Thursday, 12th December 2024

Nadaprabhu Kempegowda: ಲಂಡನ್‌ನಲ್ಲಿ ಅದ್ಧೂರಿಯಾಗಿ ಜರುಗಿತು ಕೆಂಪೇಗೌಡರ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಭ್ರಮ

Nadaprabhu Kempegowda

ಲಂಡನ್‌: ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ವತಿಯಿಂದ ಲಂಡನ್‌ನ (London) ಕ್ಯಾಂಬೆರ್‌ವೆಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ (Nadaprabhu Kempegowda) 3ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಭ್ರಮ ಮತ್ತು ಕನ್ನಡ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಮೀಡಿಯಾ ಕನೆಕ್ಟ್‌ ಸಿಇಒ ಹಾಗೂ ಸಂಸ್ಥಾಪಕಿ ದಿವ್ಯ ರಂಗೇನಹಳ್ಳಿ ಸೇರಿದಂತೆ ಹಲವು ಸಾಧಕರಿಗೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಭೂತಕಾಲವನ್ನು ಭವಿಷ್ಯದ ಜತೆ ಜೋಡಿಸಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯವಿದೆ. ಈ ಕಾರ್ಯಕ್ರಮದ ಮೂಲಕ ಭಾರತದ ಸಂಸ್ಕೃತಿಯನ್ನು ವಿದೇಶಿ ನೆಲದಲ್ಲಿ ಪ್ರತಿಬಿಂಬಿಸುವ ಪ್ರಯತ್ನವಾಗಿದೆ. ಈ ಮೂಲಕ ನಾವು ನಮ್ಮ ಪೂರ್ವಜರ ಹೆಜ್ಜೆಗಳನ್ನು ತಿಳಿಯಬೇಕು ಜತೆಗೆ ಮುಂದಿನ ಪೀಳಿಗೆಗೂ ತಿಳಿಸಬೇಕು. ಇಂದು ಜಾಗತಿಕ ನಗರವಾಗಿ ಬೆಳೆದಿರುವ ಬೆಂಗಳೂರಿಗೆ ಐದು ಶತಮಾನಗಳ ಹಿಂದೆ ನಾಡಪ್ರಭು ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ಅಡಿಪಾಯ ಹಾಕಿದರು. ಸರ್ವಧರ್ಮ ಸಮನ್ವಯಗಳ ಕಲ್ಪನೆ ಹೊಂದಿದ್ದ ಅವರನ್ನು ನಾವು ಯಾವುದೇ ಜಾತಿಯನ್ನು ಆಧರಿಸಿ ನೋಡುತ್ತಿಲ್ಲ, ಇಂದು ವಿಶ್ವವೇ ಅವರ ಕೌಶಲ್ಯವನ್ನು ತಿಳಿಯುತ್ತಿದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರದರ್ಶಿಸಲು ಸಂಘಟಕರ ಬದ್ಧತೆಯನ್ನು ತೋರುತ್ತಿದೆ. ಪ್ರಪಂಚದಾದ್ಯಂತ ಕನ್ನಡಿಗರು ವಾಸಿಸುತ್ತಿದ್ದು, ಅವರ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕವನ್ನು ಮುಂದುವರಿಸಿ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Mysuru Dasara 2024: 150 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್‌ ಜೋಶಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷನೆಂದರೆ 7 ಕೋಟಿ ಕನ್ನಡಿಗರ ಧ್ವನಿಯಾಗಿ ಇಲ್ಲಿ ವಿಶ್ವ ಒಕ್ಕಲಿಗರ ವೇದಿಕೆಯಲ್ಲಿ ಪಾಲ್ಗೊಂಡಿದ್ದೇನೆ. ಬೆಂಗಳೂರು ನಗರದ ಪಿತಾಮಹ, 1000 ಕೆರೆಗಳ ಸರದಾರ, ಮುನ್ನೋಟದ ಕನಸುಗಾರ, ಕರುನಾಡು ಹೆಮ್ಮೆಯ ಕುವರ, ಗೌಡರ ಒಕ್ಕಲಿಗರ ಕುಲತಿಲಕ, ಸರ್ವಧರ್ಮಗಳ ಸಮನ್ವಯದ ಹರಿಕಾರ ಕೆಂಪೇಗೌಡರ ಹೆಸರನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಶ್ರೀಗಳ ಆದಿಯಾಗಿ ವಿಶ್ವ ಒಕ್ಕಲಿಗರ ವೇದಿಕೆಯೇ ಕಾರಣ. ಜಗತ್ತಿನ ಅತೀ ಶ್ರೇಷ್ಠ ಸಂಸ್ಕೃತಿ ಎಂದರೆ ಕೃಷಿ. ಕೃಷಿಕರು, ಮಣ್ಣಿನ ಮಕ್ಕಳು ಎಂದರೆ ಒಕ್ಕಲಿಗರು. ವಿದೇಶದಲ್ಲಿ ನೆಲೆಸಿ ಕನ್ನಡದ ಅಭಿಮಾನವನ್ನು ಪಸರಿಸುತ್ತಿರುವ ಕನ್ನಡಿಗರನ್ನು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಮೇಯರ್‌ ನೈಮ ಆಲಿ ಮಾತನಾಡಿ, ಕನ್ನಡ ಸಮುದಾಯ ಮತ್ತು ಯುಕೆಗೆ ಕನ್ನಡಿಗರ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಸಂಸ್ಕೃತಿ ಮತ್ತು ಭಾಷೆಯ ಆಚರಣೆಯಲ್ಲಿ ನಾನು ಪಾಲ್ಗೊಂಡಿರುವುದು ಸಂತಸ ತಂದಿದೆ. ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಮತ್ತು ವ್ಯಾಪಾರದಂತಹ ಉದ್ಯಮಗಳಲ್ಲಿ ಯುಕೆಯ ಯಶಸ್ಸಿನ ಪ್ರಮುಖ ಭಾಗವಾಗಿರುವುದು ಕನ್ನಡ ಮಾತನಾಡುವ ಸಮುದಾಯ. ಸ್ಥಳೀಯ ಮತ್ತು ರಾಷ್ಟ್ರೀಯ ಆರ್ಥಿಕತೆಗಳಿಗೆ ಅವರ ಕಠಿಣ ಪರಿಶ್ರಮವೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್‌ ರೆಡ್ಡಿ ಮಾತನಾಡಿ, ದೂರದೂರಿನಿಂದ ಇಲ್ಲಿ ಬಂದು ಬದುಕನ್ನ ಕಟ್ಟಿಕೊಂಡಿರುವ ಕನ್ನಡಿಗರು ನಿಜಕ್ಕೂ ಕನ್ನಡವನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ. ಇಂದು ಬೆಂಗಳೂರು ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ ಅದಕ್ಕೆ ಕಾರಣ ಕೆಂಪೇಗೌಡರು. ಪ್ರಸಿದ್ಧ ದೇಶಗಳಂತೆ ಬೆಂಗಳೂರು ಉತ್ತಮ ವಾತಾವಾರಣವನ್ನು ಹೊಂದಿದೆ. ಅಲ್ಲದೆ ಸ್ವಾಮೀಜಿಯವರ ಸಂಸ್ಥೆಯಲ್ಲಿ ಅನೇಕರು ಶಿಕ್ಷಣ ಪಡೆದು ಇಂದು ವಿಶ್ವದೆಲ್ಲೆಡೆ ಉತ್ತಮ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೆ ಕಾರಣ ಅವರ ಆಶೀರ್ವಾದ. ಈ ವೇಳೆ ಭಾರತ ಕಂಡ ನೆಚ್ಚಿನ ಪ್ರಧಾನಿ ಮೋದಿಯವರನ್ನು ಅವರು ನೆನೆದರು.

ಈ ಸುದ್ದಿಯನ್ನೂ ಓದಿ | Google Gemini : ಗೂಗಲ್ ಜೆಮಿನಿಯಲ್ಲಿ ಈಗ ಕನ್ನಡ ಸೇರಿದಂತೆ 7 ಭಾಷೆ ಲಭ್ಯ

ಕಾರ್ಯಕ್ರಮದಲ್ಲಿ ಜಯರಾಮ್‌ ರಾಯಪುರ ಮಾತನಾಡಿ, ಇಡೀ ಪ್ರಪಂಚವೇ ಬೆಂಗಳೂರಿನತ್ತ ಇಂದು ಧಾವಿಸುತ್ತಿದೆ. ಅಂತಹ ಬೆಂಗಳೂರಿನ ಕೋಟೆಯನ್ನು ಕಟ್ಟಿದ ಕೆಂಪೇಗೌಡರ ಜಯಂತಿಯನ್ನು ವಿಶ್ವದೆಲ್ಲೆಡೆ ಆಚರಿಸಲು ಪಣತೊಟ್ಟಿರುವ ವಿಶ್ವ ಒಕ್ಕಲಿಗರ ಮಹಾವೇದಿಕೆಯ ಪಯತ್ನ ನಿಜಕ್ಕೂ ಶ್ಲಾಘನೀಯ. ಏಕೆಂದರೆ ಇಡೀ ವಿಶ್ವವೇ ಉದ್ಯಮ, ವ್ಯಾಪಾರ ವಹಿವಾಟು, ಉದ್ದಿಮೆ ಕಾರಣಕ್ಕಾಗಿ ಬೆಂಗಳೂರಿಗೆ ಬರುತ್ತಿದೆ. ವಿಶ್ವಮಾನವ ತತ್ವ ಹೊಂದಿರುವ ಕರ್ನಾಟಕದ ಕಂಪು ಇಂದು ಎಲ್ಲೆಡೆ ಪಸರಿಸುತ್ತಿದೆ. ಬೆಂಗಳೂರು ಮಹಾನಗರದ ನಿರ್ಮಾತೃ ಕೆಂಪೇಗೌಡರ ಕಲ್ಪನೆಯನ್ನು ಇಂದು ವಿಶ್ವವೇ ಪ್ರಶಂಸಿಸುವ ಮಟ್ಟಕ್ಕೆ ಮನ್ನಣೆ ಪಡೆದಿದೆ. ನಾವೂ ಕೂಡ ಇಂದು ಬಹುರಾಷ್ಟ್ರೀಯ ಕಂಪನಿಗಳನ್ನು ಕಟ್ಟುವಂತಾಗಬೇಕು. ನಮ್ಮ ಕರ್ನಾಟಕದಲ್ಲಿನ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ನಾವು ದೊಡ್ಡ ಉದ್ದಿಮೆಗಳನ್ನು ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವ ಒಕ್ಕಲಿಗರ ಮಹಾ ವೇದಿಯ ಅಧ್ಯಕ್ಷ ವೈ.ಡಿ. ರವಿಶಂಕರ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷೆ ಭಾರತಿ ಶಂಕರ್‌, ಯುಕೆ ಆಲ್‌ ಕೌಂಟಿ ಕನ್ನಡ ಅಸೋಸಿಯೆಶನ್‌ ಬಳಗದ ಪರವಾಗಿ ಸುರೇಶ್‌ ಘಟ್ಟಾಪುರ ಮತ್ತು ಹರೀಶ್‌ ರಾಮಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್‌ ಅವರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ | Martin Movie: ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ʼಮಾರ್ಟಿನ್ʼ ಚಿತ್ರ ಬಿಡುಗಡೆಗೆ ಡೇಟ್‌ ಫಿಕ್ಸ್‌!

ಇದೇ ವೇಳೆ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿಯನ್ನು ದಿವ್ಯ ರಂಗೇನಹಳ್ಳಿ (ಮೀಡಿಯಾ ಕನೆಕ್ಟ್‌ ಸಿಇಒ ಹಾಗೂ ಸಂಸ್ಥಾಪಕರು), ಡಾ. ಎಸ್‌.ರಾಮಾನುಜ, ಡಾ. ಎಚ್‌.ಎಂ. ಕೃಷ್ಣಮೂರ್ತಿ, ವಿಜಯ ರಮೇಶ್, ಯುವನ್‌ ದೇವ್‌, ಹರೀಶ್‌ ರಾಮಯ್ಯರವರಿಗೆ ಪ್ರದಾನ ಮಾಡಲಾಯಿತು. ಹಾಗೆಯೇ ಜಯರಾಮ್‌ ರಾಯಪುರ, ರಮೇಶ್‌ ಸಂಗಾ, ಮೊಹಮ್ಮದ್‌ ರಫಿ ಪಾಶ ಮತ್ತು ಸುರೇಶ್‌ ಘಟ್ಟಾಪುರ ಅವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.