Sunday, 24th November 2024

Mumtaz ali Death case: ಮುಮ್ತಾಜ್ ಅಲಿ ಸಾವು ಪ್ರಕರಣ; ಪ್ರಮುಖ ಆರೋಪಿ ರೆಹಮತ್ ಸೇರಿ ಮೂವರ ಬಂಧನ

Mumtaz ali Death case

ಮಂಗಳೂರು: ಮಾಜಿ ಶಾಸಕ ಮೊಯಿದ್ದಿನ್‌ ಬಾವಾ ಸಹೋದರ, ಉದ್ಯಮಿ ಮುಮ್ತಾಜ್ ಅಲಿ ಸಾವು ಪ್ರಕರಣಕ್ಕೆ (Mumtaz ali Death case) ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರಕರಣದ ಎ1 ಆರೋಪಿ ಆಯಿಷಾ ಅಲಿಯಾಸ್ ರೆಹಮತ್, ಪತಿ ಎ5 ಶೊಯೆಬ್ ಮತ್ತು ಸಿರಾಜ್‌ನನ್ನು ಬಂಧಿಸಲಾಗಿದೆ.

ಅಲಿ ನಾಪತ್ತೆಯಾದ ಬಳಿಕ ಆರೋಪಿ ರೆಹಮತ್ ಕೇರಳಕ್ಕೆ ಪರಾರಿಯಾಗಿದ್ದರು ಎನ್ನಲಾಗಿತ್ತು. ಆದರೆ ಇದೀಗ ಬಂಟ್ವಾಳದ ಕಲ್ಲಡ್ಕ ಬಳಿ ರೆಹಮತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಪ್ರಕರಣ ಪ್ರಮುಖ ಮಾಸ್ಟರ್ ಮೈಂಡ್ ಎ2 ಆರೋಪಿ ಅಬ್ದುಲ್ ಸತ್ತಾರ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿಗಳು ಮುಮ್ತಾಜ್ ಆಲಿ ಅವರನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು ಎನ್ನಲಾಗಿದೆ. ಮುಮ್ತಾಜ್ ಅವರನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಘಟನೆಗೆ ಸಂಬಂಧಿಸಿದಂತೆ 6 ಜನರ ಮೇಲೆ ಕಾವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ನಾಪತ್ತೆಯಾಗಿದ್ದ ಆರೋಪಿ ರೆಹಮತ್ ಕೇರಳಕ್ಕೆ ಪರಾರಿಯಾಗಿದ್ದರು ಎನ್ನಲಾಗಿತ್ತು. ಆದರೆ ಇದೀಗ ಬಂಟ್ವಾಳದ ಕಲ್ಲಡ್ಕ ಬಳಿ ರೆಹಮತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸಹೋದರ ಮುಮ್ತಾಜ್‌ ಅಲಿ ಅವರ ಶವ ಕೂಳೂರು ಸೇತುವೆಯ ಕೆಳಗೆ ನದಿಯ ನೀರಿನಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಮುಮ್ತಾಜ್‌ ಅಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದರ ಹಿಂದೆ ಲಕ್ಷಾಂತರ ರೂಪಾಯಿ ಹಣದ ಸುಲಿಗೆ (Extortion), ಬ್ಲ್ಯಾಕ್‌ಮೇಲ್‌ (Blackmail) ಹಾಗೂ ಹಲ್ಲೆ (Assault case) ಕೂಡ ಇದೆ ಎಂದು ಗೊತ್ತಾಗಿತ್ತು.

ನಂತರ ಒಬ್ಬ ಮಹಿಳೆ ಸೇರಿದಂತೆ ಆರು ಮಂದಿಯ ಮೇಲೆ ಮುಮ್ತಾಜ್ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಮುಮ್ತಾಜ್ ಅಲಿ ಸಹೋದರ ಹೈದರ್ ಆಲಿಯಿಂದ ದೂರು ನೀಡಿದ್ದು, ಕಾವೂರು ಠಾಣೆಯಲ್ಲಿ ನೀಡಿರುವ ದೂರಿನ ಅನ್ವಯ ಮಹಿಳೆ ಸಹಿತ ಆರು ಮಂದಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.

ಈ ಸುದ್ದಿಯನ್ನೂ ಓದಿ | Actor Darshan: ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಮುಮ್ತಾಜ್ ಅಲಿಗೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಬೇಡಿಕೆ ಇಡಲಾಗಿತ್ತು. ಮಹಿಳೆಯನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ ಎಂದು ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶುಐಬ್, ಸತ್ತರ್ ಮತ್ತು ಮುಮ್ತಾಜ್ ಕಾರು ಚಾಲಕ ಸಿರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಹಿಳೆ ಮೂಲಕ ಬ್ಲ್ಯಾಕ್ ಮೇಲ್ ಮಾಡಿ 50 ಲಕ್ಷ ರೂಪಾಯಿಗಿಂತ ಅಧಿಕ ಹಣಕಾಸು ವಸೂಲಿ ಮಾಡಿದ್ದಾರೆ. ಇನ್ನಷ್ಟು ಹಣ ನೀಡಲು ಒಪ್ಪದೆ ಹೋದಾಗ ಆರೋಪಿಗಳು ಮುಮ್ತಾಜ್ ಅಲಿ ಮೇಲೆ ಹಲ್ಲೆ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದರು.