Monday, 16th December 2024

Mysugar factory: ಮೈಶುಗರ್ ಸಕ್ಕರೆ ಕಾರ್ಖಾನೆಯ 52 ಕೋಟಿ ರೂ. ವಿದ್ಯುತ್ ಬಿಲ್ ಮನ್ನಾಗೆ ಸಚಿವ ಸಂಪುಟ ಒಪ್ಪಿಗೆ

Mysugar factory

ಬೆಂಗಳೂರು: ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯ (Mysugar factory) 52.25 ಕೋಟಿ ರೂ. ವಿದ್ಯುತ್ ಬಿಲ್ ಬಾಕಿಯಲ್ಲಿ 37.74 ಕೋಟಿ ರೂ. ವಿದ್ಯುತ್ ಬಾಕಿಯನ್ನು ಸರಕಾರದ ವತಿಯಿಂದಲೇ ಪಾವತಿಸುವುದು ಹಾಗೂ 15.71 ಕೋಟಿ ಬಾಕಿ ಬಡ್ಡಿ ಮನ್ನಾ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸುವರ್ಣಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೈಶುಗರ್ ಕಾರ್ಖಾನೆ ಪಾವತಿಸಿಬೇಕಿದ್ದ 37.74 ಕೋಟಿ ವಿದ್ಯುತ್ ಶುಲ್ಕ ಬಾಕಿಯನ್ನು ಸರಕಾರದಿಂದಲೇ ಪಾವತಿಸಲು ಹಾಗೂ 15.71 ಕೋಟಿ ಬಾಕಿ ಬಡ್ಡಿ ಮನ್ನಾ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

ಸರ್ಕಾರದ ಈ ನಿರ್ಧಾರದಿಂದ `52.25 ಕೋಟಿ ವಿದ್ಯುತ್ ಬಿಲ್ ವಿವಾದ ಬಗೆಹರಿದಿದ್ದು, ಮೈಸೂರು ಆಡಳಿತ ಮಂಡಳಿ ಹಾಗೂ ರೈತರ ಚಿಂತೆ ದೂರಾಗುವಂತೆ ಮಾಡಿದೆ. ತಮ್ಮ ಮನವಿಗೆ ಸ್ಪಂದಿಸಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಜಿಲ್ಲಾ ಸಚಿವ ಎನ್ ಚಲುವರಾಯಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಆರ್ಥಿಕವಾಗಿ ತೊಂದರೆಯಲ್ಲಿದ್ದ ಸರಕಾರಿ ಸ್ವಾಮ್ಯದ ಈ ಕಾರ್ಖಾನೆಯನ್ನು ಉಳಿಸಿ, ರೈತರು ಬೆಳೆದಿರುವ ಕಬ್ಬು ನುರಿಸುವ ಕಾರ್ಯ ಆರಂಭಿಸಲು ಸಾಧ್ಯವಾಗುವಂತೆ ಚಾಮುಂಡೇಶ್ವರಿ ವಿದ್ಯುತ್ ಕಂಪನಿಗೆ ವಿದ್ಯುತ್ ಬಾಕಿ ಪಾವತಿಸಲು ನೆರವಾಗುವಂತೆ ಕಳೆದ ಜುಲೈ 5 ರಂದು ದಿನೇಶ್ ಗೂಳಿಗೌಡರು ಸಿಎಂ ಸಿದ್ದರಾಮಯ್ಯ ಅವರಿಗೆ ಖುದ್ದಾಗಿ ಮನವಿ ಸಲ್ಲಿಸಿದ್ದರು.

ಈ ಸುದ್ದಿಯನ್ನೂ ಓದಿ | Bengaluru- Mangaluru Highway: ಬೆಂಗಳೂರು- ಮಂಗಳೂರು ನಡುವೆ ಮತ್ತೊಂದು ಟೋಲ್‌, ವಾಹನ ಸವಾರರಿಂದ ಆಕ್ರೋಶ

ಮಂಡ್ಯ ಮೈ ಶುಗರ್ ಕಾರ್ಖಾನೆ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿಲ್ಲ. ಹೀಗಾಗಿ 52.25 ಕೋಟಿ ರೂ. ಬಾಕಿ ಪಾವತಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯು ಮೈಶುಗರ್ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಿತ್ತು‌. ರೈತರ ಹಿತ ದೃಷ್ಟಿಯಿಂದ‌ ಕಾರ್ಖಾನೆ ಉಳಿಸಿಕೊಳ್ಳುವುದು ಅವಶ್ಯವಾಗಿದ್ದು, ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.

ಮಂಡ್ಯದ ರೈತರ ಜೀವನಾಡಿಯಾಗಿರುವ ಮೈ ಶುಗರ್ ಫ್ಯಾಕ್ಟರಿಯು ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯಾಗಿದೆ. ದೇಶದ ಮಾತ್ರವಲ್ಲ ಇಡೀ ಏಷ್ಯಾ ಖಂಡದಲ್ಲೇ ಮೊದಲು ಎಂದರೆ, 1932 ರಲ್ಲಿ ಈ ಕಾರ್ಖಾನೆಯು ಪ್ರಾರಂಭವಾಯಿತು. ಇದು ಮಂಡ್ಯ ಜಿಲ್ಲೆಯ ಹಾಗೂ ಕರ್ನಾಟಕದ ಹೆಮ್ಮೆಯಾಗಿದೆ. ಆದರೆ, ಇದೀಗ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಇದರಿಂದ ಪಾರು ಮಾಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದ್ದು, ಸಂಪುಟ ಸಭೆ ಕರೆದು ಬಾಕಿ ಇರುವ ವಿದ್ಯುತ್ ಬಿಲ್ 52.25 ಕೋಟಿ ರೂ. ಮನ್ನಾ ಮಾಡಬೇಕಿದೆ ಎಂದು ಮನವಿ ಪತ್ರದಲ್ಲಿ ಸಮಸ್ಯೆಗಳ ತೀವ್ರತೆಯನ್ನು ತಿಳಿಸಿದ್ದರು.