ಮೈಸೂರು: ನಾಡ ಹಬ್ಬ ದಸರಾ ಸಂದರ್ಭದಲ್ಲಿ (Mysuru Dasara 2024) ಪ್ರವಾಸಿಗರಿಗೆ ತೊಂದರೆ ಆಗದಂತೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಅದೇ ರೀತಿ ಶಾಲೆಗಳಿಗೆ ಹೋಗುವ ಗ್ರಾಮೀಣ ಭಾಗದ ಮಕ್ಕಳು ಮತ್ತು ಶಿಕ್ಷಕಿಯರಿಗೆ ತೊಂದರೆ ಆಗದಂತೆ ಬಸ್ ಸವಲತ್ತು ಕಲ್ಪಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಮಾತನಾಡಿದ್ದು, ದಸರಾ ವೇಳೆ ಮೈಸೂರಿಗೆ ಲಕ್ಷಾಂತರ ಜನ ಆಗಮಿಸುವ ಹಿನ್ನೆಲೆಯಲ್ಲಿ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಾಮರಾಜನಗರ, ಮೈಸೂರು ಜಿಲ್ಲೆಗಳಿಗೆ ಅಗತ್ಯ ಇರುವಷ್ಟು 66/11 ಕೆವಿ ಪವರ್ ಸ್ಟೇಷನ್‌ಗಳನ್ನು ಆರಂಭಿಸಬೇಕು. ಇನ್ನು”ಯುವ ನಿಧಿ ಪಡೆಯುತ್ತಿರುವ ಪ್ರತಿಯೊಬ್ಬರೂ ಕೌಶಲ ಅಭಿವೃದ್ಧಿ ಕಾರ್ಯಾಗಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರ ಕೌಶಲ ಅಭಿವೃದ್ಧಿಯಾಗಿ ಉದ್ಯೋಗ ಸಿಗುವಂತಾಗಬೇಕು. ಈ ಬಗ್ಗೆ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಿಗಾ ವಹಿಸಬೇಕು ಎಂದು ಸಿಎಂ ಸೂಚಿಸಿದರು.
ಈ ಸುದ್ದಿಯನ್ನೂ ಓದಿ | Kasturirangan Report: ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಉಳಿದಿರುವುದ 3 ದಿನ ಮಾತ್ರ! ಆಕ್ಷೇಪ ಸಲ್ಲಿಸುವುದು ಹೇಗೆ?
ಮೀನುಗಾರಿಕಾ ಇಲಾಖೆ
ರಾಜ್ಯದಲ್ಲಿ ಎಷ್ಟು ಮಂದಿ ಮತ್ತು ಎಷ್ಟು ಕುಟುಂಬಗಳು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿವೆ ಎನ್ನುವ ಮಾಹಿತಿ ನಿಮ್ಮಲ್ಲಿ ಇದೆಯೇ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳು ಪ್ರಶ್ನಿಸಿ, ಅವರೆಲ್ಲರಿಗೂ ಸರ್ಕಾರದ ಕಾರ್ಯಕ್ರಮಗಳು ಗೊತ್ತಿದೆಯಾ? ಎಲ್ಲರಿಗೂ ಸರ್ಕಾರದ ಸವಲತ್ತುಗಳು ತಲುಪುತ್ತಿದೆಯಾ ಎಂದು ಸಿ.ಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು 25988 ಮಂದಿ , 11314 ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಭಿಸಿ ಬದುಕಿದ್ದಾರೆ. ಎಲ್ಲರಿಗೂ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ ತಲುಪಿಸಲಾಗುತ್ತಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಅನ್ನಭಾಗ್ಯ ಯೋಜನೆ ಎಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪುತ್ತಿದೆ. ಬಿಪಿಎಲ್ ಪಡಿತರ ಚೀಟಿಗಳು, ನಕಲಿ ಪಡಿತರ ಚೀಟಿಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ನೀವು ಜನರ ಬಳಿಗೆ ಹೋದಾಗ ಜನ ಅಕ್ಕಿ ಬೇಕು ಅಂತಿದ್ದಾರೋ, ಹಣ ಬೇಕು ಅಂತಿದ್ದಾರೋ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗೆ ಹಣ ಹೋಗುವುದನ್ನು ಹೆಚ್ಚಿನ ಜನರು ಬಯಸುತ್ತಿದ್ದಾರೆ. ಹೀಗಾಗಿ ಡಿಬಿಟಿ ಮೂಲಕ ಮುಂದುವರೆಸುವುದು ಉತ್ತಮ. ಹಾಗೆಯೇ ಡಿಬಿಟಿ ಯೋಜನೆಯಿಂದಾಗಿ ಕಾಳ ಸಂತೆಯನ್ನು ಅಕ್ಕಿ ಮಾರಿಕೊಳ್ಳುವ ಪ್ರಸಂಗಗಳಿಗೂ ಬ್ರೇಕ್ ಬೀಳುತ್ತದೆ. ಹಣ ಕೈಗೆ ಸಿಕ್ಕರೆ ಇತರೆ ಪದಾರ್ಥ, ಔಷಧಿಗೆ ಆ ಹಣವನ್ನು ಬಳಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಹೆಚ್ಚಾಗಿದೆ ಎಂದರು.
ಪಶು ಸಂಗೋಪನಾ ಇಲಾಖೆ
ಪಶು ಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಪಾರ್ಲಿಮೆಂಟಿನಲ್ಲಿ ನಡೆದಿದ್ದ ಚರ್ಚೆಯನ್ನು ಪ್ರಸ್ತಾಪಿಸಿ, ಹಳ್ಳಿ ಜನರು ಉತ್ಪಾದನೆ ಮಾಡುವ ಹಾಲು ಪಟ್ಟಗಳಿಗೆ ಹೋಗಿದೆ. ಪಟ್ಟಣದಲ್ಲಿ ತಯಾರಾಗುವ ಸರಾಯಿ ಹಳ್ಳಿಗಳಿಗೆ ಬಂದಿದೆ ಎಂದು ತಿಳಿಸಿದರು. ಆದ್ದರಿಂದ ಹಸು ಸಾಕಾಣೆಕಾರರು ಮೊದಲು ಹಾಲನ್ನು ತಾವು ಕುಡಿದು, ತಮ್ಮ ಮಕ್ಕಳಿಗೂ ಕುಡಿಸಿ ಹೆಚ್ಚುವರಿ ಹಾಲನ್ನು ಮಾರಾಟ ಮಾಡಬೇಕು. ಆಗ ಮಾತ್ರ ಅವರಿಗೂ ಆರೋಗ್ಯಕರ ಹಾಲು ಸಿಗುತ್ತದೆ ಎಂದರು. ಆದ್ದರಿಂದ ಈ ಬಗ್ಗೆ ರೈತರಲ್ಲಿ, ರೈತರ ಮಕ್ಕಳಲ್ಲಿ ಹಾಲು ಕುಡಿಯಲು ಜಾಗೃತಿ ಮೂಡಿಸಿ ಎಂದರು.
ಈ ಸುದ್ದಿಯನ್ನೂ ಓದಿ | DK Shivakumar: ದ್ವೇಷದ ರಾಜಕಾರಣಕ್ಕೆ ಕೊನೆಹಾಡಲು ಸಿಬಿಐ ಮುಕ್ತ ತನಿಖೆ ಅಧಿಕಾರ ಹಿಂದಕ್ಕೆ: ಡಿ.ಕೆ. ಶಿವಕುಮಾರ್
ಹಾಲಿನ ಉಪ ಉತ್ಪನ್ನಗಳನ್ನು ಹೆಚ್ಚೆಚ್ಚು ಉತ್ಪಾದಿಸಬೇಕು. ಹಾಲು ಒಕ್ಕೂಟಗಳಲ್ಲಿ ಅನಗತ್ಯ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದು ಹಾಕಬೇಕು. ಹಾಲು ಮತ್ತು ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಹೆಚ್ಚೆಚ್ಚು ವಿಸ್ತರಿಸುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಪ್ರೋಟೀನ್ ಪೌಡರ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಇದರ ಉತ್ಪಾದನೆ ಮತ್ತು ಮಾರಾಟದ ಕಡೆ ಗಮನ ಕೊಡಿ ಎಂದರು. ಕುರಿ ಮತ್ತು ಕೋಳಿ ಸಾಕಾಣಿಕೆಗೆ ಸಬ್ಸಿಡಿ ಸವಲತ್ತನ್ನು ಹೆಚ್ಚೆಚ್ಚು ಮಂದಿಗೆ ವಿಸ್ತರಿಸಲು ಸೂಚಿಸಿದರು.