Thursday, 12th December 2024

ಬಿಜೆಪಿಯವರಿಗೆ ಸನ್ನತಿ ಅಭಿವೃದ್ಧಿಯ ಕಾಳಜಿ ಬಂದಿದೆಯಲ್ಲ: ಸಂಸದ ಜಾಧವ್‌ಗೆ ಘೇರಾವ್‌

Umesh Jadhav

ವಾಡಿ: ಐತಿಹಾಸಿಕ ಸ್ಥಳ ಸನ್ನತಿಗೆ ಶನಿವಾರ ಭೇಟಿ ನೀಡಿದ ಬಿಜೆಪಿ ಸಂಸದ ಡಿ.ಉಮೇಶ ಜಾಧವ ಅವರನ್ನು ದಲಿತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತ ಪಡಿಸಿದರು.

ಬೌದ್ಧ ಸ್ತೂಪ ಹಾಗೂ ಬುದ್ಧನ ಮೂರ್ತಿಗಳನ್ನು ವೀಕ್ಷಣೆಗೆ ಮುಂದಾದ ವೇಳೆ ಸಂಸದ ಜಾಧವ್ ಅವರನ್ನು ಸುತ್ತುವರೆದ ದಲಿತರು, ಬಿಜೆಪಿಯವರಿಗೆ ಸನ್ನತಿ ಅಭಿವೃದ್ಧಿಯ ಕಾಳಜಿ ಬಂದಿದೆಯಲ್ಲ ಎಂದು ವ್ಯಂಗವಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಐತಿಹಾಸಿಕ ಬೌದ್ಧ ತಾಣ ಅಭಿವೃದ್ಧಿ ಕಾಣದೆ ನನಗೆಗುದಿಗೆ ಬಿದ್ದಿದೆ. ಕೇಂದ್ರ ಸರಕಾರದ ಆದೀನಕ್ಕೊಳಪಟ್ಟಿರುವ ಸನ್ನತಿಯ ಪ್ರಗತಿಗೆ ಬಿಜೆಪಿ ಸರಕಾರ ಯಾವೂದೇ ಕ್ರಮಕೈಗೊಂಡಿಲ್ಲ. ಅಂತರ ರಾಷ್ಟ್ರೀಯ ಪ್ರವಾಸಿತಾಣ ವಾಗಿರುವ ಸನ್ನತಿಗೆ ಹೆದ್ದಾರಿ ಅಭಿವೃದ್ಧಿಯಾಗಿಲ್ಲ. ಪ್ರವಾಸಿಗರಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿ ಸಿಲ್ಲ. ಇಷ್ಟುದಿನ ಸನ್ನತಿ ನೆನಪಿಗೆ ಬರಲಿಲ್ವಾ? ಈಗಲಾದರೂ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡ್ತೀರಾ? ಅಥವ ಕಾಟಾಚಾರದ ವೀಕ್ಷಣೆ ಮಾಡಿ ಹೋಗ್ತಿರಾ? ಎಂದು ವಾಗ್ವಾದ ನಡೆಸಿದರು.

ಸಮಾಧಾನದಿಂದ ಮಾತನಾಡಿದ ಸಂಸದ ಡಾ.ಉಮೇಶ ಜಾಧವ, ಸನ್ನತಿ ಎಂಬುದು ಪವಿತ್ರ ಬೌದ್ಧ ತಾಣ. ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಇಲ್ಲಿನ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುತ್ತೇನೆ. ಅಭಿವೃದ್ಧಿಗೆ ಖಂಡಿತಾ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.