Sunday, 15th December 2024

Vishwa Vokkaliga Mutt: ಮಠಗಳಿಗೆ ವಿದ್ಯಾವಂತ, ಪ್ರಾಮಾಣಿಕರ ಅಗತ್ಯವಿದೆ; ವಿಶ್ವ ಒಕ್ಕಲಿಗ ಮಠದ ಉತ್ತರಾಧಿಕಾರಿಗೆ ನಾಗತಿಹಳ್ಳಿ ಚಂದ್ರಶೇಖರ್‌ ಪತ್ರ

Vishwa Vokkaliga Mutt

ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ (Vishwa Vokkaliga Mutt) ನೂತನ ಉತ್ತರಾಧಿಕಾರಿಯಾಗಿ ನಿವೃತ್ತ ಕೆಎಎಸ್‌ ಅಧಿಕಾರಿ ಡಾ. ಎಚ್‌.ಎಲ್‌. ನಾಗರಾಜ್‌ ಅವರು ಸನ್ಯಾಸ ದೀಕ್ಷೆ ಪಡೆದು, ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೆಸರಿನಿಂದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕೆಂಗೇರಿಯಲ್ಲಿ ಭಾನುವಾರ ಪಟ್ಟಾಧಿಕಾರ ಮಹೋತ್ಸವ ನೆರವೇರಿದ್ದು, ಇವರಿಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ (Nagathihalli chandrashekhar) ಅವರು ಪತ್ರ ಬರೆದು ಶುಭ ಹಾರೈಸಿದ್ದಾರೆ.

ಪಟ್ಟಾಧಿಕಾರ ಮಹೋತ್ಸವಕ್ಕೆ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಆಹ್ವಾನ ನೀಡಿದ್ದರು. ಆದರೆ, ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಪತ್ರ ಬರೆದು, ಅಭಿನಂದನೆ ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?

ಪ್ರೀತಿಯ ನಾಗರಾಜು,
ಈ ದಿನದ ಮಟ್ಟಿಗೆ ನಿಮ್ಮನ್ನು ‘ನಾಗರಾಜುʼ ಎಂದು ಸಲುಗೆಯಿಂದ ಕರೆಯಬಹುದೇನೋ. ನಾಳೆ ಸೂರ್ಯೋದಯವಾಗುತ್ತಿದ್ದಂತೆ ನಿಮ್ಮ ಹೆಸರು ʼಜಗದ್ಗುರು ನಿಶ್ಚಲಾನಂದನಾಥ ಮಹಾಸ್ವಾಮೀಜಿಗಳುʼ. ಪಟ್ಟಾಧಿಕಾರ ಉತ್ಸವಕ್ಕೆ ಬನ್ನಿ ಎಂದು ಕರೆ ಮಾಡಿದ್ದಿರಿ. ಆಹ್ವಾನ ಪತ್ರಿಕೆಯನ್ನು ಕಳುಹಿಸಿದ್ದೀರಿ. ಇದಕ್ಕೆ ಋಣಿ. ಲೌಕಿಕ ಪರ್ವದ ನಾಗರಾಜು ಅವರಿಗೊಂದು ಕೊನೆಯ ಕಾಗದ.

ನಮ್ಮ ನಾಗಮಂಗಲವೂ ಸೇರಿ ಐದು ತಾಲೂಕುಗಳಲ್ಲಿ ನೀವು ತಹಸೀಲ್ದಾರ್‌ ಆಗಿ, ನಾಲ್ಕು ಉಪ ವಿಭಾಗಗಳಲ್ಲಿ ಎಸಿ ಆಗಿ, ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಎಲ್ಲೆಡೆ ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದಿರಿ. ಚಿಕ್ಕಾಸೂ ಲಂಚ ಕೊಡದೆ ಸಾಗುವಳಿ ಚೀಟಿ ಪಡೆದ ಶೃಂಗೇರಿಯ ರೈತರು ನಿಮ್ಮನ್ನು ಸದಾ ಕೃತಜ್ಞತೆಯಿಂದ, ಪ್ರೀತಿಯಿಂದ ನೆನೆಯುತ್ತಾರೆ. ನಾಗತಿಹಳ್ಳಿ ಸಂಸ್ಕೃತಿ ಹಬ್ಬಕ್ಕೂ ಬಂದಿದ್ದಿರಿ. ಬೆಲೆ ಬಾಳುವ ಮಾತುಗಳನ್ನಾಡಿದ್ದಿರಿ. ಉತ್ತಮ ಅಧಿಕಾರಿಯನ್ನು ಕಳೆದುಕೊಳ್ಳುತ್ತಿದ್ದೇವೆ.

ಲಂಕೇಶರ ʼ ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿʼ ಎಂಬ ಲೇಖನ ನೆನಪಾಗುತ್ತಿದೆ. ದೊರೆತನ, ಅರಮನೆ, ಲೌಕಿಕ ಭೋಗಗಳು ಮತ್ತು ಸಿಂಹಾಸನವನ್ನು ತೊರೆದ ಗೌತಮ ಮೋಕ್ಷವನ್ನರಸುತ್ತ ಹೊರಟು ಹೋಗುವ ಪಲ್ಲಟವನ್ನು ಲಂಕೇಶರು ಮಾರ್ಮಿಕವಾಗಿ ವಿವರಿಸಿದ್ದಾರೆ. ನಿಮಗೆ ಮುಂಚಿನಿಂದ ಸನ್ಯಾಸದಲ್ಲಿ ಆಸಕ್ತಿ. ಪರಿವ್ರಾಜಕ ಪಥದತ್ತ ಹೊರಟೇ ಬಿಟ್ಟಿರಿ. ಈಗ ಎಲ್ಲ ಕ್ಷೇತ್ರಕ್ಕೂ, ವಿಶೇಷವಾಗಿ ಮಠಗಳಿಗೆ ವಿದ್ಯಾವಂತ, ಪ್ರಾಮಾಣಿಕ ವ್ಯಕ್ತಿಗಳ ಅಗತ್ಯವಿದೆ.

ಅನ್ಯಥಾ ಭಾವಿಸದಿರಿ. ಪಟ್ಟಾಧಿಕಾರ ಮಹೋತ್ಸವಕ್ಕೆ ನಾನು ಬರುತ್ತಿಲ್ಲ. ಉದ್ಧಟತನ ಅಂದುಕೊಳ್ಳಬೇಡಿ. ಬೃಹತ್‌ ಸಭೆಗಳು, ಮಹಾಧಿವೇಶನಗಳು, ಔಪಚಾರಿಕ ಸಮಾರಂಭಗಳು ಸಂಕೋಚ ತರುತ್ತವೆ. ಮೈಸೂರಿನ ಹಾದಿಯಲ್ಲೊಮ್ಮೆ ನಿಮ್ಮ ಬಿಡುವಿನಲ್ಲಿ ಅನೌಪಚಾರಿಕವಾಗಿ ಭೇಟಿ ಮಾಡುತ್ತೇನೆ. ಇರುವ ಕಡೆ ಮಹೋನ್ನತ ಆದರ್ಶಗಳನ್ನು ಮತ್ತು ಮಾನವ ಕುಲದ ಸೇವೆಯನ್ನು ಮಾಡಲು ಅವಕಾಶವಿದ್ದೇ ಇರುತ್ತದೆ. ನೀವು ಈ ಪಟ್ಟಾಧಿಕಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತೀರಿ ಎಂಬ ನಿರೀಕ್ಷೆ ಮತ್ತು ನಂಬಿಕೆ ನನ್ನಂಥವರದು, ಪ್ರೀತಿಯ ಅಭಿನಂದನೆಗಳು ಎಂದು ಶ್ರೀ ನಿಶ್ಚಲಾನಂದ ಶ್ರೀಗಳಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಶುಭ ಕೋರಿದ್ದಾರೆ.

ಈ ಸುದ್ದಿಯನ್ನೂ ಓದಿ | Ramakrishna Ashrama: ರಾಮಕೃಷ್ಣ ಆಶ್ರಮದ 32ನೇ ವಾರ್ಷಿಕೋತ್ಸವ ಡಿ.22ಕ್ಕೆ: ವೀರೇಶಾನಂದ ಸ್ವಾಮೀಜಿ

ಮಂಡ್ಯದ ಕೆಎಎಸ್ ಅಧಿಕಾರಿ, ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು ಅವರು ಇತ್ತೀಚೆಗೆ ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಮಂಡ್ಯ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಸನ್ಯಾಸ ದೀಕ್ಷೆ ಪಡೆದು ಇದೀಗ ವಿಶ್ವ ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.