Sunday, 15th December 2024

ಸಚಿವ ಮುನೇನಕೊಪ್ಪಗೆ ಭ್ರಾತೃ ವಿಯೋಗ

ಸಾವಿನಲ್ಲೂ ಸಾರ್ಥಕತೆ ಮೆರೆದ ಡಾ.ಎಂ.ಬಿ.ಮುನೇನಕೊಪ್ಪ

ತಾವು ಕಲಿತ ಕಿಮ್ಸ್ ವೈದ್ಯಕೀಯ ಕಾಲೇಜಿಗೆ ದೇಹದಾನ

ಇಬ್ಬರು ಅಂಧರ ಬಾಳಿಗೆ ಬೆಳಕು -ದೇಹದಾನ, ನೇತ್ರದಾನ ಮಾಡಿ ಮೇಲ್ಪಂಕ್ತಿ

ಹುಬ್ಬಳ್ಳಿ: ಇಲ್ಲಿಯ ಅಶೋಕನಗರ ನಿವಾಸಿ, ನವಲಗುಂದ ತಾಲೂಕಿನ ಅಮರಗೋಳ ಮೂಲದ ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಲ್ಲನಗೌಡ ಬಸನಗೌಡ ಮುನೇನ ಕೊಪ್ಪ(69)ಬುಧವಾರ ಮಧ್ಯಾಹ್ನ ನಿಧನರಾದರು.

ಮೃತರು ಪತ್ನಿ, ಪುತ್ರಿಯರು, ಸಹೋದರ ರಾಜ್ಯ ಸಂಪುಟದಲ್ಲಿ ಕೈಮಗ್ಗ,ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಸೊಸೆಯಂದಿರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಮೃತರ ಆಶಯದಂತೆ ಅವರ ನೇತ್ರಗಳನ್ನು ನಗರದ ಡಾ. ಎಂ.ಎಂ. ಜೋಶಿ ನೇತ್ರ ಭಂಡಾರಕ್ಕೆ ದಾನವಾಗಿ ನೀಡಿದ್ದು ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ ಹಾಗೂ ವೈದ್ಯ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅವರು ವೈದ್ಯಕೀಯ ವಿದ್ಯಾಭ್ಯಾಸ ಮಾಡಿದ ಕಿಮ್ಸ್ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು.

ಸಾಮಾನ್ಯವಾಗಿ ನಿಧನರಾದ ನಂತರ ಹೂಳುವ ಅಥವಾ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರ ಮಾಡುವುದು ಸರ್ವೇ ಸಾಮಾನ್ಯವಾಗಿದೆ.ಆದರೇ ಮರಣದ ನಂತರ ನೇತ್ರದಾನವಲ್ಲದೇ ದೇಹ ದಾನ ಮಾಡಬೇಕೆಂದು ತನ್ನ ಪತ್ನಿ, ಸಹೋದರ, ಬಂಧು ಬಳಗದವರಿಗೆಲ್ಲಾ ಹೇಳಿ ಅದೇ ರೀತಿ ದೇಹ ದಾನ ಮಾಡಿಸಿಕೊಂಡ ಡಾ.ಮಲ್ಲನಗೌಡರು ಸಾವಿನ ನಂತರವೂ ಸಾರ್ಥಕತೆಯ ದೀಪ ಹಚ್ಚಿದ್ದಾರೆ.

ದೇಹದ ಹಲವಾರು ಅಂಗಾಂಗಗಳು ನಮ್ಮ ಸಾವಿನ ನಂತರವೂ ಇತರರ ಜೀವನಕ್ಕೆ ದಾರಿದೀಪವಾಗಲಿದೆ.ಸಾವಿನ ನಂತರದಲ್ಲಿ ಅಂಗಾಂಗ ದಾನಕ್ಕೆ ಹಾಗೂ ದೇಹದಾನಕ್ಕೆ ಕೈ ಜೋಡಿಸುವ ಮೂಲಕ ಜೀವನದಲ್ಲಿ ಸಾರ್ಥಕತೆ ಪಡೆಯಬೇಕು. ಅಲ್ಲದೇ ದೇಹ ವನ್ನು ತಾನು ಅಧ್ಯಯನ ಮಾಡಿದ ಕಿಮ್ಸ್‌ಗೆ ನೀಡಬೇಕೆಂಬುದು ಅವರ ಆಶಯ ವಾಗಿತ್ತು.ಅದರಂತೆ ದೇಹ ದಾನ ಮಾಡಲಾಗು ತ್ತಿದೆ ಎಂದು ಮೃತರ ಕಿರಿಯ ಸಹೋದರ ಸಚಿವರಾಗಿರುವ ಶಂಕರ ಪಾಟೀಲ ಹೇಳಿದರು.

ಸೇನೆಯಲ್ಲಿ ಸಲ್ಲಿಸಿ ಮರಳಿ ನಂತರ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡ ಅಮರಗೋಳದ ಲಿಂ.ಬಸನಗೌಡ ಪಾಟೀಲ ಮುನೇನ ಕೊಪ್ಪ ಅವರ ಹಿರಿಯ ಪುತ್ರರಾಗಿದ್ದ ಮಲ್ಲನಗೌಡರು 1953 ಅಗಸ್ಟ 10ರಂದು ಜನಿಸಿ ಲ್ಯಾಮಿಂಗ್ಟನ್ ಹೈಸ್ಕೂಲ್‌ನಲ್ಲಿ ಮಾದ್ಯಮಿಕ ಶಿಕ್ಷಣ ಪೂರೈಸಿದರು.ತದನಂತರ ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಪಿಯುಸಿ, ಬಿಎಸ್‌ಸಿ ಡಿಗ್ರಿ ಪಡೆದರಲ್ಲದೇ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ರ್‍ಯಾಂಕ್ ಪಡೆದು ನೇರವಾಗಿ ಎಂಬಿಬಿಎಸ್‌ಗೆ ಆಯ್ಕೆಯಾದರು.

1981ರಲ್ಲಿ ಹುಬ್ಬಳ್ಳಿ ಪ್ರತಿಷ್ಠಿತ ಕಿಮ್ಸ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿ ಗೋಪನಕೊಪ್ಪ ಪ್ರದೇಶದಲ್ಲಿ ಸೇವೆ ಆರಂಭಿಸಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಡವರ ವೈದ್ಯರೆಂದೆ ಖ್ಯಾತರಾಗಿದ್ದರು. ನಂತರ ಸರ್ಕಾರಿ ಸೇವೆಗೆ ಸೇರಿ ಅಳಗವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿ, ತಾಲೂಕಾ ಆರೋಗ್ಯಾಧಿಕಾರಿಯಾಗಿ, ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಅಲ್ಲದೇ ಜಿಲ್ಲಾ ಕ್ಷಯರೋಗ ವಿಭಾಗದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದರು. ಈಗಲೂ ಡಾ.ಮುನೇನಕೊಪ್ಪ ಅವರ ಪ್ರಾಮಾಣಿಕ ಸೇವೆಯನ್ನು ನವಲಗುಂದ ತಾಲೂಕಿನ ಜನ ಸ್ಮರಿಸಿಕೊಳ್ಳುತ್ತಾರೆ.

ಸೇವೆಯಿಂದ ನಿವೃತ್ತರಾದ ನಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಮಲ್ಲನಗೌಡರು ನವಲಗುಂದ ಶಾಸಕರಾಗಿ ತಮ್ಮ ಸಹೋದರ ಆಯ್ಕೆಯಾದ ನಂತರ,ಅಲ್ಲದೇ ಎರಡನೇ ಬಾರಿ ಗೆಲುವು ಸಾಧಿಸಿ ಸಚಿವರಾದ ಮೇಲೆ ಕ್ಷೇತ್ರದ ತುಂಬಾ ಒಡಾಡುತ್ತಾ ಜನರ ಸಂಕಷ್ಟಗಳನ್ನು ಆಲಿಸಿ ಸಹೋದರನ ಅಭಿವೃದ್ಧಿ ಗುರಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು.

ಜಿಲ್ಲಾ ಲಿಂಗಾಯತ ಸಮುದಾಯದ ಮುಖಂಡರಾಗಿ,ಹುಬ್ಬಳ್ಳಿ ಹೋಲಸೇಲ್ ಸ್ಟೋರ್ಸ ನಿರ್ದೇಶಕರಾಗಿ ಸಹಕಾರಿ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿ ದ್ದರಲ್ಲದೇ ನವಲಗುಂದ ತಾಲೂಕಾ ಬಿಜೆಪಿ ಉಪಾಧ್ಯಕ್ಷರಾಗಿ ಪಕ್ಷದ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿದ್ದರು.

ಉತ್ತಮ ಕ್ರಿಕೆಟ್ ಪಟು: ಮಲ್ಲನಗೌಡರು ೮೦ರ ದಶಕದಲ್ಲೇ ಕ್ರಿಕೆಟ್‌ನಲ್ಲಿ ತೀವ್ರ ಆಸಕ್ತಿ ಹೊಂದಿದ್ದರಲ್ಲದೇ ಆರಂಭಿಕ ಬೌಲರ್ ಹಾಗೂ ಆರಂಭಿಕ ಬ್ಯಾಟ್ಸಮನ್ ಆಗಿ ದೊಡ್ಡ ಹೆಸರು ಮಾಡಿದ್ದರು. ಜಾಬಿನ್ ಕಾಲೇಜ್ ಕ್ರಿಕೆಟ್ ತಂಡದ ನಾಯಕರಾಗಿದ್ದಲ್ಲದೇ ಕಿಮ್ಸ್ ತಂಡವನ್ನೂ ಮುನ್ನಡೆಸಿದ್ದರು. ಅಲ್ಲದೇ ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿ ಯುನಿವರ್ಸಿಟಿ ಬ್ಲ್ಯೂ ಆಗಿದ್ದರು. ಇಂದಿಗೂ ಅವರೊಡನೆ ಕ್ರಿಕೆಟ್ ಆಡಿದವರು ಇವರ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಖರಿ ನೆನೆಸಿಕೊಳ್ಳುತ್ತಾರೆ.

ಅಂತಿಮ ದರ್ಶನ : ಮೃತರ ಅಂತಿಮ ದರ್ಶನವನ್ನು ಇಂದು ಮಧ್ಯಾಹ್ನ 2.30 ರಿಂದ ಸಂಜೆ 7.30ರವರೆಗೆ (ವಿಜಯಾ ಹೋಟೆಲ್ ಸಮೀಪ) ಏರ್ಪಡಿಸಲಾಗಿದೆ. ಬಳಿಕ 8.30ಕ್ಕೆ ಕಿಮ್ಸ್ ಗೆ ಹಸ್ತಾಂತರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.