ಮೈಸೂರು: ಮೈಸೂರಿನಲ್ಲಿರುವ (Mysore news) ನಗರ ಅಭಿವೃದ್ಧಿ ಪ್ರಾಧಿಕಾರದ (MUDA case) ಕಚೇರಿಗೆ ಇಂದು ಕೇಂದ್ರದ ಜಾರಿ ನಿರ್ದೇಶನಾಲಯ (ED Raid) ಅಧಿಕಾರಿಗಳು ಮಿಂಚಿನ ದಾಳಿ ನಡೆಸಿದ್ದಾರೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಈ ದಾಳಿ ನಡೆಸಲಾಗಿದೆ. ಇದರೊಂದಿಗೆ, ಮುಡಾ ಪ್ರಕರಣ (MUDA scam) ಇನ್ನೊಂದು ಮಜಲು ತಲುಪಿದೆ.
ಹತ್ತಕ್ಕೂ ಅಧಿಕ ಇಡಿ ಅಧಿಕಾರಿಗಳು ಮುಡಾ ಆಯುಕ್ತ ರಘುನಂದನ್ ಮತ್ತು ವಿಶೇಷ ಭೂಸ್ವಾಧೀನ ಕಚೇರಿ ಸೇರಿದಂತೆ ಇತರ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಅವರ ಕುಟುಂಬದ ವಿರುದ್ಧ ಇರುವ ಮನಿ ಲಾಂಡರಿಂಗ್ ಆರೋಪಗಳ ತನಿಖೆ ನಡೆಸುತ್ತಿರುವ ಕೇಂದ್ರ ಏಜೆನ್ಸಿ, ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ. ಇಡಿ, ನಗರ ಸಂಸ್ಥೆಯಲ್ಲಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳನ್ನು ತನಿಖೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಇಡಿ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತ ಬಂದಿದೆ. ಇದಕ್ಕೂ ಮುನ್ನ, ಸಿಎಂ ವಿರುದ್ಧ ತನಿಖೆ ನಡೆಸಲು ಕೋರಿ ರಾಜ್ಯಪಾಲರಿಗೆ ಸಲ್ಲಿಸಲಾದ ಮನವಿಗೆ ರಾಜ್ಯಪಾಲರು ಸಮ್ಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದೆ. ಇದರ ಜೊತೆಗೇ, ಮುಡಾ ಹಗರಣದ ತನಿಖೆಗೆ ಇಡಿ ಸ್ವಯಂಪ್ರೇರಿತವಾಗಿ ಮುಂದಾಗಿತ್ತು. ಜೊತೆಗೇ, ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಮುಕ್ತ ಅನುಮತಿಯನ್ನು ರಾಜ್ಯ ಸರಕಾರ ಹಿಂದೆಗೆದುಕೊಂಡಿತ್ತು.
ಎರಡು ದಿನಗಳ ಹಿಂದೆ ಮುಡಾ ಅಧ್ಯಕ್ಷ ಕೆ ಮರಿಗೌಡ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಂದ ಬಳಿಕ ಅವರು ರಾಜೀನಾಮೆ ನೀಡಿದ್ದು, ಸಿಎಂ ಸೂಚನೆಯಂತೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ಆದರೆ ಒತ್ತಡ ಹಾಕಿರಲಿಲ್ಲ ಎಂದಿದ್ದರು. ಮರಿಗೌಡ ತಲೆದಂಡಕ್ಕೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು.
ಇದನ್ನೂ ಓದಿ: MUDA Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಕೆ. ಮರಿಗೌಡ ರಾಜೀನಾಮೆ