Sunday, 6th October 2024

Mumtaz Ali Missing case: ಮುಮ್ತಾಜ್‌ ಅಲಿ ಪತ್ತೆಗಿಳಿದ ಈಶ್ವರ ಮಲ್ಪೆ ತಂಡ; ಮಹಿಳೆಯ ಬ್ಲ್ಯಾಕ್‌ಮೇಲ್‌ ಕಾರಣ?

mumtaz ali missing

ಮಂಗಳೂರು: ನಗರದ ಬಳಿಯ ಕೂಳೂರು (Mangalore crime News) ಸೇತುವೆ ಮೇಲೆ ಕಾರು ನಿಲ್ಲಿಸಿ ನಾಪತ್ತೆಯಾಗಿರುವ ಉದ್ಯಮಿ, ಮಾಜಿ‌ ಶಾಸಕ ಮೊಯ್ದಿನ್ ಬಾವಾ ಅವರ ಸೋದರ ಮುಮ್ತಾಜ್ (Mumatz ali missing case) ಆಲಿಯವರಿಗಾಗಿ ಹುಡುಕಾಟ ಮುಂದುವರೆದಿದೆ. ಮಹಿಳೆಯೊಬ್ಬರು ಇವರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದು, ಆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬುದು ಎಂದು ಶಂಕಿಸಲಾಗಿದೆ.

ಕೂಳೂರು ಸೇತುವೆಯ ಮೇಲೆ ಕಾರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೂಳೂರು ಸೇತುವೆ ಬಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಮುಳುಗುತಜ್ಞ ಈಶ್ಚರ ಮಲ್ಪೆ ತಂಡ ಸಹಿತ ಹಲವು ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿವೆ. ಮಾಜಿ ಶಾಸಕ ಮೊಯ್ದಿನ್ ಬಾವಾ ಕೂಡ ಸ್ಥಳದಲ್ಲಿದ್ದು ಕಾರ್ಯಾಚರಣೆ ಪರಿಶೀಲಿಸಿದರು.

ಒಂದು ಹಂತದ ಹುಡುಕಾಟದ ನಡೆಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ನಾವು ಏಳು ಜನ ಆಳಕ್ಕೆ ಮುಳುಗಿ ಕಾರ್ಯಾಚರಣೆ ನಡೆಸಿದ್ದೇವೆ, ಆದರೆ ಎಲ್ಲೂ ಕೂಡ ಪತ್ತೆಯಾಗಿಲ್ಲ ಎಂದರು. ಸದ್ಯಕ್ಕೆ 100 ಮೀಟರ್ ಸುತ್ತುತ್ತಾ ಹುಡುಕಾಟ ನಡೆಸಲಾಗಿದೆ. ಸೇತುವೆ ಆಳಕ್ಕೆ ಇಳಿದು ಹುಡುಕಾಟ ನಡೆಸಿದ್ದೇವೆ. ಸೇತುವೆ ಕಾಮಗಾರಿ ನಡೆಯುತ್ತಿದ್ದು ಕೆಳಗೆ ಕಬ್ಬಿಣದ ಸರಳು, ಸಿಮೆಂಟ್ ಚೀಲಗಳಿವೆ. ಕೆಳಗೆ ಕತ್ತಲೆ ಇರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಹೇಳಿದರು.

ಎಲ್ಲಾ ತಂಡಗಳು ಕಾರ್ಯಾಚರಣೆಯನ್ನು ಮತ್ತೆ ಮುಂದುವರೆಸುತ್ತೇವೆ. ಅವರು ಜೀವಂತವಾಗಿ ಇರಲಿ ಎಂದು ಆಶಿಸುತ್ತೇವೆ ಎಂದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಲಿ ಅವರ ಸಹೋದರ ಬಿ.ಎಂ ಫಾರೂಕ್, ಐವನ್ ಡಿಸೋಜ ಭೇಟಿ ನೀಡಿದ್ದಾರೆ.

ಮಹಿಳೆ ಬ್ಲ್ಯಾಕ್‌ಮೇಲ್?‌

ಮಹಿಳೆಯೊಬ್ಬರು ಮುಮ್ತಾಜ್ ಅಲಿಗೆ ನಿರಂತರವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಮದುವೆ ಆಗುವಂತೆ ಮುಮ್ತಾಜ್‌ಗೆ ಮಹಿಳೆ ಪೀಡಿಸುತ್ತಿದ್ದಳು ಎಂಬ ದೂರು ಕೇಳಿಬಂದಿದೆ. ಮಹಿಳೆಯ ಬ್ಲ್ಯಾಕ್‌ಮೇಲ್‌ಗೆ ಸುರತ್ಕಲ್‌ನ ನಾಲ್ವರು ಸಹಕಾರ ಕೊಟ್ಟಿದ್ದಾರೆ. ಮಸೀದಿ ಕಮಿಟಿ ವಿಚಾರದಲ್ಲಿ ಮುಮ್ತಾಜ್ ನಾಲ್ವರ ಜೊತೆ ಜಗಳ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮುಮ್ತಾಜ್ ಅಲಿ ಮನೆಯಿಂದ ಹೊರಟಿದ್ದರು. ಬಳಿಕ 5 ಗಂಟೆ ಸುಮಾರಿಗೆ ಕೂಳೂರು ಸೇತುವೆ ಮೇಲೆ ಮುಮ್ತಾಜ್ ಬಿಎಂಡಬ್ಲ್ಯು ಕಾರು ದೊರೆತಿದೆ. ಅವರ ಪುತ್ರಿಗೆ ಈ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರಿಗೆ ಸಣ್ಣದೊಂದು ಅಪಘಾತ ಆದಂತೆ ಕಾಣಿಸುತ್ತಿದೆ. ಮುಮ್ತಾಜ್ ಅಲಿ ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Missing Boys: ಮಿಸ್ಸಿಂಗ್‌ ಹುಡುಗರ ಪತ್ತೆಗೆ ನೆರವಾಯ್ತು 500 ಸಿಸಿಟಿವಿ ಕ್ಯಾಮೆರಾ, ಏಳು ಪೊಲೀಸರ ತಂಡ