Wednesday, 9th October 2024

ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಸಂಗೀತ ತಾನಾಗಿಯೇ ಒಲಿಯುತ್ತದೆ

ಬಸವನಬಾಗೇವಾಡಿ: ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ತಾಳ್ಮೆ, ಪರಿಶ್ರಮ, ವಿನಯವಂತಿಕೆ ಇರಬೇಕು. ಇವುಗಳನ್ನು ಅಳವಡಿಸಿಕೊಂಡು ಮುಂದುವರೆದರೆ ಸಂಗೀತ ತಾನಾಗಿಯೇ ಒಲಿಯುತ್ತದೆ ಎಂದು ವಿಜಯಪುರ ಅಶ್ವಿನಿ ಆಸ್ಪತ್ರೆಯ ಆಡಳಿತಾ ಧಿಕಾರಿ ಪ್ರಕಾಶ ಮಠ ಹೇಳಿದರು.

ಪಟ್ಟಣದ ವಿರಕ್ತಮಠದ ಶಿವಾನುಭವ ಮಂಟಪದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಸಂಗೀತ ವಿದ್ವಾಂಸ ದಿ.ಶ್ರೀಮಂತ ಅವಟಿ ಇವರ ಸ್ಮರಣಾರ್ಥ ಭಾನುವಾರ ನಂದಿ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕನ್ನಡ ಕರೋಕೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಸಂಗೀತದ ಆಸಕ್ತಿ ಬೆಳೆಸಿಕೊಳ್ಳಬೇಕು. ಅವರಲ್ಲಿನ ಪ್ರತಿಭೆಗಳ ಶೋಧನೆಯಾಗ ಬೇಕು. ಸಂಗೀತ ಕ್ಷೇತ್ರ ಬೆಳೆಸುವ ಕೆಲಸವಾಗಬೇಕು. ನಂದಿ ಸಾಹಿತ್ಯ ವೇದಿಕೆ ಇಂತಹ ಕಾರ್ಯಕ್ರಮಗಳ ಮೂಲಕ ಸಂಗೀತಗಾರರನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸಂಗೀತ ವಿದ್ವಾಂಸ ದಿ.ಶ್ರೀಮಂತ ಅವಟಿ ಅವರು ತಮ್ಮ ಸರಳ, ಸಜ್ಜನಿಕೆಯಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರು ಸಂಯೋಜನೆ ಮಾಡಿದ ಹಾಡುಗಳು ನಮ್ಮೊಂದಿಗಿವೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿ, ಭಾಷೆ ಇಲ್ಲದೇ ಆಕರ್ಷಿಸುವ ಶಕ್ತಿ ಸಂಗೀತ ಹಾಗೂ ಚಿತ್ರಕಲೆಗಿದೆ. ದಿ.ಶ್ರೀಮಂತ ಅವಟಿ ಅವರು ಕಟ್ಟಿ ಬೆಳಸುತ್ತಿದ್ದ ಸಂಗೀತ ಪಾಠಶಾಲೆ ಮತ್ತೆ ಪ್ರಾರಂಭಿಸುವ ಮೂಲಕ ಸಂಗೀತಾಸಕ್ತರನ್ನು ತರಬೇತುಗೊಳಿ ಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ನಂದಿ ಸಾಹಿತ್ಯ ವೇದಿಕೆ ಅಧ್ಯಕ್ಷ ಮಹಾಂತೇಶ ಸಂಗಮ ಮಾತನಾಡಿ, ದಿ.ಶ್ರೀಮಂತ ಅವಟಿ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಸ್ಮರಿಸುವುದು ಹಾಗೂ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ  ಆಯೋಜನೆ ಮಾಡಲಾಗಿದೆ. ದಿ.ಶ್ರೀಮಂತ ಅವಟಿ ಅವರ ಸ್ಮರಣಾರ್ಥ ಸಂಸ್ಮರಣಾ ಸ್ಮಾರಕ ನಿರ್ಮಿಸುವ ಉದ್ದೇಶ ನಂದಿ ಸಾಹಿತ್ಯಕಿದೆ. ಈ ಕುರಿತು ಅವಟಿ ಅವರ ಕುಟುಂಬ ಹಾಗೂ ಹಿರಿಯರೊಂದಿಗೆ ಚರ್ಚಿಸಲಾಗಿದೆ.  ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡಗೆ ಸದಾ ನಮ್ಮೊಂದಿಗಿರಬೇಕಾದರೆ ಸ್ಮಾರಕ ನಿರ್ಮಾಣದ ಅವಶ್ಯಕತೆ ಇದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು, ನಿವೃತ್ತ ಶಿಕ್ಷಕ ಎ.ಐ.ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಲ್.ಓಂಕಾರ, ರಶ್ಮಿ ಅವಟಿ ಇದ್ದರು.

ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ.ವಿ.ಚಕ್ರಮನಿ ಸ್ವಾಗತಿಸಿದರು, ಸುಭಾಸ ಹಡಪದ ನಿರೂಪಿಸಿದರು.