Friday, 22nd November 2024

Muda Case: ರಾಕೇಶ್ ಸಿದ್ದರಾಮಯ್ಯ ಸಾವಿಗೆ ದರೋಡೆಕೋರ ಬೈರತಿ ಸುರೇಶ್‌ ಕಾರಣ: ಶೋಭಾ ಕರಂದ್ಲಾಜೆ ಆರೋಪ!

Muda Case

ಬೆಂಗಳೂರು: ಮುಡಾ ಪ್ರಕರಣಕ್ಕೆ (Muda Case) ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೆಂಡತಿ ಸಾವಿಗೆ ಶೋಭಾ ಕರಂದ್ಲಾಜೆ (Shobha Karandlaje) ಕಾರಣ ಎಂದು ಸಚಿವ ಬೈರತಿ ಸುರೇಶ್‌ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವೆ ಆಕ್ರೋಶ ಹೊರಹಾಕಿದ್ದಾರೆ. ರಾಕೇಶ್ ಸಿದ್ದರಾಮಯ್ಯರ ಸಾವಿಗೆ ಬೈರತಿ ಸುರೇಶ್ (Byrathi Suresh) ಕಾರಣ ಎಂದು ಜನ ಹೇಳುತ್ತಿದ್ದಾರೆ. ಸಚಿವರೇ ನೀವು ಇದನ್ನು ಒಪ್ಪಿಕೊಳ್ಳುತ್ತೀರಾ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಸಚಿವೆ ಶೋಭಾ ಕರಂದ್ಲಾಜೆ ಅವರು, ದರೋಡೆಕೋರ ಬೈರತಿ ಸುರೇಶ್ ಅವರು ಮೈಸೂರು ಮುಡಾದಿಂದ ಸಾವಿರಾರು ಕಡತಗಳನ್ನು ಎತ್ತಿಕೊಂಡು ಬಂದು ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ್ದಕ್ಕೆ ಅಪವಾದ ಹಾಕುವ ಹಾಗೂ ಅನವಶ್ಯಕವಾಗಿ ಆರೋಪ ಹೊರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದರೋಡೆಕೋರರನ್ನು ಹಿಡಿಯಲು ಹೋದಾಗ ಪೊಲೀಸರಿಗೆ ಗುಂಡು ಹೊಡೆಯುವ ದರೋಡೆಕೋರರು ಇದ್ದಾರೆ, ಅದೇ ಕೆಲಸವನ್ನು ಬೈರತಿ ಸುರೇಶ್ ಮಾಡಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯನವರೇ ಇಂತಹವರನ್ನು ಯಾಕೆ ಹತ್ತಿರ ಇಟ್ಟುಕೊಂಡಿದ್ದೀರಿ ಎಂದು ಕೇಳಿದ ಅವರು, ರಾಜಕಾರಣಿಗಳು ಮಹಾಭಾರತವನ್ನು ಓದಬೇಕು, ಕೌರವರ ಜತೆ ಶಕುನಿ ಯಾಕೆ ಸೇರಿಕೊಂಡಿದ್ದ? ಕೌರವರಿಂದ ದುರ್ಯೋಧನನ್ನು ಉದ್ಧಾರ ಮಾಡಲು ಅವನು ಸೇರಿಕೊಂಡಿರಲಿಲ್ಲ. ಅವರನ್ನು ಮುಗಿಸಲು ಸೇರಿಕೊಂಡಿದ್ದ. ಅಂತಹ ಶಕುನಿಗಳು ಇವತ್ತಿಗೂ ರಾಜಕಾರಣದಲ್ಲಿ ದೊಡ್ಡ ಪದವಿಗೆ ಬಂದಾಗ ಮುಖ್ಯಮಂತ್ರಿಯ ಹಿಂದೆ ಮುಂದೆ ಸುತ್ತುತ್ತಿರುತ್ತಾರೆ. ಇದು ನಿಮ್ಮ ಉದ್ಧಾರಕ್ಕಲ್ಲ; ನಿಮ್ಮನ್ನು ಮುಗಿಸಲು ಎಂದು ಸಿಎಂಗೆ ಕಿವಿಮಾತು ಹೇಳಿದರು.

ಬೈರತಿ ಸುರೇಶ್ ಅವರು ಮೈಸೂರು ಮುಡಾದಿಂದ ಸಾವಿರಾರು ಕಡತಗಳನ್ನು ತಂದು ಅವನ್ನು ಸುಟ್ಟು ಹಾಕಿದ್ದು ನಿಜ. ಸತ್ಯ ಹೇಳಿದಾಗ ಸಿಟ್ಟು ಬರುತ್ತದೆ; ತಪ್ಪಿಸಿಕೊಳ್ಳುವುದು ಹೇಗೆ ಎಂಬ ಭಯ ಕಾಡುತ್ತದೆ. ಈ ಭಯದಿಂದ ಬೈರತಿ ಸುರೇಶ್ ಅವರು ಆರೋಪ ಮಾಡಿದ್ದಾರೆ ಎಂದರು.

ರಾಕೇಶ್ ಸಿದ್ದರಾಮಯ್ಯರ ಸಾವಿಗೆ ಯಾರು ಕಾರಣ?

ರಾಜಕಾರಣಿಗಳು ಕ್ಷುಲ್ಲಕ ರಾಜಕಾರಣ ಮಾಡಬಾರದು. ರಾಕೇಶ್ ಸಿದ್ದರಾಮಯ್ಯರ ಸಾವಿಗೆ ಬೈರತಿ ಸುರೇಶ್ ಕಾರಣ ಎಂದು ಜನರು ಹೇಳುತ್ತಿದ್ದಾರೆ. ಒಪ್ಪಿಕೊಳ್ಳುತ್ತೀರಾ ನೀವು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯನವರ ಆಸ್ತಿ ಹೊಡೆಯಲು, ಅವರ ದುಡ್ಡು ಹೊಡೆಯಲು, ಸಿದ್ದರಾಮಯ್ಯರ ವಾರಸುದಾರಿಕೆಗೆ ಬೈರತಿ ಸುರೇಶ್ ಬಂದಿದ್ದಾರೆ. ರಾಕೇಶ್ ಸಿದ್ದರಾಮಯ್ಯರನ್ನು ಮುಗಿಸಿದ್ದಾಗಿ ಜನರು ಮಾತನಾಡುತ್ತಾರೆ. ಏನು ಉತ್ತರ ಕೊಡುತ್ತೀರಿ? ರಾಜಕಾರಣವನ್ನು ರಾಜಕಾರಣವಾಗಿ ಎದುರಿಸಿ. ಹೆಣ್ಮಕ್ಕಳ ಮೇಲೆ ಅಪವಾದ ಹಾಕಿದಾಕ್ಷಣ ಓಡಿ ಹೋಗುತ್ತಾರೆ ಅಂದುಕೊಳ್ಳದಿರಿ. ನಾನು ಶೋಭಾ ಕರಂದ್ಲಾಜೆ; ತಪ್ಪು ಮಾಡಿಲ್ಲ ಎಂದು ಸವಾಲು ಹಾಕಿದರು.

ಚಾಮುಂಡೇಶ್ವರಿಯ ಮುಂದೆ ನಿಂತು ನಾನು ಕೆಲಸ ಮಾಡುತ್ತೇನೆ. ಒಳ್ಳೆಯದು ಮಾಡಿದರೆ ಒಳ್ಳೆಯದು ಮಾಡು; ಕೆಟ್ಟದು ಮಾಡಿದರೆ ಕೆಟ್ಟದು ಮಾಡೆಂದು ನನ್ನ ಕೆಲಸವನ್ನು ಅವಳಿಗೆ ಸಮರ್ಪಿಸುವೆ. ಓಡಿ ಹೋಗುವ, ಹೊಂದಾಣಿಕೆಯ ರಾಜಕಾರಣಿ ನಾನಲ್ಲ ಎಂದು ತಿಳಿಸಿದರು.

ನಿಮ್ಮನ್ನು ಹೆಬ್ಬಾಳದಿಂದ ಓಡಿಸುವ ಜವಾಬ್ದಾರಿ ನಮ್ಮದು

ನಾನು ನಿಮ್ಮದೇ ಹೆಬ್ಬಾಳದಲ್ಲಿದ್ದೇನೆ. ನಿಮ್ಮನ್ನು ಹೆಬ್ಬಾಳದಿಂದ ಓಡಿಸುವ ಜವಾಬ್ದಾರಿ ನಮ್ಮದಿದೆ. ದರೋಡೆ ನಡೆಯುತ್ತಿದೆ. ಒಂದೇ ಒಂದು ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ನೀವು ನಗರಾಭಿವೃದ್ಧಿ ಸಚಿವರು, ಬೆಂಗಳೂರು ಮುಳುಗುತ್ತಿದೆ. ಏನು ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಫೈಲ್ ಸುಟ್ಟು ಹಾಕಿದ್ದನ್ನು ಹೇಳಲು ಬಂದರೆ ಆರೋಪ ಮಾಡುತ್ತೀರಾ? ಏನಂದುಕೊಂಡಿದ್ದೀರಾ? ನೀವು ವಿಧಾನಸೌಧದಲ್ಲಿ ನಗುತ್ತೀರಾ? ಎಂದು ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಲ್ಲದೆ, ಶೋಭಾ ಕರಂದ್ಲಾಜೆ ಓಡಿ ಹೋಗುವವಳಲ್ಲ ಎಂದು ಸವಾಲು ಹಾಕಿದರು. ನಾನು ಸತ್ಯಪೂರ್ವಕ, ದೇವರಪೂರ್ವಕ ರಾಜಕಾರಣ ಮಾಡುವವಳು ಎಂದು ಸ್ಪಷ್ಟಪಡಿಸಿದರು.

ಬೈರತಿ ಸುರೇಶ್ ತನಿಖೆಯಿಂದ ಸತ್ಯ ಹೊರಬರಲಿದೆ

ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಕಳಂಕ ತಂದವರು ನೀವೇ; ನಿಮ್ಮ ಹಿಂದೆ ಮುಂದೆ ಎಲ್ಲವೂ ಸುತ್ತುತ್ತಿದೆ. ಯಾಕೆ ಮೈಸೂರಿಂದ ಫೈಲ್ ಹೊತ್ತುಕೊಂಡು ಬಂದಿರಿ? ಫೈಲ್ ಗಾಯಬ್ ಆದ ಕುರಿತು ತನಿಖೆ ನಡೆಯಲಿ. ಬೈರತಿ ಸುರೇಶ್ ಅವರನ್ನು ಬಂಧಿಸಿದಾಗ, ಅವರನ್ನು ತನಿಖೆ ಮಾಡಿದಾಗ ಸತ್ಯ ಹೊರಬರುತ್ತದೆ ಎಂದು ಮತ್ತೆ ಮತ್ತೆ ಹೇಳುವುದಾಗಿ ತಿಳಿಸಿದರು. ಬೈರತಿಯವರದು ಕೀಳುಮಟ್ಟದ (ಚೀಪ್) ರಾಜಕಾರಣ ಎಂದು ಖಂಡಿಸಿದರು.

ಈ ಸುದ್ದಿಯನ್ನೂ ಓದಿ | Byrathi Suresh: ಬಿಎಸ್‌ವೈ ಹೆಂಡ್ತಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ: ಸಚಿವ ಬೈರತಿ ಸುರೇಶ್ ಸ್ಫೋಟಕ ಹೇಳಿಕೆ

ನಿಮ್ಮ ಥರ ದರೋಡೆ ಮಾಡಿಲ್ಲ; ಕೊಲೆ ಮಾಡಿಲ್ಲ. ನಾಲಿಗೆ ಬಿಗಿಹಿಡಿದು ಮಾತನಾಡಿ. ರಾಜಕಾರಣವನ್ನು ರಾಜಕಾರಣವಾಗಿ ಎದುರಿಸೋಣ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಅಭಿವೃದ್ಧಿ ಮಾಡುವುದು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡದಿರಿ ಎಂದು ಎಚ್ಚರಿಸಿದರು.