Wednesday, 23rd October 2024

Mysuru Dasara 2024: ಮೈಸೂರು ದಸರೆಗೆ ಹೋದರೆ ಈ ತಿನಿಸುಗಳನ್ನು ಸವಿಯಲು ಮರೆಯಬೇಡಿ!

Mysore Dasara 2024

ದಸರೆಗೆ ಮೈಸೂರಿಗೆ ಹೋಗುತ್ತಿದ್ದೀರಿ ಎಂದಾದರೆ, ನವರಾತ್ರಿಯ ಒಂಬತ್ತೂ ದಿನಗಳು ಉಪವಾಸ ಮಾಡುವ ಉದ್ದೇಶವಿದ್ದರೆ, ಅಂಥವರೊಂದಿಗೆ ಮುಂದೆ ಮಾತಿಲ್ಲ! ಹಾಗಿಲ್ಲದೆ, ಮೈಸೂರಿನ (Mysuru Dasara 2024) ತರಹೇವಾರಿ ರುಚಿಗಳನ್ನು ಸವಿಯುವ ಉದ್ದೇಶ ನಿಮಗಿದ್ದರೆ, ಇಲ್ಲಿದೆ ನೋಡಿ… ರಸನೆಯನ್ನು ತಣಿಸುವ ಮಾರ್ಗೋಪಾಯಗಳು. ಸುಮ್ಮನೆ ಹೇಳುವುದಾದರೆ, ರುಚಿಕಟ್ಟಾದ ಮೈಸೂರು ಮಸಾಲೆ ದೋಸೆ ಸವಿದು, ಇರಲೀಂತ ಗಡದ್ದಾಗಿ ಮೈಸೂರುಪಾಕ್‌ ಹೊಡೆದು, ಜತೆಗೊಂದು ಸ್ಟ್ರಾಂಗ್‌ ಮೈಸೂರು ಫಿಲ್ಟರ್‌ ಕಾಫಿ ಹೊಟ್ಟೆಗಿಳಿಸಿದರೆ, ಜಠರದಲ್ಲಿ ನೆಲೆಸಿರುವ ಪರಮಾತ್ಮನಿಗೆ ತೃಪ್ತಿ. ಖಯಾಲಿಯಿದ್ದರೆ ಎಳೆಯದಾದ ಒಂದು ಮೈಸೂರು ಚಿಗುರಿನ ತಾಂಬೂಲ ಜಗಿದರಂತೂ ಸ್ವರ್ಗಕ್ಕೆ ಮೂರು ಗೇಣೂ ಇಲ್ಲ!

ಹಳೆಯ ಕಾದಂಬರಿಗಳಲ್ಲಿ ಬರುವಂತೆ, ಮುನಿಸಿಕೊಂಡ ನಲ್ಲೆಯನ್ನು ಒಲಿಸಿಕೊಳ್ಳುವುದಕ್ಕೆ ಒಂದಿಷ್ಟು ಮೈಸೂರುಪಾಕ್‌ ಕಟ್ಟಿಸಿಕೊಂಡು, ಜತೆಗಿಷ್ಟು ಮೈಸೂರು ಮಲ್ಲಿಗೆಯನ್ನೂ ಒಯ್ದರೆ ಕರಗದ ಕೋಪವುಂಟೇ? ಇರಲಿ, ಮೈಸೂರಿನ ಕೆಲವು ಪರಂಪರಾಗತ ತಿನಿಸುಗಳು ಇಂದಿಗೂ ಆಹಾರಪ್ರಿಯರಿಗೆ ಆಜ್ಯ ಹೊಯ್ಯುತ್ತಲೇ ಇರುವುದರಿಂದ ಅಂಥವುಗಳನ್ನು, ಮೈಸೂರು ಭೇಟಿಯಲ್ಲಿ ಸವಿಯದೆ ಹೋಗುವಂತೆಯೇ ಇಲ್ಲ. ಆ ರೀತಿಯ ಕೆಲವು ತಿನಿಸುಗಳು ಮತ್ತು ತಾಣಗಳನ್ನು ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ.

ಈ ಸುದ್ದಿಯನ್ನೂ ಓದಿ | Navaratri Bangles Trend 2024: ನವರಾತ್ರಿ ಸಂಭ್ರಮಕ್ಕೆ ಜತೆಯಾದ 5 ಡಿಸೈನ್‌‌ನ ಕಲರ್‌ಫುಲ್‌ ಬ್ಯಾಂಗಲ್ಸ್

ಮೈಸೂರು ಪಾಕ್‌

ಅರಸರಿಗೆ ಅರಮನೆಯ ಬಾಣಸಿಗನೊಬ್ಬ ಹೊಸರುಚಿ ಮಾಡುವ ಭರದಲ್ಲಿ ಸೃಷ್ಟಿಯಾದ ಸಿಹಿಯಿದು ಎಂಬ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಅಂದು ಸೃಷ್ಟಿಯಾದ ಈ ಸಿಹಿತಿಂಡಿ, ಇಂದು ರುಚಿ ಮತ್ತು ಆಕೃತಿಯಲ್ಲಿ ಹಲವು ರೀತಿಯ ವಿಕಸನಗಳನ್ನು ದಾಖಲಿಸಿದೆ. ಆದರೆ ಅದೇ ಹಳೆಯ ಪರಂಪರಾಗತ ರುಚಿಯನ್ನು ನೀವು ಅರಸುತ್ತಿದ್ದರೆ, ಮೈಸೂರಿನ ಹೃದಯಭಾಗದ ಚಿಕ್ಕ ಗಡಿಯಾರದ ಪಕ್ಕದಲ್ಲಿರುವ ಗುರು ಸ್ವೀಟ್ಸ್‌ಗೆ ಭೇಟಿ ನೀಡಬಹುದು.

ಮೈಸೂರು ಮಸಾಲೆ ದೋಸೆ

ಮೇಲೆಲ್ಲ ಗರಿಮುರಿಯಾಗಿ, ಒಳಗಿನ ಭಾಗ ಹತ್ತಿಯಂತೆ ಮೃದುವಾಗಿ, ಖಾರದ ಕೆಂಪು ಚಟ್ನಿಯನ್ನು ಮೆತ್ತಿಕೊಂಡು, ಆಲೂಗಡ್ಡೆ ಪಲ್ಯವನ್ನು ಒಳಗಿರಿಸಿಕೊಂಡು, ಕಾಯಿ ಚಟ್ನಿಯೊಂದಿಗೆ ನಮ್ಮೆದುರು ಪ್ರತ್ಯಕ್ಷವಾಗುವ ಮೈಸೂರು ಮಸಾಲೆ ದೋಸೆಯನ್ನು ಸವಿಯದಿದ್ದರೆ ಬದುಕೇ ವ್ಯರ್ಥ! ಜತೆಗೆ ಮಲ್ಲಿಗೆ ಇಡ್ಲಿಯನ್ನು ತಿನ್ನದಿದ್ದರೆ ಬದುಕು ಸಾರ್ಥಕವಾಗುವುದಿಲ್ಲ. ಇದಕ್ಕಾಗಿ ನಜರ್‌ಬಾದ್‌ನಲ್ಲಿರುವ ಮೈಲಾರಿ ಹೊಟೆಲ್‌ ಸೂಕ್ತ ತಾಣ. ಇದಲ್ಲದೆ, ಮಸಾಲೆ ದೋಸೆಗಳಿಗಾಗಿ ಮೈಸೂರಿನ ಪರಂಪರಾಗತ ಗಾಯತ್ರಿ ಟಿಫನ್‌ ರೂಮ್‌ ಅಥವಾ ಜಿಟಿಆರ್‌ಗೆ ಸಹ ಭೇಟಿ ನೀಡಬಹುದು. ಇವಿಷ್ಟೇ, ಮೈಸೂರಿನ ಬಹುತೇಕ ಹೊಟೇಲ್‌ಗಳಲ್ಲಿ ತರಹೇವಾರಿ ದೋಸೆಗಳು ದೊರೆಯುತ್ತವೆ.

ಮೈಸೂರು ಫಿಲ್ಟರ್‌ ಕಾಫಿ

ದಕ್ಷಿಣ ಭಾರತದ ಹಲವೆಡೆಗಳಲ್ಲಿ ಫಿಲ್ಟರ್‌ ಕಾಫಿ ಜನಪ್ರಿಯ. ಅದರಲ್ಲೂ ಮೈಸೂರಿನಲ್ಲಿ ಒಂದೆಡೆ ಕೊಡಗಿನ ನಂಟು, ಇನ್ನೊಂದೆಡೆ ಹಳೆಯ ಮದ್ರಾಸಿನ ನಂಟುಗಳೆಲ್ಲ ಸೇರಿದ್ದಕ್ಕೋ ಏನೋ, ಮೊದಲಿನಿಂದಲೂ ಮೈಸೂರಿಗರು ಫಿಲ್ಟರ್‌ ಕಾಫಿ ಪ್ರಿಯರು. ಹಾಗಾಗಿಯೇ ಮೈಸೂರಿನಲ್ಲಿ ಹಲವೆಡೆ ಕಾಫಿ ಬಾರ್‌ಗಳು ಕಂಡು ಬರುತ್ತವೆ. ಇಲ್ಲೆಲ್ಲ ಸ್ಟ್ರಾಂಗ್‌ ಆದ ಘಮಘಮಿಸುವ ಫಿಲ್ಟರ್‌ ಕಾಫಿ ಲಭ್ಯವಿದೆ. ಇಂಥ ಯಾವುದೇ ತಾಣಗಳಲ್ಲಿ ಒಂದು ʻಸ್ಟ್ರಾಂಗ್‌ ಕಾಪಿʼ ಸವಿಯಲು ಮರೆಯಬೇಡಿ.

ಖಾರ ಭಾತ್

ʻಅಯ್ಯೋ ಉಪ್ಪಿಟ್ಟಾ!ʼ ಎನ್ನಬೇಡಿ. ಖಾರ ಭಾತ್‌ಗೂ ಉಪ್ಪಿಟ್ಟಿಗೂ ಇರುವ ವ್ಯತ್ಯಾಸವನ್ನು ತಿಂದವನೇ ಬಲ್ಲ. ರುಚಿ ಮತ್ತು ಘಮ- ಈ ಎರಡೂ ಉಪ್ಪಿಟ್ಟಿಗಿಂತ ಭಿನ್ನವಾಗಿರುವ ಖಾರಾ ಭಾತ್‌ ತಿನ್ನುವುದಕ್ಕೆ ಜತೆಗೊಂದು ಕೇಸರಿಭಾತ್‌ ಇರಲಿ ಎನ್ನುತ್ತಾರೆ ಮೈಸೂರಿಗರು. ನೀವು ಯಾವುದಕ್ಕೂ ಈ ಜೋಡಿಯನ್ನೊಮ್ಮೆ ತಿಂದು ನೋಡಿ.

ಸ್ಥಳಗಳು

ಇದು ಇನ್ನೊಂದು ಪ್ರತ್ಯೇಕ ಅನುಭವವನ್ನು ನೀಡುವಂಥದ್ದು. ಮೈಸೂರಿನ ಪರಂಪರಾಗತ ಅರಮನೆಗಳ ಒಳಗೆ ಕುಳಿತು ಊಟ ಮಾಡುವುದೇ ಭಿನ್ನ ಅನುಭವ. ಅದಕ್ಕಾಗಿ ಲಲಿತಮಹಲ್‌ ಅರಮನೆ, ರಾಯಲ್‌ ಆರ್ಕಿಡ್‌ ರೆಸ್ಟೋರೆಂಟ್‌ಗಳು ಇರುವಂಥ ಮೆಟ್ರೊಪೋಲ್‌ ಹೊಟೇಲ್‌, ಮಾಲ್ಗುಡಿ ಕೆಫೆ ಇರುವಂಥ ಚಿತ್ತರಂಜನ್‌ ಮಹಲ್‌- ಇವೆಲ್ಲ ಈಗಲೂ ಅರಮನೆಗಳ ಅನುಭವವನ್ನೇ ನೀಡುವಂಥವು.

ಈ ಸುದ್ದಿಯನ್ನೂ ಓದಿ | Ayudha Pooja: ಕೆಎಸ್‌ಆರ್‌ಟಿಸಿ ಬಸ್‌ಗಳ ಆಯುಧ ಪೂಜೆಗೆ ನೀಡುವ ಹಣ 100 ರಿಂದ 250 ರೂ.ಗೆ ಹೆಚ್ಚಳ

ಇಂಥವು ಬೇಡ ಎನಿಸಿದರೆ, ಮೈಸೂರಿನ ಪಕ್ಕಾ ಗ್ರಾಮೀಣ ಶೈಲಿಯ ಹಳ್ಳಿ ಹಟ್ಟಿಯನ್ನೊಮ್ಮೆ ಎಡತಾಕಬಹುದು. ಬೆಲ್ಲದ ಕೇಸರಿ ಭಾತ್‌, ಚಿಬ್ಲು ಇಡ್ಲಿ, ಗ್ರಾಮೀಣ ರುಚಿಯ ಚಿತ್ರಾನ್ನ, ಖಾರಾ ಭಾತ್‌, ಖಾರ ಪೊಂಗಲ್‌ ಮುಂತಾದವು ಹಸಿವೆಯನ್ನು ತಣಿಸುತ್ತವೆ. ಒಂದೊಮ್ಮೆ ಮಾಂಸದೂಟ ಸವಿಯುವ ಇಚ್ಛೆ ಇದ್ದರೆ ಹೊಟೇಲ್‌ ಆರ್‌ಆರ್‌ಆರ್‌, ಕೊಡಗು ಶೈಲಿಯ ಬೋಪೀಸ್‌, ಹಲವು ಶೈಲಿಯ ಖಾದ್ಯಗಳನ್ನು ಉಣಬಡಿಸುವ ಆಯಿಸ್ಟರ್‌ ಬೇ ಮುಂತಾದ ಬಹಳಷ್ಟು ಹೊಟೆಲ್‌ಗಳು ನಿಮ್ಮ ಆಯ್ಕೆಗೆ ಲಭ್ಯವಿವೆ.