ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾ (Mohiuddin Bava) ಸಹೋದರ ಮುಮ್ತಾಜ್ ಅಲಿ (Mumtaz Ali) ನಾಪತ್ತೆಯಾಗಿದ್ದಾರೆ. ಮಂಗಳೂರು (Mangaluru) ಹೊರವಲಯದ ಕೂಳೂರು ಸೇತುವೆ ಬಳಿ ಮಮ್ತಾಜ್ ಅಲಿ ಕಾರು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಸಾಯುವುದಾಗಿ ಮನೆಯವರಿಗೆ ತಿಳಿಸಿ ಮಮ್ತಾಜ್ ತೆರಳಿದ್ದರು ಎನ್ನಲಾಗಿದೆ.
52 ವರ್ಷದ ಮುಮ್ತಾಜ್ ಅಲಿ ಬಿಎಂಡಬ್ಲ್ಯು ಎಕ್ಸ್‌ವೈ (BMW XY) ಕಾರಿನಲ್ಲಿ ತೆರಳಿದ್ದು, ಬ್ರಿಡ್ಜ್ ಬಳಿ ಕಾರು ಪತ್ತೆಯಾಗುತ್ತಿದ್ದರಂತೆ ಸ್ಥಳದಲ್ಲಿ ಸಾರ್ವಜನಿಕರು ಗುಂಪುಗೂಡಿದ್ದಾರೆ. ಡಿಸಿಪಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಾಜಿ ಶಾಸಕ ಮೊಯಿದ್ದೀನ್ ಬಾವ ಕುಟುಂಬಸ್ಥರೂ ಸ್ಥಳಕ್ಕೆ ತೆರಳಿದ್ದಾರೆ.
ನದಿಯಲ್ಲಿ ಹುಡುಕಾಟ
ನದಿಯಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಅಗ್ನಿಶಾಮಕದಳದಿಂದ ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಸುಕಿನ ಜಾವ 3 ಗಂಟೆಗೆ ಮುಮ್ತಾಜ್ ಅಲಿ ಮನೆಯಿಂದ ತೆರಳಿದ್ದಾರೆ ಎನ್ನಲಾಗಿದೆ. ಅವರು ವಿವಿಧ ಉದ್ಯಮ ಮತ್ತು ಮಸೀದಿ ಕಮಿಟಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕಾರಿಗೆ ಹಾನಿ
ಕೂಳೂರು ಬ್ರಿಡ್ಜ್ ಬಳಿ ಪತ್ತೆಯಾದ ಮುಮ್ತಾಜ್ ಅಲಿ ಅವರ ಕಾರಿಗೆ ಹಾನಿಯಾಗಿರುವುದು ಕೂಡ ಅನುಮಾನ ಮೂಡಿಸಿದೆ. ಅಪಘಾತ ಆದ ಸ್ಥಿತಿಯಲ್ಲಿ ಪತ್ತೆಯಾದ ಬಿಎಂಡಬ್ಲ್ಯು ಕಾರರನ್ನು ಇಂಚಿಂಚು ಬಿಡದೆ ಪೊಲೀಸರು ಪರಿಶೀಲಿಸಿದ್ದಾರೆ. ಡೋರ್ ಹ್ಯಾಂಡಲ್ ಬಳಿ ಪಿಂಗರ್ ಪ್ರಿಂಟ್ ಮಾದರಿ ಸಂಗ್ರಹಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿ, ʼʼಮುಂಜಾನೆ 3 ಗಂಟೆಗೆ ಮುಮ್ತಾಜ್ ಅಲಿ ಕಾರು ಚಲಾಯಿಸಿಕೊಂಡು ಮನೆಯಿಂದ ಹೊರಟಿದ್ದಾರೆ. ಕುಳೂರು ಸೇತುವೆಯಲ್ಲಿ ಕಾರು ಅಪಘಾತವಾಗಿದ್ದು, ಬಳಿಕ ನಾಪತ್ತೆಯಾಗಿದ್ದಾರೆ.ಈ ಬಗ್ಗೆ ಅವರ ಪುತ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೇತುವೆಯಿಂದ ಕೆಳಗೆ ಹಾರಿರುವ ಬಗ್ಗೆ ಸಂಶಯ ಇದೆ. ವಿವಿಧ ತಂಡಗಳು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿವೆ. ಜತೆಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರೂ ಆಗಮಿಸಿ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆʼʼ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ಧಾರಾಕಾರ ಮಳೆ; ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ