾಗಿ ಮುಂದುವರಿಯುತ್ತಿದೆ. ಹೀಗಾಗಿ ಮನುಷ್ಯ ತನ್ನ ಜೀವನದಲ್ಲಿ ನಿರಂತರ ಬದಲಾವಣೆಯಾಗಿ ಆತ ಯೋಚನೆಯ ದೃಷ್ಟಿಕೋನ ಬದಲಾಗಬೇಕು. ಆಗ ಮಾತ್ರ ಮನುಷ್ಯನಿಗೆ ಹೆಚ್ಚು ಬೆಲೆ ಸಿಗುತ್ತದೆ.
|
ಕಿರಣ್ ಕುಮಾರ್, ಇಸ್ರೋ ಮಾಜಿ ಮುಖ್ಯಸ್ಥ

ಈ ಸುದ್ದಿಯನ್ನೂ ಓದಿ | Vishweshwar Bhat Column: ಹಿಂದಕ್ಕೆ ಬರಲಾಗದ, ಮುಂದ‌ಕ್ಕೆ ಹೋಗಲಾಗದ, ಇದ್ದಲ್ಲಿ ಇರಲಾಗದ ಸ್ಥಿತಿ