Sunday, 17th November 2024

Murder Case: ಗೆಳೆಯನನ್ನೇ ಕೊಂದ ದುಷ್ಟರ ಕಾಲಿಗೆ ಗುಂಡು ಹಾರಿಸಿ ಸೆರೆ

murder case

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯನನ್ನೇ ಕೊಲೆ (murder case) ಮಾಡಿದ್ದ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಹುಬ್ಬಳ್ಳಿ ಪೊಲೀಸರು (hubli crime news) ಬಂಧಿಸಿದ್ದಾರೆ. ಇವರು ಆಪ್ತ ಸ್ನೇಹಿತನನ್ನೇ 30ಕ್ಕೂ ಅಧಿಕ ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.

ಶಿವರಾಜ ಕಮ್ಮಾರ ​(23) ಕೊಲೆಯಾದ ಯುವಕ. ಸುದೀಪ ರಾಯಾಪುರ, ಕಿರಣ್​ ಕೊಲೆ ಮಾಡಿದ ಆರೋಪಿಗಳು. ಶಿವರಾಜ ಕಮ್ಮಾರ ಮತ್ತು ಸುದೀಪ ರಾಯಾಪುರ ಇಬ್ಬರೂ ಸ್ನೇಹಿತರಾಗಿದ್ದು, ಶುಕ್ರವಾರ ಇಬ್ಬರು ಒಟ್ಟಿಗೆ ಮನೆಯಲ್ಲಿ ಹಬ್ಬ ಮಾಡಿದ್ದರು. ಹಬ್ಬ ಆಚರಿಸಿದ ಬಳಿಕ ಸ್ನೇಹಿತರೊಂದಿಗೆ ಶಿವರಾಜ ಕಮ್ಮಾರ ಹೊರಗಡೆ ಹೋಗಿದ್ದಾನೆ. ಆದರೆ ಮರಳಿ ಮನೆಗೆ ಬರಲಿಲ್ಲ.

ಶಿವರಾಜ ಕಮ್ಮಾರ​​ನ ತಲೆಗೆ ರಾಡ್​ನಿಂದ ಹೊಡೆದು, ಬಳಿಕ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಗೋಪನಕೊಪ್ಪದ ಬಳಿ ಕೊಲೆ ಮಾಡಲಾಗಿದೆ. ಹೋಗಿ ಬರುತ್ತೇನೆ ಅಂತ ಹೇಳಿ ಹೋದ ಮಗ ಮರಳಿ ಜೀವಂತವಾಗಿ ಬಾರದೆ, ಶವವಾಗಿ ಬಂದಿದ್ದನ್ನು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಶಿವರಾಜ ಕಮ್ಮಾರ​​ನನ್ನು​ ಹತ್ಯೆಗೈದ ಆರೋಪಿಗಳಾದ ಸುದೀಪ್, ಕಿರಣ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳು ಬೀಡು ಬಿಟ್ಟಿದ್ದ ಸ್ಥಳಕ್ಕೆ ಅಶೋಕನಗರ ಠಾಣೆಯ ಪೊಲೀಸರು ಸುದೀಪ್​ ಮತ್ತು ಕಿರಣ್​ನನ್ನು ಕರೆದೊಯ್ದಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದರು.

ಆಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಹಳೇ ಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಹೊರವಲಯದಲ್ಲಿ ಘಟನೆ ನಡೆದಿದೆ. ಆರೋಪಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶೋಕ ನಗರ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಶೋಕ ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಗೋಪನಕೊಪ್ಪ ವೃತ್ತದಲ್ಲಿ ಶುಕ್ರವಾರ ರಾತ್ರಿ ಕೊಲೆಯಾಗಿದೆ. ಆರೇಳು ಜನ ಶಿವರಾಜ್​ನನ್ನು ಹತ್ಯೆ ಮಾಡಿದ್ದಾರೆ. ಹಳೇ ದ್ವೇಷ, ಹಣದ ವ್ಯವಹಾರ ಇತ್ತೆಂಬ ಮಾಹಿತಿ ಸಿಕ್ಕಿದೆ. ಮೂವರು ಆರೋಪಿಗಳನ್ನು ರಾತ್ರಿ ವಶಕ್ಕೆ ಪಡೆದಿದ್ದೇವೆ. ಇಬ್ಬರು ಆರೋಪಿಗಳು ಉಳಿದವರ ಬಗ್ಗೆ ಹೇಳುತ್ತೇವೆ ಅಂದಿದ್ದರು. ಹೀಗಾಗಿ, ಹಳೇ ಹುಬ್ಬಳ್ಳಿ ರೈಲ್ವೆ ಕ್ವಾಟ್ರಸ್ ಬಳಿ ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿ, ಪರಾರಿಯಾಗಲು ಮುಂದಾಗಿದ್ದರು. ಈ ವೇಳೆ ನಮ್ಮ ಸಿಬ್ಬಂದಿ ಪಿಎಸ್ಐ ಸಾತಣ್ಣನವರ ಮತ್ತು ಮಂಜು ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: Renuka swamy Murder Case: ರೇಣುಕಾಸ್ವಾಮಿ ಕೊಲೆ ಆರೋಪಿ ಮತ್ತೆ ಬೆಂಗಳೂರು ಜೈಲಿಗೆ ಶಿಫ್ಟ್‌; ದರ್ಶನ್‌ಗೆ ಬಳ್ಳಾರಿಯೇ ಗತಿ