Saturday, 21st September 2024

MLA Munirathna: ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ಸರ್ಕಾರ

MLA Munirathna

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ (MLA Munirathna) ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಿ.ಕೆ.ಸಿಂಗ್‌ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಿದ್ದು, ಈ ವಿಶೇಷ ತನಿಖಾ ತಂಡದ ಸದಸ್ಯರಾಗಿ ಐಜಿ ಲಾಭೂರಾಮ್‌, ರೈಲ್ವೆ ಎಸ್‌ಪಿ ಸೌಮ್ಯಲತಾ, ಪೊಲೀಸ್‌ ಅಧೀಕ್ಷಕ ಸಿ.ಎ.ಸೈಮನ್‌ ನೇಮಕವಾಗಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ಹಾಗೂ ಡಾ.ಎಂ.ಸಿ.ಸುಧಾಕರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಒಕ್ಕಲಿಗ ಸಮುದಾಯದ ನಾಯಕರು, ಸಿಎಂ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿಯಾಗಿ, ಮಾಜಿ ಸಚಿವ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಎಸ್‌ಐಟಿ ರಚನೆ ಮಾಡಿದೆ.

ವಿಶೇಷ ತನಿಖಾ ತಂಡವು ಶಾಸಕ ಮುನಿರತ್ನ ವಿರುದ್ಧ ದಾಖಲಾಗುವ ಇತರೆ ಎಲ್ಲಾ ಪ್ರಕರಣಗಳ ಸಮಗ್ರ ತನಿಖೆಯನ್ನು ನಡೆಸಿ, ತನಿಖಾ ವರದಿಯನ್ನು ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಮುಖಾಂತರ ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒಳಾಡಳಿತ ಇಲಾಖೆ (ಅಪರಾಧಗಳು) ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌.ಅಂಬಿಕಾ ಆದೇಶದಲ್ಲಿ ತಿಳಿಸಿದ್ದಾರೆ.

ಮುನಿರತ್ನಗೆ 14 ದಿನ ನ್ಯಾಯಾಂಗ ಬಂಧನ

ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಶಾಸಕ ಮುನಿರತ್ನ ಗುರುವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅವರನ್ನು ಸುತ್ತಿಕೊಂಡಿತ್ತು. ಹೀಗಾಗಿ ಪೊಲೀಸರು ಶನಿವಾರ ಕೋರ್ಟ್​ಗೆ ಶಾಸಕನನ್ನು ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್‌, ಅಕ್ಟೋಬರ್ 5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್​ಮೇಲ್​ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಸಂತ್ರಸ್ತೆ ದೂರಿನ ಆಧಾರದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್​ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿತ್ತು.

ಘಟನೆ ಸಂಬಂಧ ಶಾಸಕ ಮುನಿರತ್ನ ಸೇರಿ 7 ಜನರ ವಿರುದ್ಧ FIR ದಾಖಲಾಗಿತ್ತು. ಆರ್​.ಆರ್​.ನಗರ ಬಿಜೆಪಿ ಶಾಸಕ ಮುನಿರತ್ನ, ವಿಜಯ್​ ಕುಮಾರ್​, ಕಿರಣ್​​, ಲೋಹಿತ್​​, ಮಂಜುನಾಥ್​, ಲೋಕಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಖಾಸಗಿ ರೆಸಾರ್ಟ್​ನಲ್ಲಿ ಅತ್ಯಾಚಾರ ಮಾಡಿರುವುದಾಗಿ DySP ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಮಹಿಳೆ ಆರೋಪ ಮಾಡಿ ಹೇಳಿಕೆ ನೀಡಿದ್ದರು.

ಇದಕ್ಕೂ ಮುನ್ನಾ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಗುತ್ತಿಗೆಯಲ್ಲಿ ಕಮಿಷನ್ ನೀಡುವಂತೆ ಗುತ್ತಿಗೆದಾರ ಚಲುವರಾಜ್​ ಅವರಿಗೆ ಜೀವ ಬೆದರಿಕೆ ಹಾಕಿ ನಿಂದಿಸಿದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ವೈಯಾಲಿಕಾವಲ್‌ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದ್ದವು. ಈ ಕುರಿತು ಮುನಿರತ್ನ ಬೆದರಿಕೆ ಹಾಕಿದ ಆಡಿಯೋ ಕೂಡ ವೈರಲ್‌ ಆಗಿತ್ತು.

ಈ ಕೃತ್ಯ ಬೆಳಕಿಗೆ ಬಂದ ನಂತರ ನಗರ ತೊರೆದು ಆಂಧ್ರ ಪ್ರದೇಶದತ್ತ ಹೊರಟಿದ್ದ ಮುನಿರತ್ನ ಅವರನ್ನು ಕೋಲಾರ ಜಿಲ್ಲೆ ಮುಳಬಾಗಿಲು ಸಮೀಪ ಶನಿವಾರ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿತ್ತು. ಈ ಸಂಬಂಧ ಬಂಧನವಾಗಿರುವ ಶಾಸಕ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.