ಬೆಂಗಳೂರು: ಮುಡಾ ಹಗರಣ (MUDA Scandal) ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಇಂದು ನಡೆದು, ಮುಂದಿನ ಸೋಮವಾರದವರೆಗೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಹೀಗಾಗಿ, ಮುಂದಿನ ಸೋಮವಾರದವರೆಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ರಿಲೀಫ್ ದೊರೆತಿದೆ.
ಮುಡಾ ಹಗರಣದ ಪ್ರಾಸಿಕ್ಯೂಷನ್ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ (High court) ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಈಗಾಗಲೇ 2-3 ದಿನ ವಿಚಾರಣೆ ನಡೆದಿದ್ದು, ಸುದೀರ್ಘ ವಾದ, ಪ್ರತಿವಾದವನ್ನು ನ್ಯಾಯಪೀಠ ಆಲಿಸಿದೆ. ಆಗಸ್ಟ್ 19, ಆಗಸ್ಟ್ 29 ಮತ್ತು ಆಗಸ್ಟ್ 31ರಂದು ಸುದೀರ್ಘ ವಾದ ಪ್ರತಿವಾದ ನಡೆದಿತ್ತು. ಇವತ್ತು ಕೂಡಾ ಅರ್ಜಿ ವಿಚಾರಣೆ ನಡೆದಿದ್ದು, ಸ್ನೇಹಮಯಿ ಕೃಷ್ಣ ಪರವಾಗಿ ನ್ಯಾಯವಾದಿ ಕೆ. ಜಿ. ರಾಘವನ್ ವಾದ ಮಂಡಿಸಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ಬಳಸದಿದ್ದರೂ, ಅವರ ಪ್ರಭಾವದಿಂದ ಆಗಿದ್ದರೂ ಈ ಕಾಯಿದೆ ಅಡಿಯಲ್ಲಿ ತನಿಖೆ ನಡೆಸಬಹುದು. ಅಧಿಕೃತ ಕಚೇರಿಯಿಂದಲೇ ಇದು ಆಗಬೇಕಿಲ್ಲ. ಅಧಿಕಾರಿಯನ್ನು ಉಪಯೋಗಿಸಿಕೊಂಡು ಆಗಿದ್ದರೂ ಅಧಿಕಾರದ ದುರುಪಯೋಗ ಆಗುತ್ತದೆ ಎಂದು ರಾಘವನ್ ವಾದಿಸಿದರು.
ಇದನ್ನು ನಾವು ಸಣ್ಣ ವಿಚಾರವಾಗಿ ನೋಡಬಾರದು. ಇದನ್ನು ವಿವರವಾಗಿ ಅರ್ಥ ಮಾಡಿಕೊಳ್ಳಬೇಕು. ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟ ಬಳಿಕ ನ್ಯಾಯಾಧೀಶರ ತನಿಖೆ ಆಗಬೇಕು. ಎಸ್‌ಐಟಿ ನೀಡುವ ರಿಪೋರ್ಟ್ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡುತ್ತಾರೆ. ತನಿಖೆ ಈ ಪ್ರಕರಣದಲ್ಲಿ ಅಗತ್ಯವಿದೆ ಎಂದು ವಾದಿಸಿದರು.
ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಕೊಟ್ಟಿರುವುದು ಯಾರೋ ಅಧಿಕಾರಿ ಮೇಲೆ ಅಲ್ಲ. ಮುಖ್ಯಮಂತ್ರಿಗಳ ಮೇಲೆ. ಇವರು ಸಂವಿಧಾನದ ಉನ್ನತ ಹುದ್ದೆಯಲ್ಲಿ ಇರೋರು. ಹೀಗಾಗಿ ಮುಖ್ಯಮಂತ್ರಿಗಳ ಮೇಲೆ ಕೊಟ್ಟ ಪ್ರಾಸಿಕ್ಯೂಶನ್ ಕ್ರಮ ಸರಿಯಾ ತಪ್ಪಾ ಎಂಬುದನ್ನು ಹೈಕೋರ್ಟ್ ನಿರ್ಧಾರ ಮಾಡಬೇಕು. ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಈ ಅರ್ಜಿ ಇತ್ಯರ್ಥ ಮಾಡುವ ಅಧಿಕಾರವಿಲ್ಲ ಎಂದು ರಾಘವನ್ ವಾದಿಸಿದರು.
ಮುಡಾದ 40-60 ಫಾರ್ಮುಲಾ ಒಪ್ಪದೇ ಬೇರೆ ಜಮೀನು ಕೊಡುವಂತೆ ಪಾರ್ವತಮ್ಮ ಪತ್ರ ಕೊಟ್ಟಿದ್ದರು. ಲೇಔಟ್ ಅಭಿವೃದ್ಧಿ ಪಡಿಸಿರುವುದರಿಂದ ಅವರಿಗೆ ಬದಲಿ ನಿವೇಶನ ಕೊಡಲು ಒಪ್ಪಿಗೆ ಸೂಚಿಸಿದರು. ಒಂದು ಕಡೆ ಪರಿಹಾರ ಕೊಟ್ಟಿದ್ದಾರೆ. ಮತ್ತೊಂದು ಕಡೆ 14 ನಿವೇಶನಗಳನ್ನು ಪಡೆದಿದ್ದಾರೆ. ಕಡಿಮೆ ಬೆಲೆಯ ಜಮೀನು ಕೊಟ್ಟು ಹೆಚ್ಚು ಬೆಲೆ ಬಾಳುವ ಜಮೀನು ಪಡೆಯಲು ಮುಂದಾಗಿದ್ದಾರೆ. ಕೆಸರೆ ಜಮೀನು ಕೊಟ್ಟು ವಿಜಯನಗರ ನಿವೇಶನ ಪಡೆಯಲು ಮನವಿ ನೀಡಿದ್ದಾರೆ. ಅಧಿಕಾರಿಗಳು ಸಹ ಇದಕ್ಕೆ ಮೌನ ವಹಿಸಿದ್ದಾರೆ. ಇದರಲ್ಲಿ ಎಲ್ಲವೂ ಅನುಮಾನಕ್ಕೆ ಕಾರಣವಾಗಿವೆ. ಹೀಗಾಗಿ ಈ ಪ್ರಕರಣ ತನಿಖೆ ಆಗಬೇಕು ಎಂದು ರಾಘವನ್ ಮನವಿ ಮಾಡಿದರು.
ಸಿದ್ದರಾಮಯ್ಯ ಅವರ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಕಾನ್ಫರೆನ್ಸ್ ಕಾಲ್‌ನಲ್ಲಿ ವಿಚಾರಣೆಗೆ ಹಾಜರಾದರು. ಮತ್ತಷ್ಟು ವಾದ ಮಂಡಿಸಲು ಸೋಮವಾರದವರೆಗೆ ಅಡ್ವೋಕೇಟ್ ಜನರಲ್ ಸಮಯ ಕೇಳಿದರು. ಎಜಿ ಬಳಿಕ ನಾನು ವಾದ ಮಂಡಿಸುತ್ತೇನೆ ಎಂದು ಸಿಂಘ್ವಿ ತಿಳಿಸಿದರು. ಹೀಗಾಗಿ ಮುಂದಿನ ವಾದಗಳ ದಿನಾಂಕವನ್ನು ಸೆಪ್ಟೆಂಬರ್ 9 ಹಾಗೂ 12ರಂದು ನ್ಯಾಯಾಧೀಶರು ನಿಗದಿಪಡಿಸಿದರು.
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಇದನ್ನು ರದ್ದುಪಡಿಸಬೇಕು ಎಂದು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.