ಹರಪನಹಳ್ಳಿ: ಪ್ರಜಾಪ್ರಭುತ್ವ ರಾಷ್ಟದಲ್ಲಿ ಯಾರು, ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು ಹಾಗಂತ ಟಿಕೇಟ್ ಸಿಗುವವರೆಗೂ ಸಮಾಜ ಸೇವೆ, ಕೆಲಸ ಮಾಡದೆ ಇರುವುದಕ್ಕೆ ಅಗುವುದಿಲ್ಲ ಎಂದು ಎಂ.ಪಿ.ಪ್ರಕಾಶ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಅಭಿಪ್ರಾಯಪಟ್ಟರು.
ಪಟ್ಟಣದ ಆರ್‌ಎಸ್‌ಎನ್ ಶಾಲೆಯ ಆವರಣದಲ್ಲಿ ಭಾನುವಾರ ಎಂ.ಪಿ.ಪ್ರಕಾಶ ಸಮಾಜ ಮುಖಿ ಟ್ರಸ್ಟ್, ತಥಾಗತ್ ಹಾರ್ಟ್ ಆಸ್ಪತ್ರೆ, ಲಯನ್ಸ್ ಕ್ಲಬ್, ಎಸ್ ಎಸ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಎಂ.ಪಿ.ರವೀಂದ್ರ ಜನ್ಮದಿನ ಹಾಗೂ ವಿಶ್ವ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಉಚಿತ ಬೃಹತ್ ಆರೋಗ್ಯ ಮೇಳ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ತಂದೆಯವರಾದ ದಿ.ಎಂ.ಪಿ.ಪ್ರಕಾಶ್ ಹಾಗೂ ಸಹೋದರ ಎಂ.ಪಿ.ರವೀಂದ್ರರವರು ಸಹ ರಾಜಕಾರಣ, ಸಮಾಜ ಸೇವೆ ಹಾಗೂ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದರು, ಅವುಗಳನ್ನು ನಾನು ಮುಂದುವರೆಸಿದ್ದೇನೆ, ಇಲ್ಲಿ ಸಂಘಟನೆ ಮತ್ತು ಸಮಾಜ ಸೇವೆ, ರಾಜಕೀಯ ಸೇವೆ ಮಾಡುವುದು ಬೇರೆ ಬೇರೆಯಾಗಿವೆ ಇದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದ ಅವರು ಹಲವಾರು ವರ್ಷಗಳಿಂದ ಡಾ.ಮಹಾಂತೇಶ್ ರವರ ಜತೆಯಾಗಿ ಅನೇಕ ಕಾರ್ಯಕ್ರಮಗಳನ್ನು ಹರಪನಹಳ್ಳಿಯಲ್ಲಿ ಆಯೋಜಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸಹ ನಮ್ಮ ಸೇವೆ ಮುಂದುವರೆಯಲಿದೆ ಎಂದರು.
ನೀಲಗುAದ ಗುಡ್ಡದ ವಿರಕ್ತಮಠ ಸಂಸ್ಥಾನದ ಶ್ರೀ ಚನ್ನಬಸವ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಮಠಗಳು ಧರ್ಮ ಮತ್ತು ಮಾನಸಿಕ ನೆಮ್ಮದಿಗೆ ಜ್ಞಾನದ ಚಿಂತನೆಗೆ ಹಚ್ಚುತ್ತೇವೆ, ಆಸ್ಪತ್ರೆಗಳು ಜನರ ಆರೋಗ್ಯವನ್ನು ಕಾಪಾಡುತ್ತಾರೆ. ಈ ನಿಟ್ಟಿನಲ್ಲಿ ರೋಗಿಗಳ ಸೇವೆಯು ಸಹ ಪೂಜನೀಯ ಕಾರ್ಯವಾಗಿದೆ ಎಂದರು.
ಹಿಂದುಳಿದ ತಾಲೂಕು ಹರಪನಹಳ್ಳಿ ಅಭಿವೃದ್ಧಿಯಿಂದ ಸಾಕಷ್ಟು ವಂಚಿತವಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಅನೇಕ ಅಕಾಂಕ್ಷಿಗಳು ಇತ್ತ ಕಡೆ ಮುಖ ಮಾಡಿ ಸೇವೆ ಸಲ್ಲಿಸುವುದರಿಂದ ಅಭಿವೃದ್ದಿಗೆ ಪೂರಕ ವಾಗಲಿದೆ, ಇನ್ನಷ್ಟು ಆಕಾಂಕ್ಷಿಗಳು ಹೆಚ್ಚಿದಲ್ಲಿ ಜನ ಸೇವೆ ಮುಂದುವರಿಯಲಿದೆ ಎಂದ ಅವರು ಸಮಾಜ ಮುಖಿಯಾಗಿ ಡಾ.ಮಹಾಂತೇಶ್, ವೀಣಾರವರು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಡಾ.ಮಹಾಂತೇಶ್ ಚರಂತಿಮಠ ಮಾತನಾಡಿ ಅನೇಕ ವರ್ಷಗಳಿಂದ ಜನಸಾಮಾನ್ಯರ ನೋವಿಗೆ ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದ್ದು, ಈಗಾಗಲೇ ಹಲವು ಬಾರಿ ಆರೋಗ್ಯ ಶಿಬಿರಗಳನ್ನು ಮಾಡುತ್ತಾ ಬಂದಿದ್ದೇವೆ ಎಂ.ಪಿ.ವೀಣಾರವರು ಈ ಕ್ಷೇತ್ರದಲ್ಲಿ ಸಂಚರಿಸಿ, ಕಷ್ಟಸುಖದಲ್ಲಿ ಭಾಗಿಯಾಗುತ್ತಿದ್ದಾರೆ ಎಂದ ಅವರು ದಿನ ನಿತ್ಯದ ಒತ್ತಡ ಜೀವನದಲ್ಲಿ ಜನರ ಆರೋಗ್ಯ ಬಹಳ ಮುಖ್ಯ ವಾಗಿದ್ದು ಬಿಪಿ, ಶುಗರ್, ಹೃದಯ ಸಂಬAಧಿ, ಕ್ಯಾನ್ಸರ್, ಕಣ್ಣು, ಕಿವಿ ರೋಗದಂತಹ ಅನೇಕ ಕಾಯಿಲೆಗಳ ತಪಾಸಣೆಯನ್ನು ಒಂದೆ ಸೂರಿನಲ್ಲಿ ಲಭ್ಯವಾಗುವ ನಿಟ್ಟಿನಲ್ಲಿ ಆರೋಗ್ಯ ಮೇಳ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕೆಪಿಸಿಸಿ ಅಹಿಂದ ಉಪಾದ್ಯಕ್ಷ ಅಂಬಾಡಿ ನಾಗರಾಜ, ಡಾ.ಸುರೇಶ ಕಣ್ಣನ್ನವರ, ಡಾ.ನಂದಕರ್, ಡಾ.ಶ್ರೀನಿವಾಸ, ಡಾ.ಶೈಲೇಶ್, ಡಾ.ಮಹ್ಮದ್ ಬಾಗವತ್, ಡಾ.ಭಗತ್ ರಾಮ, ಡಾ.ರೂಪೇಶ, ಡಾ.ಮಹೇಶ, ಡಾ.ಶಂಕರಗೌಡ, ಡಾ.ನಾಗಾರ್ಜುನ, ಕಾಂಗ್ರೆಸ್ ಮುಖಂಡ ಬಿ.ಕೆ.ಪ್ರಕಾಶ್, ಕವಿತಾ ವಾಗೀಶ, ನಿಚ್ಚವ್ವನಹಳ್ಳಿ ಭೀಮಪ್ಪ, ಡಾ.ಗಿರೀಶ, ಹಾಗೂ ಇತರರು ಇದ್ದರು.