Sunday, 15th December 2024

MUDA scam: ಮುಡಾ ಕಚೇರಿಯಲ್ಲಿ ED ಶೋಧ ಅಂತ್ಯ: 2 ಬಾಕ್ಸ್‌ಗಳಲ್ಲಿ ದಾಖಲೆ ಹೊತ್ತೊಯ್ದ ಅಧಿಕಾರಿಗಳು

muda case

ಮೈಸೂರು: ಮುಡಾ ಸೈಟ್ ಹಂಚಿಕೆ(MUDA scam)ಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಜಾರಿ ನಿರ್ದೇಶನಾಲಯ(ED) ಶೋಧ ಕಾರ್ಯ ಅಂತ್ಯವಾಗಿದೆ. ತಡರಾತ್ರಿ 2.30ರ ವರೆಗೂ ಇಡಿ ಶೋಧ ಕಾರ್ಯಾಚರಣೆ ನಡೆಸಿದೆ. ಶೋಧ ಕಾರ್ಯಾಚರಣೆ ಮುಗಿಸಿದ ಇಡಿ ಅಧಿಕಾರಿಗಳು ದಾಖಲೆಗಳ ಸಮೇತ ಬೆಂಗಳೂರಿಗೆ ತೆರಳಿದ್ದಾರೆ. ಇನ್ನು ಹಗರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಎರಡು ಬಾಕ್ಸ್‌ಗಳಲ್ಲಿ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ನಿವೇಶನ ಹಂಚಿಕೆಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಜಾರಿ ನಿರ್ದೇಶನ ಅಧಿಕಾರಿಗಳು ದಾಳಿ ನಡೆಸಿ ಎರಡು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎರಡು ಹಾರ್ಡ್ ಡಿಸ್ಕ್ ಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಪತ್ರದ ಮೂಲ ಪ್ರತಿಯನ್ನು ಕೂಡ ಮುಡಾದಿಂದ ವಶಪಡಿಸಿಕೊಂಡಿದ್ದಾರೆ. ತಾಲೂಕು ಕಚೇರಿಯಿಂದಲೂ ಅನೇಕ ದಾಖಲೆ ವಶಕ್ಕೆ ಪಡೆಯಲಾಗಿದೆ.

ತಡರಾತ್ರಿ 11.30ರ ತನಕ ತನಿಖೆ ಸಿಬ್ಬಂದಿ ನಡೆಸಿದರು. ದಾಖಲೆಗಳು ಕಳ್ಳತನ ಆಗಬಾರದು ಎಂದು ಸಿಆರ್​​ಪಿಎಫ್ ಯೋಧರಿಂದ ಮುಡಾಗೆ ಹೆಚ್ಚು ಭದ್ರತೆ ಒದಗಿಸಲಾಗಿದೆ. ಅವರು ಹಾಸಿಗೆ, ದಿಂಬು, ರಗ್ಗು ತರಿಸಿಕೊಂಡು ಮುಡಾದಲ್ಲೇ ಮಲಗಿದ್ದರು. ಸ್ಥಳಕ್ಕೆ ಮೂರು ಹೊತ್ತು ತಿಂಡಿ-ಊಟ ತರಿಸಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಿದ್ದರು.

ಶತಯಗತಾಯ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಬೇಕೆಂದು ನಿರ್ಧರಿಸಿರುವ ಇಡಿ ಅಧಿಕಾರಿಗಳ ತಂಡವು, ಶನಿವಾರ ಬೆಳಿಗ್ಗೆ ಕೂಡ ಮುಡಾ ಕಚೇರಿಗೆ ದೌಡಾಯಿಸಿ ತನಿಖೆ ನಡೆಸಿದ್ದಾರೆ. ಮುಡಾ ಆಯುಕ್ತ ರಘುನಂದನ್ ಅವರು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತಮ್ಮ ಕಚೇರಿಗೆ ದೌಡಾಯಿಸಿದರು. ಇಡಿ ಅಧಿಕಾರಿಗಳ ಸೂಚನೆಯಂತೆ ಮುಡಾಗೆ ಆಗಮಿಸಿದ ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಸೇರಿದಂತೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ನಿರಂತರ ಶೋಧ ಕಾರ್ಯ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದ ಇಡಿ ಅಧಿಕಾರಿಗಳು, ಮುಡಾ ಆಯುಕ್ತ, ಕಾರ್ಯದರ್ಶಿ, ಸಿಬ್ಬಂದಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇನ್ನು ಇದೇ ವೇಳೆ ಆಯುಕ್ತ ರಘುನಂದನ್​ಗೆ ತರಾಟೆ ತೆಗೆದುಕೊಂಡಿದ್ದಾರೆ. ಮುಡಾದ ಕಾರ್ಯದರ್ಶಿ ಪ್ರಸನ್ನ ಕುಮಾರ್ ಅವರಿಗೂ ಸಾಲು ಸಾಲು ಪ್ರಶ್ನೆ ಹಾಕಲಾಗಿತ್ತು. ಸಿಬ್ಬಂದಿಯಿಂದ ಜೆರಾಕ್ಸ್ ಪ್ರತಿಯ ಜತೆಗೆ ಮೂಲ ಪ್ರತಿಗಳಿಗೆ ಹುಡುಕಾಟ ನಡೆಸಿದರು. ರಾತ್ರಿ ಊಟ ತರಿಸಿಕೊಂಡು ನಂತರ ಮತ್ತೊಮ್ಮೆ ತಲಾಶ್ ನಡೆಸಿದ್ದರು. ಒಟ್ಟಾರೆ ಸಂಪೂರ್ಣವಾಗಿ ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ. ಇನ್ನು ಮುಡಾ ಅಧಿಕಾರಿಗಳು ಬಹುಮಹತ್ವದ ದಾಖಲೆಗಳನ್ನು ತಮ್ಮ ಜತೆ ಒಯ್ದಿರುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: MUDA Case: ಬಿಗ್‌ ಅಪ್‌ಡೇಟ್:‌ ಮುಡಾ ಕಚೇರಿಗೆ ಇಡಿ ಅಧಿಕಾರಿಗಳ ದಾಳಿ