Thursday, 19th September 2024

Muda Scam: ಸಿಎಂ ವಿರುದ್ಧ ಪಾಸಿಕ್ಯೂಷನ್‌ ಪ್ರಶ್ನಿಸಿ ಅರ್ಜಿ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Muda Scam

ಬೆಂಗಳೂರು: ಮುಡಾದ ನಿವೇಶನ ಹಗರಣಕ್ಕೆ(Muda Scam) ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಗುರುವಾರ ನಡೆಯಿತು. ಸುದೀರ್ಘ ವಾದ-ಪ್ರತಿವಾದ ಆಲಿಸಿದ ಬಳಿಕ ತೀರ್ಪು ಕಾಯ್ದಿರಿಸಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು. ಸಿಎಂ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿ, ಕೆಸೆರೆ ಗ್ರಾಮದ ಜಮೀನನ್ನು 1992ರಲ್ಲಿ ಮುಡಾ ಸ್ವಾಧೀನ ಮಾಡಿಕೊಂಡಿತ್ತು. 1993ರ ಏ.10ರಂದು ದೇವರಾಜು ಎಂಬುವವರ ಹೆಸರಿನಲ್ಲಿ ಪೌತಿ ಖಾತೆಯಾಗಿತ್ತು. ನಂತರ ಕಾನೂನು ಪ್ರಕಾರವೇ ಜಮೀನು ಭೂ ಪರಿವರ್ತನೆಯಾಗಿದೆ ಎಂದು ಹೇಳಿದರು.

ಯಾರಿಗೂ ಶೋಕಾಸ್‌ ನೋಟಿಸ್‌ ಕೊಟ್ಟಿಲ್ಲ ಎಂದರೆ ಅಗತ್ಯವಿಲ್ಲ ಎನ್ನಬಹುದಿತ್ತು. ಆದರೆ, ಒಬ್ಬರ ದೂರಿಗೆ ಮಾತ್ರ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ಆದರೆ, ಇನ್ನಿಬ್ಬರ ದೂರಿಗೆ ರಾಜ್ಯಪಾಲರಿಂದ ಶೋಕಾಸ್‌ ನೋಟಿಸ್‌ ಕೊಟ್ಟಿಲ್ಲ. ಇನ್ನು ಯಾರು ದೂರು ಕೊಟ್ಟಿದ್ದಾರೋ ಅವರು, ಸಂಶಯಾಸ್ಪದ ವ್ಯಕ್ತಿಗಳಾಗಿದ್ದಾರೆ. ಅವರು ಕೊಟ್ಟ ದೂರನ್ನು ರಾಜ್ಯಪಾಲರು ಹೇಗೆ ಪರಿಗಣಿಸುತ್ತಾರೆ. ಇದು ಸಿಎಂ ವಿರುದ್ಧದ ಭ್ರಷ್ಟಾಚಾರ ಆರೋಪವಲ್ಲ. ಅವರ ಪತ್ನಿ ವಿರುದ್ಧದ ಆರೋಪವಾಗಿದೆ. 50:50 ನಿವೇಶನ ಹಂಚಿಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ. ಇದಕ್ಕೂ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.

ಸಿಎಂ ಪರ ಮತ್ತೊಬ್ಬ ವಕೀಲ ಪ್ರೊ.ರವಿವರ್ಮ ಕುಮಾರ್‌ ವಾದ ಮಂಡಿಸಿ, ಪ್ರಕರಣದಲ್ಲಿ ವಿಚಾರಣೆ ಆರಂಭವಾದ ಬಳಿಕ ರಾಜ್ಯಪಾಲರಿಗೆ ಕಡತ ಸಲ್ಲಿಸಲಾಗಿದೆ. ಅಧಿಕಾರ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ರಾಜ್ಯಪಾಲರು ಉಲ್ಲೇಖಿಸಿದ್ದು, ಸಹಿ ಹಾಕಿದ ಬಳಿಕ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ಟಿ.ಜೆ.ಅಬ್ರಹಾಂ ಸಲ್ಲಿಸಿರುವ ದೂರಿನ ಮೇರೆಗೆ ನೋಟಿಸ್‌ ನೀಡಿದ್ದಾರೆ. ಆದರೆ, ಅದಕ್ಕೂ ಮೊದಲು(ಜು.5) ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದರು. ಆದರೆ, ಕಡತದಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ. ಹೀಗಾಗಿ ರಾಜಕೀಯ ಪ್ರೇರಿತವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂಬುವುದು ತಿಳಿಯುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ಯಾವುದೇ ಆಧಾರವಿಲ್ಲದೇ, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್‌ 17ಎ ಅಡಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | CM’s Bengaluru Rounds: ಸಿಎಂ ಬೆಂಗಳೂರು ಸಿಟಿ ರೌಂಡ್ಸ್‌; ರಸ್ತೆ, ಮೂಲ ಸೌಕರ್ಯ ಕಾಮಗಾರಿಗಳ ವೀಕ್ಷಣೆ

ದೂರುದಾರ ಟಿ.ಜೆ.ಅಬ್ರಹಾಂ ಪರ ವಾದ ಮಂಡಿಸಿದ ರಂಗನಾಥ್‌ ರೆಡ್ಡಿ ಅವರು, ಸಿಎಂ ವಿರುದ್ಧದ ಈ ಆರೋಪಗಳ ಬಗ್ಗೆ ತನಿಖೆ ಅಗತ್ಯವಿದೆ ಎಂದು ಮನವಿ ಮಾಡಿದರು. ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದರು.