Friday, 18th October 2024

MUDA Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ಕೆ. ಮರಿಗೌಡ ರಾಜೀನಾಮೆ

k marigowda

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣದ (MUDA case, MUDA scam) ತನಿಖೆ ಒತ್ತಡ ಹೆಚ್ಚುತ್ತಿರುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರಿಗೌಡ (K Marigowda) ರಾಜೀನಾಮೆ ನೀಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜೀನಾಮೆ (Resignation) ನೀಡಿದ್ದೇನೆ ಎಂದಿದ್ದಾರೆ.

ಸಿಎಂ ಸೂಚನೆ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್​ಗೆ ಮರಿಗೌಡ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ವಿಚಾರವಾಗಿ ಇಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಮರಿಗೌಡ‌ ಭೇಟಿ ಮಾಡಿದ್ದರು. ಹೀಗಾಗಿ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ನೀಡುವುದು ಖಚಿತ ಎನ್ನಲಾಗಿತ್ತು. ಕೆಲ ಕಾಲ ಸಿದ್ದರಾಮಯ್ಯ ಜೊತೆ ಮಾತನಾಡಿದ ಮರಿಗೌಡ, ಬಳಿಕ ಸಿಎಂ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದು, ಇಂದು ಅಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.

ರಾಜೀನಾಮೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮರಿಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಅವರು ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ದರು. ಅದಕ್ಕೆ ರಾಜೀನಾಮೆ ಕೊಟ್ಟಿದ್ದೇನೆ‌. ನನ್ನ ಆರೋಗ್ಯವೂ ಸರಿಯಿಲ್ಲ, ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ಮುಡಾ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.

ಮುಡಾ ತನಿಖೆ ನಡೆಯುತ್ತಿದೆ, ತನಿಖೆ ನಡೆಯಲಿ. ಅಕ್ರಮ ಆಗಿದೆಯೋ ಇಲ್ಲವೋ ನಾನು ಹೇಳುವುದಿಲ್ಲ. ಈಗ ತನಿಖೆ ನಡೆಯುತ್ತಿದೆ, ತನಿಖೆಯಿಂದ ಸತ್ಯ ಹೊರಬರುತ್ತೆ‌. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ರಾಜೀನಾಮೆ ಕೊಟ್ಟಿದ್ದೇನೆ ಅಷ್ಟೇ. ಸೈಟ್ ವಿಚಾರವಾಗಿ ಸಿಎಂ ಅವರು ಯಾವುದೇ ಒತ್ತಡ ನನ್ನ ಮೇಲೆ ಹಾಕಿಲ್ಲ ಎಂದಿದ್ದಾರೆ.

ಅವರು ನಮ್ಮ ನಾಯಕರು. 40 ವರ್ಷಗಳಿಂದ ಜೊತೆಯಲ್ಲಿ ಇದ್ದೇನೆ. ನನ್ನನ್ನು ತಾಲ್ಲೂಕು, ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಮಾಡಿದ್ದರು. ಯಾವತ್ತು ಕೂಡಾ ಸಿದ್ದರಾಮಯ್ಯ ಅವರು ಅಕ್ರಮ ಮಾಡಿ ಅಂತ ಹೇಳಿಲ್ಲ. ಎರಡು ಬಾರಿ ಸ್ಟ್ರೋಕ್ ಆಯ್ತು, ಆರೋಗ್ಯ ಸರಿಯಿಲ್ಲ, ಹೀಗಾಗಿ ಮುಡಾ ಅಧ್ಯಕ್ಷರಾಗಿ ಮುಂದುವರೆಯಲು ಆಗುವುದಿಲ್ಲ ಅಂತ ರಾಜೀನಾಮೆ ಕೊಟ್ಟಿದ್ದೇನೆ. ಇಲಾಖೆ ಸಚಿವರು ರಾಜೀನಾಮೆಗೆ ಒತ್ತಡ ಮಾಡಿದರು ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ಇದನ್ನೂ ಓದಿ: Muda Case: ಮುಡಾ ಕಡತ ನಾಪತ್ತೆ ಆರೋಪ, ಸಚಿವ ಬೈರತಿ ಸುರೇಶ್ ಮೇಲೂ ಸ್ನೇಹಮಯಿ ಕೃಷ್ಣ ದೂರು