ಬೆಂಗಳೂರು: ಮೆಟ್ರೋ (Namma Metro) ಹಸಿರು ವಿಭಾಗದ (Green line) ನಾಗಸಂದ್ರ – ಮಾದಾವರ (Nagasandra – Madavara) ವಿಸ್ತರಿತ ಮಾರ್ಗ ಬುಧವಾರ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಯಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಮಂಗಳವಾರ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾದ ನಂತರ, ವಿಸ್ತರಿತ ಹಸಿರು ಮಾರ್ಗ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಸಂತಸದ ವಿಷಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು.
ಇತ್ತೀಚೆಗೆ ವಿಸ್ತರಿತ ಮಾರ್ಗದ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದರು. ‘ಮೂರೂವರೆ ಕಿಲೋಮೀಟರ್ ದೂರ, ಮೂರು ನಿಲ್ದಾಣಗಳಷ್ಟೇ ಇರುವ ಸಣ್ಣ ಮಾರ್ಗ ಇದಾಗಿದ್ದರಿಂದ ತ್ವರಿತ ತಪಾಸಣೆ ಮತ್ತು ಅನುಮತಿ ಸಿಕ್ಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿದ ದಿನ ಮೆಟ್ರೊ ರೈಲು ಸಂಚಾರ ಆರಂಭಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ನೇರಳೆ ಮಾರ್ಗ ಕೂಡ ಯಾವುದೇ ವಿಐಪಿ ಕಾರ್ಯಕ್ರಮಗಳ ಆಯೋಜನೆ ಇಲ್ಲದೇ ಸಾರ್ವಜನಿಕ ಸೇವೆಗೆ ಮುಕ್ತಗೊಂಡಿತ್ತು. ವಿಸ್ತರಿತ ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರುಕಲ್ಲು, ಮಾದಾವರಗಳನ್ನು ಒಳಗೊಂಡ 3 ಮೆಟ್ರೋ ನಿಲ್ದಾಣಗಳಿವೆ. ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಈ ಮಾರ್ಗವು ಬಹುಮುಖ್ಯ ಪಾತ್ರ ವಹಿಸಲಿದೆ. 91 ತಿಂಗಳ ಅವಧಿ ತೆಗೆದುಕೊಂಡ ನಂತರ ಇದೀಗ ಸಾರ್ವಜನಿಕರ ಸೇವೆಗೆ ಮುಕ್ತವಾಗಿದೆ.
ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಪಿಂಕ್ ಲೈನ್ ಆರಂಭ 2026ರ ಡಿಸೆಂಬರ್‌ಗೆ