Friday, 22nd November 2024

CT Ravi: ಕಾಂಗ್ರೆಸ್ ಸರ್ಕಾರದಿಂದ ದ್ವೇಷ ರಾಜಕಾರಣ; ಸಿ.ಟಿ. ರವಿ ಆರೋಪ

CT Ravi

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು (Congress Government) ಪೂರ್ವಗ್ರಹಪೀಡಿತವಾಗಿ ವರ್ತಿಸುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ರಾಜ್ಯ ಸರ್ಕಾರ ತೋರಿಸಬೇಕಿತ್ತು. ಆದರೆ ಚನ್ನಾರೆಡ್ಡಿ ಮೇಲೆ ಅಟ್ರಾಸಿಟಿ ಕೇಸ್ ದಾಖಲಾದರೆ ಅವರನ್ನು ಬಂಧಿಸುವುದಿಲ್ಲ. ಮುನಿರತ್ನ ಮೇಲೆ ಅಟ್ರಾಸಿಟಿ ಕೇಸ್ ಆದರೆ ಅರೆಸ್ಟ್ ಮಾಡ್ತಾರೆ. ಚಲುವರಾಯಸ್ವಾಮಿ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ, ಎಫ್‍ಐಆರ್ (FIR) ಕೂಡ ದಾಖಲಾಗುವುದಿಲ್ಲ. ಮುನಿರತ್ನ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ, ಎಫ್‍ಐಆರ್ ದಾಖಲಾಗುತ್ತದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ದೂರಿದರು.

ಈ ಸುದ್ದಿಯನ್ನೂ ಓದಿ | R Ashok: ವಿಶ್ವ ಮಟ್ಟದಲ್ಲಿ ಭಾರತ ಶ್ರೇಷ್ಠ ದೇಶವಾಗಿ ಹೊರಹೊಮ್ಮಿದೆ: ಆರ್. ಅಶೋಕ್

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಈ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಪ್ರಶ್ನಿಸಿದ ಅವರು, ತನಿಖೆ ಮಾಡಿ ತಪ್ಪಾಗಿದ್ದರೆ ಶಿಕ್ಷೆ ಆಗಲಿದೆ. ಆದರೆ, ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಮತ್ತೊಂದು ನ್ಯಾಯ ಮಾಡಲು ಇವರಿಗೆ ಅಧಿಕಾರ ಕೊಟ್ಟಿಲ್ಲ ಎಂದು ತಿಳಿಸಿದರು.

ತನಿಖೆ ಎದುರಿಸಲು ಸಿಎಂ ಭಯ ಪಡುತ್ತಾರೆ

ಸಿದ್ದರಾಮಯ್ಯನವರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ತನಿಖೆ ಎದುರಿಸಲು ಹಿಂಜರಿಯುತ್ತಿರಲಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟರೆ ತನಿಖೆ ಎದುರಿಸಲು ಮುಖ್ಯಮಂತ್ರಿಗಳು ಭಯ ಪಡುತ್ತಾರೆ. ರಾಜ್ಯಪಾಲರ ವಿರುದ್ಧ ಚಳವಳಿ ಮಾಡುವ ಮಾತನಾಡಿದ್ದಾರೆ ಎಂದು ಸಿ.ಟಿ. ರವಿ ಆಕ್ಷೇಪಿಸಿದರು.

ಈ ಸುದ್ದಿಯನ್ನೂ ಓದಿ | KEA Exam: ಪಿಎಸ್‌ಐ, ವಿಎಒ, ಕೆ-ಸೆಟ್‌ ಸೇರಿ ವಿವಿಧ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಸಿದ್ದರಾಮಯ್ಯನವರು ತಮ್ಮದು ಕಳಂಕರಹಿತ ಆಡಳಿತ ಎಂದು ತೀರ್ಪು ಕೊಟ್ಟುಕೊಳ್ಳುತ್ತಾರೆ. ಅವರೇ ಜಡ್ಜ್, ಅವರೇ ಲಾಯರ್. ಮುಖ್ಯಮಂತ್ರಿಯವರೇ, ನಿಮ್ಮದು ಕಳಂಕರಹಿತ ಆಡಳಿತ ಅಲ್ಲ ಎನ್ನಲು ನಮ್ಮ ಹತ್ತಿರ ಸಾಕಷ್ಟು ಸಾಕ್ಷಿಗಳಿವೆ ಎಂದು ಸಿ.ಟಿ. ರವಿ ಸವಾಲೆಸೆದರು.