ಕಂದಾಯ, ಸಮಾಜ ಕಲ್ಯಾಣ, ಸಹಕಾರ ಸಚಿವರ ವಿರುದ್ಧ ದೂರು
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ರಾಜ್ಯ ಸರಕಾರಲ್ಲಿ ಪರ್ಸೆಂಟೇಜ್ ಸಚಿವರು ಹೆಚ್ಚಾಗುತ್ತಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕರೇ ಮುಖ್ಯಮಂತ್ರಿ ಎದುರು ಗಂಭೀರವಾಗಿ ಆರೋಪ ಮಾಡಿರುವುದು ಬೆಳಕಿಗೆ ಬಂದಿದೆ.
ಸರಕಾರದಲ್ಲಿ ಅನುದಾನ ಹಂಚಿಕೆ ಮಾಡಲು ಸಚಿವರು 10ರಿಂದ 20ರ ವರೆಗೂ ಪರ್ಸೆಂಟೇಜ್ ನೀಡಬೇಕಾದ ಅನಿವಾರ್ಯವಿದೆ. ಇದು ಮುಂದುವರಿದರೆ ಪಕ್ಷದ ಹೈಕಮಾಂಡ್ ಗಮನಕ್ಕೆ ತರಬೇಕಾಗುತ್ತದೆ ಎಂದು ಬಿಜೆಪಿ ಶಾಸಕರು ಕಿಡಿಕಾರಿದ್ದಾರೆ.
ಅನುದಾನ ಹಂಚಿಕೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ 30ಕ್ಕೂ ಹೆಚ್ಚು ಶಾಸಕರು, ಅದರ ಮುಂದುವರಿದ ಭಾಗವಾಗಿ ಮಂಗಳವಾರವೂ ಸಿಎಂಗೆ ಅನೇಕರು ಮೌಖಿಕವಾಗಿ ದೂರಿದ್ದಾರೆ.
ಕಂದಾಯ, ಸಮಾಜ ಕಲ್ಯಾಣ, ವಸತಿ ಸೇರಿದಂತೆ ಪ್ರಮುಖ ಖಾತೆಗಳ ಸಚಿವರು ಪಕ್ಷ ಸಂಘಟನೆ ಮತ್ತು ವರ್ಚಸ್ಸು ವೃದ್ಧಿಸಲು ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸಚಿವರ ವಿರುದ್ಧ ಸಹಿ ಸಂಗ್ರಹ ಅಭಿಯಾನದ ಹೊಣೆಯನ್ನು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ನಿರ್ವಹಿಸುತ್ತಿದ್ದು, ಅವರು ಮಂಗಳವಾರವೂ ಅಭಿಯಾನ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಮಾರ್ಚ್ 25ರಂದು ಈ ಬಗ್ಗೆ ಮತ್ತೆ ಶಾಸಕರ ಸಭೆ ಕರೆದಿ ದ್ದಾರೆ. ಈ ಸಭೆಯಲ್ಲಿ ಆರೋಪ ಮಾಡುವ ಶಾಸಕರು ಮತ್ತು ಆರೋಪಿತ ಸಚಿವರು ಹಾಗೂ ತರಕಾರು ಮಾಡುವ ಇಲಾಖೆ ಅಧಿಕಾರಿಗಳನ್ನೂ ಸೇರಿಸಿ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಾವ ಸಚಿವರದು, ಏನು ತಪ್ಪು?: ಬಿಜೆಪಿಯ 45ಕ್ಕೂ ಹೆಚ್ಚು ಶಾಸಕರು ಪ್ರಮುಖವಾಗಿ ಟಾರ್ಗೆಟ್ ಮಾಡಿರುವುದು ಕಂದಾಯ
ಸಚಿವ ಆರ್.ಅಶೋಕ ಅವರನ್ನು. ಅದರಲ್ಲೂ ಶಾಸಕ ಅರಗ ಜ್ಞಾನೇಂದ್ರ ಮತ್ತು ಹಾಲಪ್ಪ ಸೇರಿದಂತೆ ಮಲೆನಾಡು ಭಾಗದ
ಬಿಜೆಪಿ ಶಾಸಕರು ಅಶೋಕ್ ವಿರುದ್ಧ ದೂರುಗಳ ಮಳೆಗರೆದಿದ್ದಾರೆ.
ಕಂದಾಯ, ಭೂಮಿ ಮತ್ತು ಅರಣ್ಯ ಭೂಮಿ ಸಮಸ್ಯೆಗಳಿಗೆ ಅಶೋಕ ಸ್ಪಂದಿಸಿಲ್ಲ. ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುತ್ತಿಲ್ಲ. ಏನೇ
ಹೇಳಿದರೂ ಅಧಿಕಾರಿಗಳ ಮೂಲಕ ತಾಂತ್ರಿಕ ಮತ್ತು ನ್ಯಾಯಾಲಯ ಸಮಸ್ಯೆಗಳನ್ನು ಮುಂದಿಟ್ಟು ಜಾರಿಗೊಳ್ಳುತ್ತಾರೆ ಎಂದು
ಆರೋಪಿಸಿದ್ದಾರೆ. ಇದನ್ನು ಶಾಸಕ ಅರಗ ಜ್ಞಾನೇಂದ್ರ ಮತ್ತು ಹಾಲಪ್ಪ ಅವರು ಸದನದಲ್ಲೇ ಬಹಿರಂಗವಾಗಿ ಹೇಳಿದ್ದರು.
ಹಾಗೆಯೇ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮಲು ವಿರುದ್ಧ ಬಹುತೇಕ ಎಲ್ಲ ಶಾಸಕರೂ ದೂರಿದ್ದಾರೆ. ರಾಮಲು ಅವರು ನಮ್ಮ ಕೈಗೇ ಸಿಗುವುದಿಲ್ಲ, ಇನ್ನು ಸಾಮಾನ್ಯ ಜನರಿಗೆ ಎಲ್ಲಿ ದರ್ಶನ ನೀಡುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ಅಧಿವೇಶನ ಸಮಯದಲ್ಲಿ ಸದನಕ್ಕೂ ಬರುವುದಿಲ್ಲ. ಮನೆಯಲ್ಲೂ ಸಿಗುವುದಿಲ್ಲ. ಫೋನ್ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಇಷ್ಟೆಲ್ಲದರ ಮಧ್ಯೆ ಹೇಗಾದರೂ ಮಾಡಿ ಸಚಿವರನ್ನು ಸಂಪರ್ಕಿಸಿದರೆ, ಅನುದಾನ ನೀಡುವುದಿಲ್ಲ.
ಹೀಗಾದರೆ ನಮ್ಮ ಕ್ಷೇತ್ರಗಳಲ್ಲಿರುವ ಪರಿಶಿಷ್ಟ ಜಾತಿ, ವರ್ಗದ ಮತದಾರರಿಗೆ ಏನು ಹೇಳುವುದು? ಎಂದು ಶಾಸಕರು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ. ಸಚಿವ ಡಾ.ಸುಧಾಕರ್ ಬೆಂಗಳೂರಿನ ಕರೋನಾ ಪ್ರಕರಣಗಳಲ್ಲಿ ಮುಳುಗಿದ್ದು, ತಮ್ಮ ಕ್ಷೇತ್ರಗಳ ಆಸ್ಪತ್ರೆಗಳ ಸೌಲಭ್ಯಕ್ಕೆ ಬಿಡಿಗಾಸೂ ನೀಡುತ್ತಿಲ್ಲ. ಏನೇ ಕೇಳಿದರೂ ಮುಖ್ಯಮಂತ್ರಿಗಳ ಕಡೆ ಕೈ ತೋರಿಸುತ್ತಿದ್ದಾರೆ ಎಂದು ರೇಣುಕಾರ್ಯ ಸೇರಿದಂತೆ ಅನೇಕರು ದೂರಿದರು.
ಸಚಿವ ವಿ.ಸೋಮಣ್ಣ ಮತ್ತು ಕೆ.ಸಿ.ನಾರಾಯಣಗೌಡ ಅವರು ಶಾಸಕರಿಗೆ ಯಾವುದೇ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಇವರಿಗೆ
ಪಕ್ಷದ ಸಂಘಟನೆ ಮತ್ತು ಕ್ಷೇತ್ರಗಳಲ್ಲಿ ಬಿಜೆಪಿ ವರ್ಚಸ್ಸು ವೃದ್ಧಿಸುವುದು ಬೇಕಾಗಿಲ್ಲ ಎಂದು ಶಾಸಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಇದೇ ರೀತಿ ಬಸವರಾಜ ಬೊಮ್ಮಾಯಿ, ಎಸ್.ಟಿ.ಸೋಮಶೇಖರ್ ಸೇರಿದಂತೆ ಅನೇಕ ಸಚಿವರು ಪಕ್ಷಕ್ಕಾಗಿ ದುಡಿದ ಶಾಸಕರು ಮತ್ತು ಪದಾಧಿಕಾರಿಗಳು ಏನೇ ಕೇಳಿದರೂ ಇಲ್ಲ ಎನ್ನುತ್ತಿದ್ದಾರೆ. ಹೀಗಾದರೆ ನಮ್ಮ ಗತಿ ಏನು? ಎಂದು ಶಾಸಕರು ಗೋಳು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಅನುದಾನ ಮಾರಾಟ
ಸಮಾಜ ಕಲ್ಯಾಣ, ಪೌರಾಡಳಿತ, ಸಹಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಅನುದಾನಗಳು ಮಾರಾಟ ವಾಗುತ್ತಿವೆ ಎಂದು ಕೆಲವು ಸಚಿವರು ಮೌಖಿಕವಾಗಿ ದೂರಿದ್ದಾರೆ ಎನ್ನಲಾಗಿದೆ. ಅಂದರೆ ಗುತ್ತಿಗೆದಾರರು ಮತ್ತು ವೆಂಡರ್‌ಗಳು
ಶಾಸಕರಿಗೇ ತಿಳಿಯದಂತೆ ಅನುದಾನ ತಂದು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಚಿವರು ನಾನು ಕೇಳಿದರೆ ಅನುದಾನ ನೀಡುವುದಿಲ್ಲ. ಗುತ್ತಿಗೆದಾರರಿಗೆ ಅನುದಾನ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ಇದರಿಂದ ಕ್ಷೇತ್ರಗಳಲ್ಲಿ ಶಾಸಕರಿಗೇ ಬೆಲೆ ಇಲ್ಲ ದಂತಾಗಿದೆ ಎಂದು ಕೆಲವು ಶಾಸಕರು ಮುಖ್ಯಮಂತ್ರಿಗಳ ಮುಂದೆ ನೋವು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
***
ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬೇಡಿಕೆ ಸೇರಿದಂತೆ ಅನೇಕ ವಿಚಾರಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಗುರುವಾರ
ಸಭೆ ಕರೆದು ಪರಿಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
-ಎಂ.ಪಿ.ರೇಣುಕಾಚಾರ್ಯ ಶಾಸಕ
ವಸತಿ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಸಿಎಂ ಎದುರು ಹೇಳಿಕೊಂಡಿದ್ದೇವೆ. ಸದ್ಯದಲ್ಲೇ
ಅವರು ಎಲ್ಲವನ್ನೂ ಪರಿಹಾರ ಮಾಡುತ್ತಾರೆ.
-ಕೆ. ಪೂರ್ಣಿಮಾ ಶಾಸಕಿ