ಮೈಸೂರು: ಹೊಸ ಊರೊಂದನ್ನು ನೋಡುವುದಕ್ಕೆಂದು ಹೋಗುವಾಗ ದಾರಿ ಗೊತ್ತಿರಲೇಬೇಕೆಂದಿಲ್ಲ. ಭಾರತಕ್ಕೆ ಹೊಸ ದಾರಿಯನ್ನು ಹುಡುಕುವುದಕ್ಕಾಗಿಯೇ ಒಂದಾನೊಂದು ಕಾಲದಲ್ಲಿ ಕೊಲಂಬಸ್ ಹೊರಟಿದ್ದಲ್ಲವೇ? ಹಾಗಾಗಿ ದಾರಿ ಗೊತ್ತಿಲ್ಲದಿದ್ದಾಗ ಹೊಸ ದಾರಿ ಹುಡುಕುವುದೊಂದು ಕಲೆ, ಸೊಗಸು, ಸಾಹಸ, ಮೋಜು, ಅಪಾಯ… ಎಲ್ಲವೂ. ಆದರೆ ಈಗಿನ ಕಾಲದಲ್ಲಿ ಹಾಗೇನಿಲ್ಲ. ಎಲ್ಲೇ ಹೋಗಬೇಕಿದ್ದರೂ ಗೂಗಲ್ ಗುರು ದಾರಿ ತೋರುತ್ತದೆ; ಕಳೆದು ಹೋಗದಂತೆ ಕಾಪಾಡುತ್ತದೆ; ದಾರಿಗಳ ಅನೂಹ್ಯತೆಯನ್ನು ಕೊಂಚ ಮಟ್ಟಿಗೆ ಕಳೆದೂ ಹಾಕುತ್ತದೆ! ಇಷ್ಟೆಲ್ಲಾ ಪ್ರವರ ಯಾಕಪ್ಪಾ ಎಂದರೆ, ದಸರೆಗಾಗಿ ಮೈಸೂರಿಗೆ ಬರುವ ಉದ್ದೇಶವಿದ್ದರೆ, ಎಲ್ಲಿಂದ ಮತ್ತು ಹೇಗೆ ಬರುತ್ತೀರಿ ಎನ್ನುವುದಕ್ಕೆ ಪೀಠಿಕೆಯಿದು (Mysore Dasara).
ಮೈಸೂರಿಗೆ ಬರುವುದಕ್ಕೆ ಹಲವು ಮಾರ್ಗಗಳಿವೆ. ಸ್ವಂತ ವಾಹನವೋ, ಬಸ್ಸು, ರೈಲು, ವಿಮಾನದ ಮೂಲಕವೋ… ಹೀಗೆ. ಕರಾವಳಿಯ ಸೀಮೆಯಾಗಿದ್ದರೆ ದೋಣಿ, ಹಡಗು… ಇಂಥವೆಲ್ಲ ಆಯ್ಕೆ ಇರುತ್ತಿತ್ತು. ಅಂಥ ಆಯ್ಕೆ ಇಲ್ಲಿಲ್ಲ. ಪ್ರವಾಸಿಗರ ನೆಚ್ಚಿನ ತಾಣ ಇದಾಗಿರುವುದರಿಂದ ಹಲವು ರೀತಿಯಲ್ಲಿ ಈ ಊರು ಸಾರ್ವಜನಿಕ ಸಂಪರ್ಕ ಸಾರಿಗೆಗಳಿಂದ ಸಮೃದ್ಧವಾಗಿದೆ.
ವಿಮಾನ ಮಾರ್ಗ
ಮೈಸೂರಿಗೆ ತನ್ನದೇ ಆದ ದೇಶೀಯ ವಿಮಾನ ನಿಲ್ದಾಣವಿದ್ದು, ನಂಜನಗೂಡಿಗೆ ಹೋಗುವ ಮಾರ್ಗದಲ್ಲಿ ಮಂಡಕಳ್ಳಿಯಲ್ಲಿದೆ. ಇಲ್ಲಿಂದ ಇರುವ ವಿಮಾನ ಹಾರಾಟ ತೀರ ಕಡಿಮೆ. ಆದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು 3-4 ತಾಸುಗಳಲ್ಲಿ ತಲುಪಬಹುದು. ಇದಕ್ಕಾಗಿ ಪ್ರತ್ಯೇಕ ಏರ್ಪೋರ್ಟ್ ಬಸ್ಗಳು, ಟ್ಯಾಕ್ಸಿಗಳೆಲ್ಲ ಬೇಕಾದಷ್ಟು ಲಭ್ಯವಿವೆ. ಹಾಗಾಗಿ ದೇಶದ ಮುಖ್ಯ ನಗರಗಳಿಂದ ವಿಮಾನದ ಮೂಲಕ ಮೈಸೂರನ್ನು ಸುಲಭವಾಗಿ ತಪುಪಬಹುದು.
ರೈಲು ಮಾರ್ಗ
ಭಾರತದ ಬಹಳಷ್ಟು ಮುಖ್ಯ ನಗರಗಳಿಂದ ರೈಲು ಮಾರ್ಗದ ಮೂಲಕ ಮೈಸೂರಿಗೆ ಸಂಪರ್ಕವಿದೆ. ದೆಹೆಲಿ, ಕೋಲ್ಕತಾ, ಮುಂಬಯಿ, ಚೆನ್ನೈ, ತಿರುವನಂತಪುರ, ಜೈಪುರ, ಇಂದೋರ್ ಮುಂತಾದ ಬಹುತೇಕ ಮುಖ್ಯ ನಗರಗಳಿಗೆ ಶತಾಬ್ದಿ, ವಂದೇ ಭಾರತ್ನಂಥ ರೈಲುಗಳಿಂದ ಹಿಡಿದು, ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಲಭ್ಯವಿವೆ. ರೈಲು ನಿಲ್ದಾಣ ನಗರದ ಹೃದಯ ಭಾಗದಲ್ಲೇ ಇದ್ದು, ವಾಹನ ದಟ್ಟಣೆಯ ಕಿರಿಕಿರಿ ಇಲ್ಲದೆ ಸುಲಭವಾಗಿ ತಲುಪಬಹುದು. ಮೈಸೂರು-ಬೆಂಗಳೂರು ನಡುವೆ ದಿನದಲ್ಲಿ ಬಹಳಷ್ಟು ರೈಲುಗಳ ಓಡಾಟವಿದೆ.
ಬಸ್ ಮೂಲಕ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಪರ್ಕ ಮೈಸೂರಿಗೆ ಚೆನ್ನಾಗಿದೆ. ಹೈದರಾಬಾದ್, ಚೆನ್ನೈ, ಪುಣೆ, ಪಣಜಿ, ಮುಂಬಯಿಯಂಥ ಅಂತಾರಾಜ್ಯ ನಗರಗಳಿಂದ ಹಿಡಿದು, ರಾಜ್ಯದೊಳಗಿನ ಬಹುತೇಕ ಎಲ್ಲಾ ಊರುಗಳಿಗೂ ಬಸ್ಸಿನ ಸೌಲಭ್ಯವಿದೆ. ಹಲವೆಡೆಗಳಲ್ಲಿ ಖಾಸಗಿ ಬಸ್ಸುಗಳ ಸೇವೆಯೂ ಸ್ಪರ್ಧಾತ್ಮಕವಾಗಿದೆ. ಸ್ಲೀಪರ್ಗಳಿಂದ ಹಿಡಿದು, ಎಸಿ ಮತ್ತು ನಾನ್-ಎಸಿಗಳವರೆಗೆ ತರಹೇವಾಗಿ ಬಸ್ಸುಗಳು ಪ್ರಯಾಣಿಕರ ಆಯ್ಕೆಗೆ ಲಭ್ಯವಿವೆ.
ಸ್ವಂತ ವಾಹನ
ಬೆಂಗಳೂರಿನಿಂದ ಬರುವ ಹಲವರಿಗೆ ಇದು ನೆಚ್ಚಿನ ಆಯ್ಕೆ. ಇದರಲ್ಲೂ ಎರಡು ಮಾರ್ಗಗಳಿವೆ. ರಾಜಧಾನಿಯಿಂದ ಮೈಸೂರಿಗೆ ಹೊಸದಾಗಿ ಸಿದ್ಧಗೊಂಡಿರುವ ಎಕ್ಸ್ಪ್ರೆಸ್ ದಾರಿಗೆ ಸುಂಕ ಪಾವತಿಸಲು ಸಿದ್ಧರಿದ್ದರೆ, 140 ಕಿ.ಮೀ.ಗಳನ್ನು 100 ನಿಮಿಷಗಳಲ್ಲಿ ತಲುಪಬಹುದು. ಅದಿಲ್ಲದಿದ್ದರೆ, ಹಳೆಯ ಹೆದ್ದಾರಿ ಬೆಂಗಳೂರಿನಿಂದ ಬಿಡದಿ-ರಾಮನಗರ-ಚೆನ್ನಪಟ್ಟಣ-ಮದ್ದೂರು-ಮಂಡ್ಯ ಮತ್ತು ಶ್ರೀರಂಗಪಟ್ಟಣ ಮಾರ್ಗವಾಗಿ ಸುಂಕವಿಲ್ಲದೆಯೇ 3 ತಾಸಿನೊಳಗೆ ಮೈಸೂರಿಗೆ ತಲುಪಿಸುತ್ತದೆ. ಸುಂಕರಹಿತವಾದ ಮತ್ತೊಂದು ಮಾರ್ಗವೂ ಇದೆ. ಬೆಂಗಳೂರಿನಿಂದ ಕನಕಪುರ-ಮಳವಳ್ಳಿ-ಬನ್ನೂರು-ಚಿಕ್ಕಳ್ಳಿ ಮಾರ್ಗವಾಗಿ ಮೈಸೂರು ತಲುಪಬಹುದು. ಇದಕ್ಕೂ ಬೇಕಾಗುವುದು ಅಜಮಾಸು 3 ತಾಸುಗಳೇ. ಈ ಮಾರ್ಗ ಸುಂದರವಾಗಿದ್ದು, ಹಾದಿ ಕಳೆದಿದ್ದು ತಿಳಿಯದ ರೀತಿಯಲ್ಲಿದೆ.
ಇದಲ್ಲದೆ, ನೆರೆಯ ಎಲ್ಲಾ ರಾಜ್ಯಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಮೈಸೂರಿಗೆ ಸಾರಿಗೆ ಸಂಪರ್ಕವಿದೆ. ಸ್ವಂತ ವಾಹನ ತರುವವರಿದ್ದರೆ, ರಸ್ತೆಗಳ ಸಂಪರ್ಕ ಚೆನ್ನಾಗಿದೆ. ಮೈಸೂರು ತಲುಪಿದ ಮೇಲೆ, ಊರೊಳಗಿನ ಸಂಪರ್ಕ ಸಾಧನಗಳೂ ಸುಗಮವಾಗಿವೆ. ಯಾವುದೇ ರಿಕ್ಷಾ, ಕ್ಯಾಬ್ ಅಥವಾ ನಗರ ಸಾರಿಗೆ ಬಸ್ಗಳ ಮೂಲಕ ಊರಿಡೀ ಅಡ್ಡಾಡಬಹುದು. ಸ್ವಂತ ವಾಹನವಿದ್ದರೆ ಅದನ್ನು ಊರೆಲ್ಲ ಓಡಿಸಿ, ಸಂಚಾರ ದಟ್ಟಣೆಗೆ ಕಾಣಿಕೆ ಹಾಕುವ ಬದಲು ಸಾರ್ವಜನಿಕ ಸಾರಿಗೆಗಳನ್ನು ಬಳಸುವುದು ಒಳ್ಳೆಯ ಆಯ್ಕೆ.
ಈ ಸುದ್ದಿಯನ್ನೂ ಓದಿ: Mysuru Dasara 2024: ದಸರಾ ವೇಳೆ ಪ್ರವಾಸಿಗರಿಗೆ ತೊಂದರೆ ಆಗದಂತೆ ಬಸ್ ಸೌಕರ್ಯ ಕಲ್ಪಿಸಿ: ಸಿಎಂ ಸೂಚನೆ