Friday, 20th September 2024

Muda Scam: ಪ್ರಾಸಿಕ್ಯೂಷನ್‌ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆ.12ಕ್ಕೆ ಮುಂದೂಡಿಕೆ

CM Siddaramaiah

ಬೆಂಗಳೂರು: ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿ ಪ್ರಾಸಿಕ್ಯೂಷನ್​ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆಯಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿಯ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿದೆ.

ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು 17 ಎ ಅಡಿ ಪ್ರಾಸಿಕ್ಯೂಷನ್‌ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು. ಇದು 22 ವರ್ಷಕ್ಕಿಂತ ಹಳೆಯ ಕೇಸ್ ಆಗಿರುವುದರಿಂದ ಪ್ರಾಥಮಿಕ ತನಿಖೆ ಅಗತ್ಯವಿದೆ. ರಾಜ್ಯಪಾಲರು ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡುವ ಬದಲು ವರದಿ ಪಡೆಯಬೇಕಿತ್ತು. ವರದಿಯ ಬಲವಿಲ್ಲದೇ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದರು.

ಇನ್ನು ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಿದ ಲಕ್ಷ್ಮೀ ಅಯ್ಯಂಗಾರ್‌ ಅವರು, 1996-1999 ಅವಧಿಯಲ್ಲಿ ಸಿದ್ದರಾಮಯ್ಯ ಅವರು ಡಿಸಿಎಂ ಆಗಿದ್ದಾಗ ಡಿನೋಟಿಫಿಕೇಷನ್‌ ಮಾಡಲಾಗಿದೆ. 2004-07ರಲ್ಲಿ ಡಿಸಿಎಂ ಆಗಿದ್ದಾಗ ಭೂ ಪರಿವರ್ತನೆ ಆಗಿದ್ದು, 2013-18ರವರೆಗೆ ಸಿಎಂ ಆಗಿದ್ದಾಗ ಪರಿಹಾರದ ಸೈಟ್‌ಗೆ ಅರ್ಜಿ ಸಲ್ಲಿಸಲಾಗಿದೆ. 2018-22ರವರೆಗೆ ಸಿದ್ದರಾಮಯ್ಯ ಶಾಸಕರಾಗಿದ್ದರು. ಇನ್ನು ಸರ್ಕಾರಿ ಗೆಸ್ಟ್‌ ಹೌಸ್‌ನಲ್ಲಿ ಮುಡಾದಿಂದ ಸೇಲ್‌ ಡೀಡ್‌ ಮಾಡಿಕೊಟ್ಟಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಹೀಗೆ ಮಾಡಿದ್ದಾರೆ ಎಂದು ಹೇಳಿದರು.

ನಂತರ ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಸೆಪ್ಟೆಂಬರ್ 12ರಂದು ವಾದ ಮಂಡಿಸುವುದಾಗಿ ಕೋರ್ಟ್​ಗೆ ಮನವಿ ಮಾಡಿದರು. ಹೀಗಾಗಿ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿಕೆ ಮಾಡಿದೆ.

ನಟ ದರ್ಶನ್‌ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ (Actor Darshan) ಸೇರಿ 17 ಆರೋಪಿಗಳಿಗೆ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆಯಾಗಿದೆ. ಸೆಪ್ಟೆಂಬರ್ 12 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ 24ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿದೆ.

ನ್ಯಾಯಾಂಗ ಬಂಧನ ಅವಧಿ ಇಂದಿಗೆ (ಸೆ.9) ಮುಕ್ತಾಯವಾದ ಹಿನ್ನೆಲೆಯಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶರು, ಆರೋಪಿಗಳಿಗೆ ಸೆ.12ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದರಿಂದ, ಸದ್ಯಕ್ಕೆ ದರ್ಶನ್ ಗ್ಯಾಂಗ್‌ಗೆ ಜೈಲುವಾಸದಿಂದ ಮುಕ್ತಿ ಇಲ್ಲದಂತಾಗಿದೆ.

ಈ ಸುದ್ದಿಯನ್ನೂ ಓದಿ | Fake Marks Card: ಎಸ್‌ಡಿಎ ನೇಮಕಾತಿ ಅಕ್ರಮ; ನಕಲಿ ಅಂಕಪಟ್ಟಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಸಿಸಿಬಿ ನೋಟಿಸ್‌

ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್ ಸೇರಿ ಹಲವು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ನ್ಯಾಯಾಧೀಶರು ಪರಿಶೀಲನೆ ನಡೆಸಲಿದ್ದಾರೆ.

ಇನ್ನು ಆರೋಪಿಗಳಿಗೆ ಈಗಾಗಲೇ ಚಾರ್ಜ್‌ ಶೀಟ್‌ ಪ್ರತಿ ಸಿಕ್ಕಿರುವುದರಿಂದ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇತ್ತೀಚೆಗೆ ಬಳ್ಳಾರಿ ಜೈಲಿಗೆ ಹೋಗಿದ್ದ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್‌ ತೂಗುದೀಪ ಅವರು ಜಾಮೀನು ವಕಾಲತ್ತಿಗೆ ದರ್ಶನ್‌ ಅವರಿಂದ ಸಹಿ ಪಡೆದಿದ್ದರು.