Sunday, 17th November 2024

Mysuru Dasara: ಉತ್ಸವಗಳಲ್ಲಿ ಮೈಸೂರು ಅರಸರ ಕುಟುಂಬ ಧರಿಸುವ ಒಡವೆಗಳು ಯಾವವು?

Mysuru Dasara

ಹಬ್ಬ ಬಂತೆಂದರೆ ಹೊಸವಸ್ತ್ರ ಇದ್ದರೆ ಇರಲಿ ಎಂದು ಆಶಿಸುತ್ತೇವೆ. ಖಯಾಲಿ ಮತ್ತು ಕಾಸು ಎರಡೂ ಇರುವವರು ಉಡುವುದಕ್ಕೆ ಮಾತ್ರವಲ್ಲ, ತೊಡುವುದಕ್ಕೆ ಒಡವೆಗಳೂ ಇರಲಿ ಎನ್ನುತ್ತಾರೆ. ಇವೆಲ್ಲ ಜನಸಾಮಾನ್ಯರ ಮಾತಾಯಿತು. ಭಾರತದಲ್ಲಿ ರಾಜಸತ್ತೆ ಅಳಿದು, ಪ್ರಜಾಪ್ರಭುತ್ವ ನೆಲೆಸಿದ್ದರೂ ರಾಜ ಪರಿವಾರಗಳಿಗೆ ಬರವಿಲ್ಲ. ಈ ಮೊದಲು ಸಂಸ್ಥಾನಗಳನ್ನು ಆಳಿಕೊಂಡಿದ್ದ ಅರಸರ ಪರಿವಾರಗಳು ಇಂದಿಗೂ ಹಲವಾರಿವೆ. ಅವುಗಳಲ್ಲಿ ಚಾಮುಂಡೇಶ್ವರಿ ದೇವಿಯ ನೆಲೆವೀಡಾದ ಮೈಸೂರು ಸಂಸ್ಥಾನವೂ (Mysuru Dasara) ಸೇರಿದೆ.

ಇಂದಿಗೂ ಮೈಸೂರಿನ ರಾಜಮನೆತನದ ಸದಸ್ಯರು ಮೈಸೂರು ಅರಮನೆಯ ಒಂದು ಭಾಗದಲ್ಲಿ ವಾಸಿಸುತ್ತಾರೆ. ನವರಾತ್ರಿಯಲ್ಲಿ ಖಾಸಗಿ ದರ್ಬಾರ್‌ ನಡೆಸುತ್ತಾರೆ. ಇಂತಿಪ್ಪ ಒಡೆಯರ್‌ ಮನೆತನದವರು ಉತ್ಸವಗಳ ಸಂದರ್ಭದಲ್ಲಿ ಧರಿಸುವ ಒಡವೆ ವಸ್ತ್ರಗಳೇನು?

ಮೈಸೂರು ಅರಸರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಅವರ ಸೊಸೆ ಪ್ರಮೋದಾದೇವಿ ಒಡೆಯರ್‌, ಅರಸು ಮನೆತನದ ಕುಡಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಅವರ ಪತ್ನಿ ತ್ರಿಷಿಕಾ ಕುಮಾರಿ ಇಂದಿನ ದಿನಗಳಲ್ಲಿ ದಸರೆಯ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ದರ್ಬಾರ್‌ನ ವೈಭವ ಈಗಿನ ದರ್ಬಾರ್‌ಗೆ ಇರುವುದಕ್ಕೆ ಸಾಧ್ಯವಿಲ್ಲ. ಆದರೂ ಸಾಂಪ್ರದಾಯಿಕ ಆಚರಣೆಗೆ ಎಲ್ಲಿಯೂ ಕುಂದಾಗುವುದಿಲ್ಲ ಎನ್ನುತ್ತಾರೆ ಆ ಕುಟುಂಬದ ನಿಕಟವರ್ತಿಗಳು. ಈಗಿನ ಉತ್ಸವಗಳಲ್ಲಿ ರಾಜರ ಕುಟುಂಬದವರು ಏನೆಲ್ಲ ಧರಿಸುತ್ತಾರೆ?

ವಸ್ತ್ರಗಳು

ಕೇವಲ ದಸರೆ ಎಂದಲ್ಲ, ಯಾವುದೇ ರೀತಿಯ ಉತ್ಸವಗಳಿದ್ದರೂ ಮೈಸೂರಿನ ಅರಸ-ಅರಸಿಯರ ಮೊದಲ ಆದ್ಯತೆ ಮೈಸೂರು ರೇಷ್ಮೆ. ಬೇರೆ ರೇಷ್ಮೆಗಳನ್ನು ಧರಿಸುವುದಿಲ್ಲ ಎಂದಲ್ಲ, ಹಿಂದೆ ಆಳುವ ಅರಸರ ಕೈಯಲ್ಲೇ ಕಾಯಕಲ್ಪಕ್ಕೆ ಒಳಗಾದ ಅಪ್ಪಟ ಚಿನ್ನದ ಜರಿಯ ಮೈಸೂರು ರೇಷ್ಮೆ ವಸ್ತ್ರ ಸೀರೆಗಳು ಅವರಿಗೆ ಮೆಚ್ಚಿನವು. ಇದಲ್ಲದೆ ಹಲವು ರೇಷ್ಮೆ ಮಗ್ಗಗಳಿಂದ ನೇಕಾರರು ನೇರವಾಗಿ ರಾಜಪರಿವಾರಕ್ಕೆ ವಸ್ತ್ರಗಳನ್ನು ಪೂರೈಸುತ್ತಾರೆ. ಹೀಗೆ ನೇಕಾರರಿಂದ ಬಂದಂತಹ ಸೀರೆಗಳನ್ನು ಉತ್ಸವದ ಸಂದರ್ಭಗಳಲ್ಲಿ ಅಂಚನ್ನೂ ಹೊಲಿಸದೆ ಧರಿಸುವುದು ಪ್ರಮೋದಾ ದೇವಿ ಮತ್ತು ತ್ರಿಷಿಕಾ ಅವರ ಪದ್ಧತಿ ಎನ್ನುತ್ತಾರೆ ಆ ಕುಟುಂಬದ ಆಪ್ತರು. ಪುರುಷರು ಸಾಂಪ್ರದಾಯಿಕ ಮೈಸೂರು ಪೇಟ, ಅದಕ್ಕೆ ಮುತ್ತು-ರತ್ನಗಳಿಂದ ಅಲಂಕಾರ, ಪೇಟದ ಅಂಚಿನಲ್ಲಿ ಇಳಿಬಿದ್ದ ಮುತ್ತಿನ ಮಾಲೆಯ ಗುಚ್ಛ, ರೇಷ್ಮೆಯ ಕುರ್ತಾ, ಪೈಜಾಮ ಮತ್ತು ಅದಕ್ಕೊಪ್ಪುವ ಶಲ್ಯವನ್ನು ಧರಿಸುತ್ತಾರೆ.

ಒಡವೆಗಳು

ದಸರಾದ ಖಾಸಗಿ ದರ್ಬಾರ್‌ ಸಮಯದಲ್ಲಿ ಸರ್ಕಾರ ಖಜಾನೆಯಿಂದಲೂ ಕೆಲವು ಆಭರಣಗಳು ಅಮಾವಾಸ್ಯೆಗೆ ಮುನ್ನವೇ ಬರುವುದಿದೆ. ದಶಮಿಯ ನಂತರ ಅವೆಲ್ಲ ಮರಳಿ ಸರ್ಕಾರದ ಖಜಾನೆ ಸೇರುತ್ತವೆ. ಆದರೆ ಅದಕ್ಕಿಂತ ಹೆಚ್ಚಿನ ಒಡವೆಗಳು ಈ ಮನೆತನದ ಖಜಾನೆಯಲ್ಲೇ ಇವೆ. ಉತ್ಸವಗಳ ಸಂದರ್ಭದಲ್ಲಿ ಈ ಕುಟುಂಬದ ಪುರುಷರು ಬಹಳಷ್ಟು ರೀತಿಯ ಒಡವೆಗಳನ್ನು ಧರಿಸುತ್ತಾರೆ. ಎರಡೂ ತೋಳುಗಳಿಗೆ ತೋಳಬಂಧಿ, ಕುತ್ತಿಗೆಯಲ್ಲಿ ಒಡ್ಡಾಗಿ ಕಾಣುವ ಅಟ್ಟಿಕೆ, ತಾಯತ ಹೊಂದಿರುವ ಮುತ್ತಿನ ಸರ, ಮೈಸೂರರಸರ ಲಾಂಛನವಾದ ಗಂಡಬೇರುಂಡವನ್ನು ಹೊಂದಿದ ಸರ, ಉಂಗುರಗಳು, ಕೈ ಮತ್ತು ಕಾಲಿಗೆ ಕಡಗವನ್ನೂ ಧರಿಸುವ ಕ್ರಮ ಅವರಲ್ಲಿದೆ. ಇದಲ್ಲದೆ ಮುತ್ತು-ರತ್ನಗಳನ್ನು ಹೊಂದಿದ ರತ್ನೋಪವೀತವನ್ನು ಸಹ ಧರಿಸುತ್ತಾರೆ. ಅರಸು ಮನೆತನದ ಒಡವೆಗಳಲ್ಲಿ ಹಲವು ರೀತಿಯ ಮುತ್ತು-ರತ್ನಗಳನ್ನು ಬಳಸಲಾಗುತ್ತದೆ. ಮುತ್ತು, ಮಾಣಿಕ್ಯ, ವಜ್ರ, ನೀಲ, ಪಚ್ಚೆ ಮುಂತಾದ ಹಲವು ಬಗೆಯ ಅಮೂಲ್ಯ ಹರಳು ಮತ್ತು ಮಣಿಗಳನ್ನು ಈ ಒಡವೆಗಳು ಒಳಗೊಂಡಿವೆ.

ಈ ಸುದ್ದಿಯನ್ನೂ ಓದಿ | KUWJ Conference: ತುಮಕೂರಿನಲ್ಲಿ ನವೆಂಬರ್‌ನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ

ಮಹಿಳೆಯರು ಧರಿಸುವ ಆಭರಣಗಳು ಸಹ ರತ್ನಖಚಿತವಾದವು. ಮೈಸೂರು ಶೈಲಿಯ ಡಾಬು, ಅಟ್ಟಿಕೆ, ಚೋಕರ್‌, ಅಗಲ ಪದಕದ ಗೋಪು ಸರ, ಕಾಸಿನ ಸರ, ಹಂಸ ಅಥವಾ ನವಿಲಿನ ಪದಕಗಳನ್ನು ಹೊಂದಿದ ಸರಗಳು, ಮುಂಗುರುಳು ಪಟ್ಟಿ, ಜತೆಗೆ ಸೂರ್ಯ-ಚಂದ್ರ, ಅದಿಲ್ಲದಿದ್ದರೆ ಮುತ್ತಿನ ಬೈತಲೆ ಬೊಟ್ಟು, ರಾಗಟೆ, ಜಡೆಸರ, ಝುಮುಕಿ ಮತ್ತು ವಾಲೆಸರ, ಬುಗಡಿ, ತರಹೇವಾರಿ ಬಳೆಗಳು, ಅಗಲವಾದ ಕೈ ಕಡಗಗಳು, ಕಾಲುಂಗುರು, ಗೆಜ್ಜೆ- ಹೀಗೆ ಮೈಸೂರು ಶೈಲಿಯ ಆಭರಣಗಳನ್ನೇ ಅರಸು ಮನೆತನದ ಮಹಿಳೆಯರು ಧರಿಸುವ ಕ್ರಮವಿದೆ. ಇವೆಲ್ಲವನ್ನೂ ಉತ್ಸವದ ಸಂದರ್ಭದಲ್ಲಿ ಕಡ್ಡಾಯ ಧರಿಸಬೇಕೆಂದಿಲ್ಲ. ಅವರಿಷ್ಟಕ್ಕೆ ತಕ್ಕಂತೆ ಇವುಗಳಲ್ಲಿ ಬೇಕಾದ್ದನ್ನು ಆಯ್ದುಕೊಳ್ಳುತ್ತಾರೆ. ಆದಾಗ್ಯೂ ಬದಲಾವಣೆಯ ಗಾಳಿ ಎಲ್ಲೆಡೆ ಇರುವುದರಿಂದ, ತೀರಾ ಸಾಂಪ್ರದಾಯಿಕ ಒಡವೆಗಳಲ್ಲದೆ, ಸ್ವಲ್ಪ ಆಧುನಿಕ ಸ್ಪರ್ಶ ಹೊಂದಿದವೂ ಕಂಡರೆ ಅಚ್ಚರಿ ಪಡಬೇಕಿಲ್ಲ.