ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದಲ್ಲಿ (MUDA Scam) ತಮ್ಮ ವಿರುದ್ಧದ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Governor Thawar Chand Gehlot) ಅವರು ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಅಂದರೆ, ಈ ಪ್ರಕರಣದಲ್ಲಿ ತನಿಖೆಗೆ ಅನುಮತಿ (Muda case timeline) ನೀಡಿದೆ.
ಸೆಪ್ಟೆಂಬರ್ 12ರಂದು ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ಹೈಕೋರ್ಟ್, ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.
ಮುಡಾ ಪ್ರಕರಣದಲ್ಲಿ ಸಿಎಂ ಅವರಿಗೆ ಸಂಬಂಧಿಸಿದ ವಿಚಾರ ಎಂದರೆ, ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ನಿಜವಾಗಿಯೂ ಮಂಜೂರಾಗಿರುವ ಜಮೀನಿಗಿಂತ ಹೆಚ್ಚಿನ ಭಾರಿ ಮಟ್ಟದ ಆಸ್ತಿ ಮೌಲ್ಯವನ್ನು ಹೊಂದಿರುವ ಪರಿಹಾರದ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂಬುದು ದೂರು. ಪಾರ್ವತಿ ಅವರಿಗೆ ನೀಡಲಾಗಿದ್ದ 3.16 ಎಕರೆ ಜಮೀನಿಗೆ ಬದಲಾಗಿ 50:50 ಅನುಪಾತದ ಯೋಜನೆಯಡಿಯಲ್ಲಿ ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಇದನ್ನು ಬೆಲೆಬಾಳುವ ಜಾಗದಲ್ಲಿ ನೀಡಲಾಗಿದೆ ಎಂದು ದೂರಲಾಗಿದೆ.
ಮುಡಾ ಪ್ರಕರಣ ನಡೆದು ಬಂದ ದಾರಿ
1959: ಈ ಜಮೀನು ಕರ್ನಾಟಕದ ಮೈಸೂರು ಜಿಲ್ಲೆಯ ಕೆಸೆರೆ ಗ್ರಾಮದಲ್ಲಿ ಜವರ ಅವರ ಮಗ ನಿಂಗ ಎಂಬುವರಿಗೆ ಸೇರಿತ್ತು.
1968: ನಿಂಗನ ಹಕ್ಕುಗಳನ್ನು ಬಿಟ್ಟುಕೊಡಲಾಯಿತು. ಅಕ್ಟೋಬರ್ 29, 1968 ರಂದು, ಅವರ ಹಿರಿಯ ಮಗ ಮಲ್ಲಯ್ಯ ಮತ್ತು ಮೂರನೇ ಮಗ ದೇವರಾಜು ಅವರು 3 ಎಕರೆ 16 ಗುಂಟೆ ಜಮೀನಿನ ಮೇಲಿನ ಹಕ್ಕನ್ನು ನಿಂಗನ ಎರಡನೇ ಮಗ ಮೈಲಾರಯ್ಯನಿಗೆ 300 ರೂ. ಪಡೆದು ಒಪ್ಪಿಸಿದರು. ಮೈಲಾರಯ್ಯ ಭೂಮಿಯ ಏಕೈಕ ಮಾಲೀಕರಾದರು.
ಸೆಪ್ಟೆಂಬರ್ 1992: ದೇವನೂರು ಬಡಾವಣೆಯ ಮೂರನೇ ಹಂತವನ್ನು ರೂಪಿಸಲು ನಿಂಗನ 3.16 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಯಿತು.
ಫೆಬ್ರವರಿ 1998: 3.16 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಂತಿಮ ಅಧಿಸೂಚನೆ ಹೊರಡಿಸಲಾಯಿತು.
ಮೇ 1998: ಭೂಮಿಯನ್ನು ಡಿನೋಟಿಫೈ ಮಾಡಿ, ಅದನ್ನು ಸ್ವಾಧೀನ ಪ್ರಕ್ರಿಯೆಯಿಂದ ತೆಗೆದುಹಾಕಲಾಯಿತು.
2001: ದೇವನೂರು ಬಡಾವಣೆಯ 3ನೇ ಹಂತಕ್ಕೆ ಡಿನೋಟಿಫೈ ಮಾಡಿದ ಜಮೀನನ್ನು ಬಳಸಿಕೊಂಡು ನಿವೇಶನ ಹಂಚಿಕೆ ಮಾಡಲಾಗಿತ್ತು.
ನವೆಂಬರ್ 2003: ಭೂಮಿಯನ್ನು ಮೂಲ ಮಾಲೀಕರಿಗೆ ಪುನಃ ಕೊಡಲಾಯಿತು.
ಆಗಸ್ಟ್ 2004: ಸಿದ್ದರಾಮಯ್ಯ ಅವರ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಅವರು 3.16 ಎಕರೆ ಕೃಷಿ ಭೂಮಿಯನ್ನು ಖರೀದಿಸಿದರು.
ಜುಲೈ 2005: ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸಲಾಯಿತು.
ಅಕ್ಟೋಬರ್ 2010: ಮಲ್ಲಿಕಾರ್ಜುನ ಸ್ವಾಮಿ ಅವರು ತಮ್ಮ ಸಹೋದರಿ, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದರು.
ಜೂನ್ 2014: ಪಾರ್ವತಿ ಅವರು ಮುಡಾ ಬಳಸುತ್ತಿರುವ ತಮ್ಮ ಭೂಮಿಗೆ ಪರಿಹಾರವನ್ನು ಕೋರಿದರು.
ಡಿಸೆಂಬರ್ 2017: ಮುಡಾ ಬಡಾವಣೆಗೆ ಡಿನೋಟಿಫೈಡ್ ಭೂಮಿ ಬಳಸಿರುವುದನ್ನು ಒಪ್ಪಿಕೊಂಡಿತು ಮತ್ತು ಪಾರ್ವತಿ ಅವರಿಗೆ ಪರ್ಯಾಯ ಸೈಟ್ ನೀಡಲು ನಿರ್ಧರಿಸಿತು.
ನವೆಂಬರ್ 2020: ಮುಡಾ 50:50 ಆಧಾರದ ಮೇಲೆ ಪರ್ಯಾಯ ಸೈಟ್‌ಗಳನ್ನು ನೀಡಲು ಒಪ್ಪಿಕೊಂಡಿತು. ಪಾರ್ವತಿ ಅವರಿಗೆ ಅರ್ಧದಷ್ಟು ಭೂಮಿಯನ್ನು ಅಭಿವೃದ್ಧಿಪಡಿಸಿದ ಪ್ಲಾಟ್‌ಗಳಾಗಿ ನೀಡಿತು.
ಅಕ್ಟೋಬರ್ 2021: ಪಾರ್ವತಿ ಮತ್ತೊಮ್ಮೆ ಮುಡಾಕ್ಕೆ ಪರಿಹಾರವಾಗಿ ಪರ್ಯಾಯ ಸೈಟ್‌ಗಾಗಿ ಮನವಿ ಮಾಡಿದರು.
ಜನವರಿ 2022: ವಿಜಯನಗರ 3ನೇ ಹಂತದಲ್ಲಿ ಪಾರ್ವತಿ ಅವರಿಗೆ 14 ಪ್ಲಾಟ್‌ಗಳನ್ನು ನೀಡಲಾಯಿತು.
ಅಕ್ಟೋಬರ್ 2023: ಸರ್ಕಾರವು 50:50 ಯೋಜನೆಯನ್ನು ರದ್ದುಗೊಳಿಸಿತು.
ಜುಲೈ 4, 2024: ಸಿದ್ದರಾಮಯ್ಯನವರು ತಮ್ಮ ಜಮೀನು ಕಬಳಿಕೆಯಾಗಿದೆ ಎಂದು ಆರೋಪಿಸಿ 62 ಕೋಟಿ ರೂಪಾಯಿ ಪರಿಹಾರ ಕೇಳಿದರು.
ಜುಲೈ 14, 2024: ಆಪಾದಿತ ಅಕ್ರಮಗಳನ್ನು ತನಿಖೆ ಮಾಡಲು ಸರ್ಕಾರವು ಏಕವ್ಯಕ್ತಿ ತನಿಖಾ ಆಯೋಗವನ್ನು ಸ್ಥಾಪಿಸಿತು.
ಜುಲೈ 24, 2024: ವಿಧಾನಸಭೆಯಲ್ಲಿ ಮುಡಾ ‘ಹಗರಣ’ ಕುರಿತು ಚರ್ಚಿಸಲು ಸ್ಪೀಕರ್ ಯುಟಿ ಖಾದರ್ ಅನುಮತಿ ನಿರಾಕರಿಸಿದರು.
ಜುಲೈ 26, 2024: ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಅವರ ಮನವಿಯ ನಂತರ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರು.
ಆಗಸ್ಟ್ 1, 2024: ಮುಖ್ಯಮಂತ್ರಿಗೆ ಕೊಟ್ಟ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ರಾಜ್ಯಪಾಲರನ್ನು ಸಂಪುಟವು ಒತ್ತಾಯಿಸಿತು.
ಆಗಸ್ಟ್ 3, 2024: ಆರೋಪಗಳನ್ನು ನಿರಾಕರಿಸಿದ ಸಿದ್ದರಾಮಯ್ಯ ನೋಟಿಸ್‌ಗೆ ಪ್ರತಿಕ್ರಿಯಿಸಿದರು.
ಆಗಸ್ಟ್ 3-10, 2024: ಪ್ರತಿಪಕ್ಷಗಳಾದ ಬಿಜೆಪಿ-ಜೆಡಿ(ಎಸ್) ಮೈಸೂರಿಗೆ ಕಾಲ್ನಡಿಗೆ ಜಾಥಾವನ್ನು ಆಯೋಜಿಸಿದವು.
ಆಗಸ್ಟ್ 17, 2024: ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದರು.
ಆಗಸ್ಟ್ 19, 2024: ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಸೆಕ್ಷನ್ 17ಎ ಮತ್ತು ಭಾರತೀಯ ನ್ಯಾಯ ಸುರಕ್ಷಾ ಸಂಹಿತಾ, 2023ರ ಸೆಕ್ಷನ್ 218ರ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.
ಪ್ರಕರಣದ ಮುಂದೂಡಿಕೆ ದಿನಾಂಕ: ವಿಚಾರಣೆಯನ್ನು ಆಗಸ್ಟ್ 29, ನಂತರ ಆಗಸ್ಟ್ 31, ನಂತರ ಸೆಪ್ಟೆಂಬರ್ 9 ಮತ್ತು 12 ಕ್ಕೆ ಮುಂದೂಡಲಾಯಿತು.
ಸೆಪ್ಟೆಂಬರ್ 24, 2024: ಕರ್ನಾಟಕ ಹೈಕೋರ್ಟ್‌ನಿಂದ ತೀರ್ಪು.
ಇದನ್ನೂ ಓದಿ: HC Verdict on CM Siddaramaiah: ಮುಂದುವರಿದ ಮುಡಾ ಸಂಕಷ್ಟ, ಸಿಎಂ ಸಿದ್ದರಾಮಯ್ಯ ಮುಂದಿನ ನಡೆ ಏನು?