Wednesday, 23rd October 2024

Mysuru Dasara: ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ; ಏನೇನು ಕಾರ್ಯಕ್ರಮ?

dasara

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru dasara 2024) ಕೊನೆಯ ದಿನವಾದ ವಿಜಯದಶಮಿ (Vijayadashami) ಜಂಬೂಸವಾರಿ ಮೆರವಣಿಗೆಗೆ ಇಂದು ಕ್ಷಣಗಣನೆ ಆರಂಭಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಮೈಸೂರು ಮಹಾರಾಜ ಹಾಗೂ ಸಂಸದ ಯದುವೀರ್‌ ಒಡೆಯರ್‌ (Yaduveer Wodeyar) ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಇಂದು ಮಧ್ಯಾಹ್ನ 1.41ರಿಂದ 2.10ರ ನಡುವೆ ಶುಭ ಮಕರ‌ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ.

ಜಂಬೂಸವಾರಿ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಚಾಮುಂಡಿ ಬೆಟ್ಟದಿಂದ ಉತ್ಸವಮೂರ್ತಿ ಇಂದು ಬೆಳಿಗ್ಗೆ 8 ಗಂಟೆಗೆ ಹೊರಬಂದು ಮೆರವಣಿಗೆ ಮೂಲಕ ಅರಮನೆಯತ್ತ ಸಾಗುತ್ತದೆ‌.

ಬೆಳಿಗ್ಗೆ 10:15 ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ಆರಂಭ (ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಸವಾರಿ ತೊಟ್ಟಿಗೆ ಆಗಮನ). ಬೆಳಿಗ್ಗೆ 10 ಗಂಟೆಯಿಂದ‌ ಅರಮನೆಯ ಶ್ವೇತವರಾಹಸ್ವಾಮಿ ದೇವಸ್ಥಾನದಲ್ಲಿ ಜಟ್ಟಿಗಳಿಂದ ಸಿದ್ಧತೆ ನಡೆಯಲಿದೆ. ಆ ಬಳಿಕ ಬೆಳಿಗ್ಗೆ 10:45 ರಿಂದ 11 ಗಂಟೆ ಒಳಗೆ ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಯಲಿದೆ.

ಜಟ್ಟಿಕಾಳಗ ಮುಗಿದ ಬಳಿಕ, 11:20 ರಿಂದ 11:45 ರ ವರೆಗೆ ಅರಮನೆ ಆವರಣದ ಭುವನೇಶ್ವರಿ ದೇವಸ್ಥಾನಕ್ಕೆ ವಿಜಯಯಾತ್ರೆ ಹೊರಡಲಿದ್ದು, ಬನ್ನಿಪೂಜೆ ಬಳಿಕ ಸ್ವಸ್ಥಾನಕ್ಕೆ ವಾಪಸ್ ಆಗಲಿದೆ. ಬಳಿಕ‌ ಯದುವೀರ್ ಕಂಕಣ ವಿಸರ್ಜನೆ ಮಾಡಲಿದ್ದಾರೆ.

ಇದನ್ನೂ ಓದಿ: Trishikha Kumari: ಮೈಸೂರು ಅರಮನೆಗೆ ಹಬ್ಬದ ಸಂಭ್ರಮ ದುಪ್ಪಟ್ಟು; ತ್ರಿಶಿಕಾ- ಯದುವೀರ್‌ ದಂಪತಿಗೆ ಗಂಡು ಮಗು ಜನನ