ಮೈಸೂರು: ಮಹಿಳೆಯೋರ್ವಳು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಗಂಡನನ್ನೇ ಕೊಂದು (Murder Case), ನಂತರ ವಾಮಾಚಾರಕ್ಕಾಗಿ (Black magic) ಬಲಿ ಎಂಬಂತೆ ಕತೆ ಕಟ್ಟಿದ ಘಟನೆ ಮೈಸೂರು (Mysuru news) ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮಡುವಿಹಳ್ಳಿಯಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಸದಾಶಿವ(43) ಎಂಬ ವ್ಯಕ್ತಿಯನ್ನು ಸರ್ಕಾರಿ ಶಾಲೆಯ ಬಳಿ ಕೊಲೆ ಮಾಡಲಾಗಿದೆ. ಪತ್ನಿ ರಾಜೇಶ್ವರಿ ತನ್ನಿಬ್ಬರು ಗೆಳೆಯರಾದ ರಂಗಸ್ವಾಮಿ, ಶಿವಯ್ಯ ಎನ್ನುವರ ಜೊತೆ ಸೇರಿಕೊಂಡು ಪತಿಯನ್ನೇ ಕೊಂದಿದ್ದಳು. ಬಳಿಕ ವಾಮಾಚಾರಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಬಿಂಬಿಸಿ ರಾಜೇಶ್ವರಿ ಬಿಕ್ಕಿಬಿಕ್ಕಿ ಅತ್ತಿದ್ದಳು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಪತ್ನಿಯ ಆಟ ಬಯಲಿಗೆ ಬಂದಿದೆ.
ಮೈಸೂರು ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ ಪತ್ನಿಯ ನಿಜ ಬಣ್ಣವನ್ನು ಪೊಲೀಸ್ರು ಬಯಲು ಮಾಡಿದ್ದಾರೆ. ತನ್ನ ರಂಗಿನಾಟಕ್ಕೆ ಪತಿ ಅಡ್ಡ ಬರ್ತಾನೆ ಎಂದು ತಿಳಿದ ಪತ್ನಿ ವಾಮಾಚಾರದ ಹೆಸರಲ್ಲಿ ಪತಿಯನ್ನು ಕೊಂದು ಕಥೆ ಕಟ್ಟಿ ಸಿಕ್ಕಿಬಿದ್ದಿದ್ದಾಳೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದನ್ನ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಲ್ಕುಂಡಿ ಗ್ರಾಮದ ಸುಮಾರು 47 ವರ್ಷದ ಸದಾಶಿವ ಕೊಲೆಯಾಗಿದ್ದು, ಇದೇ ಸದಾಶಿವನ ಪತ್ನಿ ರಾಜೇಶ್ವರಿ ಈಕೆಯ ಇಬ್ಬರು ಪ್ರಿಯಕರರಾದ ರಂಗಸ್ವಾಮಿ, ಶಿವಯ್ಯ ಬಂಧಿತ ಆರೋಪಿಗಳಾಗಿದ್ದಾರೆ.
ಅಕ್ಟೋಬರ್ 17 ರಂದು ಮಡುವಿನಹಳ್ಳಿ ಸರ್ಕಾರಿ ಶಾಲೆಯ ಪಕ್ಕದ ಗದ್ದೆಯ ಬದುವಿನಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಈ ಸದಾಶಿವ ಪತ್ತೆಯಾಗಿದ್ದ. ನರಳಾಡುತ್ತಿದ್ದ ಸದಾಶಿವನನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಮೃತ ಸದಾಶಿವ ಸಿಕ್ಕ ಜಾಗದಲ್ಲಿ ರಕ್ತ ಕೋಡಿಯಂತೆ ಹರಿದಿತ್ತು. ಪಕ್ಕದಲ್ಲೇ ನೂರ ಒಂದು ರೂಪಾಯಿ, ನಿಂಬೆಹಣ್ಣು, ಎಲೆ ಅಡಿಕೆ ಕುಡಿಕೆ ಬಿದ್ದಿತ್ತು. ಘಟನೆಯನ್ನು ಕಂಡವರು ವಾಮಾಚಾರಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಅಂದುಕೊಂಡಿದ್ದರು.
ಹುಲ್ಲಹಳ್ಳಿ ಪೊಲೀಸರು ಪ್ರಕರಣದ ಜಾಡು ಹಿಡಿದು ಹೊರಟಾಗ ಪತ್ನಿ ರಾಜೇಶ್ವರಿ ಮೇಲೆ ಗುಮಾನಿ ಬಂದಿದೆ. ಆಕೆಯ ಮೊಬೈಲ್ ಟ್ರ್ಯಾಕ್ ಮಾಡಿದಾಗ ವಿಷಯ ಬಯಲಾಗಿದೆ. ಈ ರಾಜೇಶ್ವರಿ ಹಲವಾರು ಸಿಮ್ ಬದಲಾವಣೆ ಮಾಡಿ ಪ್ರಿಯಕರರಾದ ಶಿವಯ್ಯ, ರಂಗಸ್ವಾಮಿ ಜೊತೆ ನಿರಂತರವಾಗಿ ಮಾತನಾಡಿದ್ದು ಗೊತ್ತಾಗಿದೆ. ಪೊಲೀಸರು ರಾಜೇಶ್ವರಿಯನ್ನ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ನಿಜಬಣ್ಣ ಬಯಲಾಗಿದೆ.