Sunday, 24th November 2024

Mirror in Lift: ಲಿಫ್ಟ್ ಒಳಗೆ ಕನ್ನಡಿ ಏಕೆ ಇಡ್ತಾರೆ? ಇದರ ಹಿಂದಿರುವ ಕಾರಣ ಗೊತ್ತಾ?

Mirror in Lift

ಬೆಂಗಳೂರು: ನೀವು ಯಾವುದೇ ಬಿಲ್ಡಿಂಗ್‍ ಅಥವಾ ಮಾಲ್‍ನ ಲಿಫ್ಟ್‌ನೊಳಗೆ ಪ್ರವೇಶಿಸಿದಾಗ, ಒಳಗೆ ಕನ್ನಡಿಗಳನ್ನು ಹಾಕಿರುವುದನ್ನು ನೀವು ಗಮನಿಸಬಹುದು. ಲಿಫ್ಟ್‌ನಲ್ಲಿರುವವರು ಕೆಲವೊಮ್ಮೆ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಂಡು  ಕೂದಲನ್ನು ಸರಿಪಡಿಸಿಕೊಳ್ಳುವುದು, ತಮ್ಮ ಡ್ರೆಸ್‍ ಸರಿಮಾಡಿಕೊಳ್ಳುವುದು ಮಾಡುತ್ತಾರೆ. ಆದರೆ ಲಿಫ್ಟ್‌ನಲ್ಲಿ ಕನ್ನಡಿಯನ್ನು ಯಾವ ಉದ್ದೇಶಕ್ಕಾಗಿ ಹಾಕಿದ್ದಾರೆ ಎಂಬುದನ್ನು ಎಂದಾದರೂ ಯೋಚನೆ ಮಾಡಿದ್ದೀರಾ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವರದಿಗಳ ಪ್ರಕಾರ, ಲಿಫ್ಟ್‌ಗಳಲ್ಲಿ  ಕನ್ನಡಿಗಳು ಕೇವಲ ಅಲಂಕಾರಕ್ಕಾಗಿ ಅಥವಾ ಜನರಿಗೆ ತಮ್ಮ ಸೌಂದರ್ಯವನ್ನು ನೊಡಿಕೊಳ್ಳಲು ಅಲ್ಲ. ಲಿಫ್ಟ್‌ಗಳಲ್ಲಿ ಕನ್ನಡಿಗಳನ್ನು ಸಾಮಾನ್ಯವಾಗಿ ಏಕೆ ಹಾಕಲಾಗುತ್ತದೆ ಎಂಬುದಕ್ಕೆ ಹಲವು ಕಾರಣಗಳಿವೆ.

Mirror in Lift

ಮಾನಸಿಕ ಆರೋಗ್ಯಕ್ಕಾಗಿ:

ಲಿಫ್ಟ್‌ಗಳಂತಹ ಮುಚ್ಚಿದ, ಸಣ್ಣ ಸ್ಥಳಗಳಲ್ಲಿ ಅನೇಕ ಜನರು ಕ್ಲಾಸ್ಟ್ರೋಫೋಬಿಯಾ ಅಥವಾ ಆತಂಕದ ಭಾವನೆಗಳನ್ನು ಅನುಭವಿಸುತ್ತಾರೆ. ಅಲ್ಲಿ ಕನ್ನಡಿಗಳನ್ನು ಹಾಕಿರುವುದರಿಂದ ಅಂತವರಿಗೆ ಇಲ್ಲಿ ಹೆಚ್ಚಿನ ಸ್ಥಳವಿದೆ ಎಂಬ  ಭ್ರಮೆಯನ್ನು ಸೃಷ್ಟಿಸುತ್ತದೆ. ಇದರಿಂದ ಆತಂಕ ಕಡಿಮೆಯಾಗುತ್ತದೆ ಮತ್ತು ಸಣ್ಣ ಸ್ಥಳದಲ್ಲಿ ಉಸಿರುಗಟ್ಟಿದ ಅನುಭವಕ್ಕೊಳಗಾಗುವವರು  ಇಲ್ಲಿ ಆರಾಮದಾಯಕವಾಗಿರಬಹುದು.

ಸುರಕ್ಷತೆ ಮತ್ತು ಭದ್ರತೆ:

ಕನ್ನಡಿಗಳು ಪ್ರಯಾಣಿಕರಿಗೆ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಅನುವು ಮಾಡಿಕೊಡುತ್ತದೆ, ಅವರ ಹಿಂದೆ ಮುಂದೆ ಯಾರು ಇದ್ದಾರೆ ಎಂಬುದನ್ನು ಕನ್ನಡಿಯ ಮೂಲಕ ತಿಳಿಯಬಹುದು. ಇದು ಜನರಿಗೆ ಸುರಕ್ಷಿತ ಭಾವನೆಯನ್ನು ಉಂಟುಮಾಡುತ್ತದೆ. ಲಿಫ್ಟ್ ಹೆಚ್ಚು ಪಾರದರ್ಶಕವಾಗಿದೆ ಎಂಬ ಭಾವನೆಯನ್ನು ಇದು ನೀಡುತ್ತದೆ, ಮತ್ತು ಕೆಲವರು ಅನುಚಿತವಾಗಿ ವರ್ತಿಸುವುದನ್ನು ತಡೆಯುತ್ತದೆ.

ವಿಕಲಚೇತನರಿಗೆ ಸಹಾಯ:

ಗಾಲಿಕುರ್ಚಿಗಳಲ್ಲಿ ಚಲಿಸುವವರು ಹಾಗೂ ಅಂಗವಿಕಲರಿಗೆ ಕನ್ನಡಿಗಳು ಹೆಚ್ಚು ಸುಲಭವಾಗಿ ಹೋಗಲು ಸಹಾಯ ಮಾಡುತ್ತವೆ. ಗಾಲಿಕುರ್ಚಿಯಲ್ಲಿರುವ ವ್ಯಕ್ತಿಯು ಲಿಫ್ಟ್‌ನಿಂದ ಹಿಂದೆ ಸರಿಯುವಾಗ ಹಿಂದೆ ಏನಿದೆ ಎಂದು ನೋಡಬೇಕಾಗಿಲ್ಲ ಅವರ ಹಿಂದೆ ಏನಿದೆ ಎಂದು ನೋಡಲು ಕನ್ನಡಿ ಅನುವು ಮಾಡಿಕೊಡುತ್ತದೆ.

Mirror in Lift

ಗೊಂದಲಗಳನ್ನು ಕಡಿಮೆ ಮಾಡುತ್ತದೆ:

ಲಿಫ್ಟ್‌ನೊಳಗೆ ಇರುವಷ್ಟು  ಸಮಯ ತಾಳ್ಮೆಯಿಂದ ಇರಲು ಕೆಲವರಿಗೆ ಸಾಧ‍್ಯವಿಲ್ಲ. ಹಾಗಾಗಿ ಅಂತವರು ಕನ್ನಡಿಯನ್ನು ನೋಡುವುದರಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಸಹಾಯ ಮಾಡುತ್ತದೆ. ಅವರ ಪ್ರತಿಬಿಂಬವನ್ನು ನೋಡಿಕೊಳ್ಳುವುದರಲ್ಲೇ ಸಮಯ ಕಳೆಯುತ್ತಾರೆ.  

ಇದನ್ನೂ ಓದಿ: ಕಾರಿಡಾರ್‌ನಲ್ಲಿ ನಿಂತಿದ್ದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ; ಆಘಾತಕಾರಿ ವಿಡಿಯೊ

ಇನ್ನು ಲಿಫ್ಟ್‌ಗಳಲ್ಲಿ  ಕನ್ನಡಿಗಳನ್ನು ಕಡ್ಡಾಯಗೊಳಿಸುವಂತೆ ಎಲಿವೇಟರ್ ಅಸೋಸಿಯೇಷನ್ ಆಫ್ ಜಪಾನ್ ತಿಳಿಸಿದ್ದು, ಇದರ ಮಾರ್ಗಸೂಚಿಯಲ್ಲಿ ಇದರ ಪ್ರಯೋಜನಗಳ ಬಗ್ಗೆ ತಿಳಿಸಿದೆ. ಲಿಫ್ಟ್‌ಗಳಲ್ಲಿ ಕನ್ನಡಿಗಳನ್ನು ಹಾಕುವುದರಿಂದ  ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುವಲ್ಲಿ, ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ಒಟ್ಟಾರೆ ಎಲಿವೇಟರ್ ಅನುಭವವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎನ್ನಲಾಗಿದೆ.