Thursday, 19th September 2024

Muda Scam: ಕೋರ್ಟ್ ತೀರ್ಮಾನದ ಮೇಲೆ ಸಿಎಂ ಭವಿಷ್ಯ ನಿರ್ಧಾರವಾಗಲಿದೆ: ಬಸವರಾಜ ಬೊಮ್ಮಾಯಿ

Basavaraja Bommai

ಮಂಡ್ಯ: ಮುಡಾ ಹಗರಣದ (Muda Scam) ವಿಚಾರ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಕೋರ್ಟ್ ಆದೇಶದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದುವರಿಯುತ್ತಾರೋ, ಇಲ್ಲವೋ ಎನ್ನುವುದು ತೀರ್ಮಾನ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಒಂದು ಪ್ರಕರಣವನ್ನು ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವುದು ಇದೇ ಮೊದಲ ಪ್ರಕರಣ ಅಲ್ಲ. ಹಲವಾರು ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ಆಗಿವೆ. ರಾಜ್ಯದಲ್ಲಿಯೂ ಆಗಿವೆ. ಇದೊಂದು ಸ್ಥಾಪಿತ ವ್ಯವಸ್ಥೆ ಆಗಿದೆ. ಹಲವಾರು ಸುಪ್ರೀಂ ಕೋರ್ಟ್ ತೀರ್ಪುಗಳು ಇವೆ. 2018 ರಲ್ಲಿ ಒಂದು ತಿದ್ದುಪಡಿ ಆಗಿದೆ. ಆದರೆ ಆಧಾರದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ. ಸಂವಿಧಾನದ ಕಲಂ 17/2 ತಿದ್ದುಪಡಿ ಆದ ನಂತರ ಏನು ಬದಲಾವಣೆ ಆಗಿದೆ ಎನ್ನುವುದನ್ನು ಇಲ್ಲಿ ಒಂದು ಗಮನಿಸಬೇಕು. ಕಾಂಗ್ರೆಸ್ ಮಿತ್ರರು ಯಾಕೆ ಅಷ್ಟೊಂದು ಆತಂಕಕ್ಕೆ ಒಳಗಾಗಿದ್ದಾರೊ ಗೊತ್ತಿಲ್ಲ ಎಂದರು.

ರಾಜ್ಯಪಾಲರು ಒಂದು ತನಿಖೆ ನಡೆಸುವಂತೆ ಆದೇಶ ಮಾಡಿದ್ದಾರೆ. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಹಾಗೆ ಆಗಿರಲಿಲ್ಲ. ತನಿಖೆ ಅಂತ ಇರಲಿಲ್ಲ. ಪ್ರಾಸಿಕ್ಯೂಷನ್ ಮಾಡಿ ಅಂಥ ಹೇಳಿದ್ದರು. ಎಫ್‌ಐಆರ್ ಆಗಿ ತನಿಖೆಯಾಗಿ, ಚಾರ್ಜ್‌ ಶೀಟ್ ಆದ ನಂತರ ಪ್ರಾಸಿಕ್ಯೂಷನ್ ಮಾಡಲಾಗುತ್ತದೆ. ಅದು ಯಾವುದನ್ನೂ ಮಾಡದೇ ನೇರವಾಗಿ ಸೆಷನ್ಸ್ ಕೋರ್ಟ್‌ಗೆ ಸಮನ್ಸ್ ಮಾಡುವ ಅಧಿಕಾರವನ್ನು ನೀಡಲಾಗಿತ್ತು. ಅವತ್ತಿನ ಗವರ್ನರ್ ಆದೇಶದ ಬಗ್ಗೆ ಹಲವಾರು ಕೋರ್ಟ್‌ಗಳಲ್ಲಿ ಟೀಕೆ ಟಿಪ್ಪಣಿ ಆಗಿ, ಆದೇಶಗಳೂ ಆಗಿವೆ. ಇವತ್ತು ರಾಜ್ಯಪಾಲರು ಕೇವಲ ತನಿಖೆ ನಡೆಸಲು ಹೇಳಿದ್ದಾರೆ. ಕೋರ್ಟ್‌ನಲ್ಲಿ ನಡೆಯುತ್ತಿದೆ. ಅಂತಿಮ ಘಟಕ್ಕೆ ಬಂದಿದೆ. ಏನಾಗುತ್ತದೆಯೋ ಕಾದು ನೋಡೋಣ ಎಂದರು.

ಕಾಂಗ್ರೆಸ್‌ನವರು ಬಿಜೆಪಿ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ರಾಜ್ಯಪಾಲರು ಉತ್ತರ ಕೊಟ್ಟಿದ್ದಾರೆ. ಕೆಲವು ಮಾಹಿತಿ ಕೇಳಿದ್ದೇನೆ ಎಂದು ಹೇಳಿದ್ದಾರೆ. ಅದು ಏನೇ ಇರಲಿ, ಆ ಪ್ರಕರಣಗಳಿಗೂ, ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ತಳಕು ಹಾಕುವ ಕೆಲಸ ಮಾಡಬಾರದು. ಇದು ರಾಜ್ಯದ ಮುಖ್ಯಸ್ಥನ ಮೇಲೆ ಇರುವ ಪ್ರಕರಣ ಆಗಿರುವುದರಿಂದ ಹೆಚ್ಚಿನ ಆದ್ಯತೆ ದೊರೆಯುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮ್ಯಯ ರಾಜೀನಾಮೆ ಕೊಡುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋರ್ಟ್‌ನ ತೀರ್ಮಾನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದುವರಿಯುವ ಬಗ್ಗೆ ತೀರ್ಮಾನ ಆಗಲಿದೆ. ರಾಜಕೀಯವಾಗಿ ಏನೇ ವಿಶ್ಲೇಷಣೆ ಮಾಡಿದರೂ, ಪ್ರಕರಣ ಕೋರ್ಟ್‌ಗೆ ಹೋಗಿರುವುದರಿಂದ ಕೋರ್ಟ್ ಆದೇಶದ ಮೇಲೆ ಅವರ ಭವಿಷ್ಯ ನಿರ್ಧಾರವಾಗಲಿದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಯಾವುದೇ ರೀತಿಯ ಆಧಾರ ಇಲ್ಲದೇ,
ತಮ್ಮನ್ನು ತಾವು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಾಜಕೀಯ ಆರೋಪ ಬಂದಾಗ ಈ ರೀತಿ ಮಾಡುವುದು ಸಹಜ. ಇದೇನು ಹೊಸದಲ್ಲ. ಹಳೆಯ ತಂತ್ರಗಳು ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೊವಿಡ್ ಹಗರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸರ್ಕಾರ ಕೋವಿಡ್ ವಿಚಾರದಲ್ಲಿ ತನಿಖೆ ನಡೆಸಲು ಆಯೋಗ ರಚನೆ ಮಾಡಿದ್ದರು. ಆ ಆಯೋಗ ಸಿಎಂಗೆ ವರದಿ ಸಲ್ಲಿಸಿದೆ. ಅದರಲ್ಲಿ ಏನಿದೆಯೋ ಗೊತ್ತಿಲ್ಲ. ಎಲ್ಲವೂ ಹೊರಗೆ ಬರಲಿ ಅದಕ್ಕೆ ಉತ್ತರ ಕೊಡುತ್ತೇವೆ. ನಮ್ಮ ಕಾಲದ ಹಗರಣದ ಕುರಿತು ತನಿಖೆ ನಡೆಸಲು ಯಾವುದೇ ಅಡ್ಡಿಯಿಲ್ಲ. ಯಾರು ರಾಜಕೀಯವಾಗಿ ಆರೋಪ ಮಾಡಿ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಅವರಿಗೂ ಶಿಕ್ಷೆಯಾಗಲಿ ಎಂದರು.

ಚನ್ನಪಟ್ಟಣ ಟಿಕೆಟ್‌ ಬಗ್ಗೆ ವರಿಷ್ಠರ ತೀರ್ಮಾನ

ಚನ್ನಪಟ್ಟಣ ಉಪಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣ ಉಪ ಚುನಾವಣೆ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಅವರು ತಮ್ಮ ಪಕ್ಷದ ಪಮುಖರ ಜೊತೆಗೆ ಚರ್ಚೆ ಮಾಡುತ್ತಾರೆ ಹಾಗೂ ಎನ್‌ಡಿಎ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಬಿಜೆಪಿ ವರಿಷ್ಠರು ಹಾಗೂ ಕುಮಾರಸ್ವಾಮಿ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.