Thursday, 21st November 2024

Nandini batter : ನಂದಿನಿ ದೋಸೆ, ಇಡ್ಲಿ ಹಿಟ್ಟು ಮಾರಾಟಕ್ಕೆ ರೆಡಿ; ಬಿಡುಗಡೆಗೆ ಸಿಎಂ ದಿನಾಂಕ ಕೇಳಿದ ಕೆಎಂಎಫ್‌

Nandini batter

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (KMF) ತನ್ನ ಪ್ರಮುಖ ಡೈರಿ ಬ್ರಾಂಡ್ ನಂದಿನಿ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟಿನ ಪ್ಯಾಕೆಟ್‌ ಅನ್ನು (Nandini batter) ಬೆಂಗಳೂರಿನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಅದರ ಪ್ಯಾಕೆಟ್‌ಗಳನ್ನು ನಂದಿನಿ ಸಿದ್ಧಗೊಳಿಸಿರುವುದರ ಚಿತ್ರವನ್ನು ಮನಿ ಕಂಟ್ರೋಲ್‌ ತನ್ನ ವರದಿಯಲ್ಲಿ ಪ್ರಕಟಿಸಿದೆ. ಅಲ್ಲದೆ ಉತ್ಪನ್ನದ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಅವರ ಸಮಯವನ್ನು ಕೇಳಿದೆ ಎಂದು ವರದಿ ಮಾಡಿದೆ.

ಬೆಂಗಳೂರಿನಲ್ಲಿಐಡಿ, ಅಸಲ್ ಮತ್ತು ಎಂಟಿಆರ್ ಕಂಪನಿಗಳು ಹಿಟ್ಟನ್ನು ಮಾರಾಟ ಮಾಡುತ್ತಿವೆ ಇದೀಗ ಆ ಎಲ್ಲ ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡಲು ನಂದಿನಿ ಸಜ್ಜಾಗಿದೆ.

ನಾವು ಬಿಡುಗಡೆಗೆ ಸಿದ್ಧರಿದ್ದೇವೆ. ಸಿಎಂ ಅವರಿಂದ ದಿನಾಂಕ ಕೋರಿದ್ದೇವೆ. ಶೀಘ್ರದಲ್ಲೇ ಮಾರುಕಟ್ಟೆಗೆ ಇಳಿಯಲಿದೆ. ನಮ್ಮ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆ ನಿಗದಿಪಡಿಸುತ್ತೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರ ಹೇಳಿಕೆಯನ್ನು ಮನಿ ಕಂಟ್ರೋಲ್ ಉಲ್ಲೇಖಿಸಿದೆ. ಈ ಹಿಟ್ಟು 450 ಗ್ರಾಂ ಮತ್ತು 900 ಗ್ರಾಂ ಪ್ಯಾಕ್ ಗಳಲ್ಲಿ ಲಭ್ಯವಾಗಲಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

ನಂದಿನಿ ಉಳಿದ ಬ್ರಾಂಡ್‌ಗಳಿಗಿಂತ ಭಿನ್ನವಾಗಲು ಅದರ ಪ್ರೋಟೀನ್ ಬೇಸ್. ಅದರ ಪರಿಮಳ ಮತ್ತು ವಿನ್ಯಾಸ ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ. ನೀಲಿ ಬಣ್ಣದ 900 ಗ್ರಾಂ ಹಿಟ್ಟು 18 ಇಡ್ಲಿ ಅಥವಾ 12-14 ದೋಸೆಗಳನ್ನು ತಯಾರಿಸುವ ಭರವಸೆ ನೀಡುತ್ತದೆ. ಆಗಸ್ಟ್‌ನಲ್ಲಿ ಬಿಡುಗಡೆಗೆ ಯೋಜಿಸಲಾಗಿತ್ತು. ವಿವಿಧ ಕಾರಣಗಳಿಂದಾಗಿ ವಿಳಂಬವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ನಂದಿನಿ ಹಾಲು, ಬ್ರೆಡ್, ತುಪ್ಪ, ಬೆಣ್ಣೆ, ಮೊಸರು, ಚೀಸ್, ಮಜ್ಜಿಗೆ ಮತ್ತು ಮೊಸರು ಸೇರಿದಂತೆ ಹಲವಾರು ಉತ್ಪನ್ನಗಳನ್ನು ನೀಡುತ್ತದೆ.

ತ್ವರಿತ ಉಪಾಹಾರ ತಯಾರು ಮಾಡುವುದನ್ನು ಬಯಸುವ ಟೆಕಿಗಳನ್ನು ಹೊಂದಿರುವ ಬೆಂಗಳೂರು ಹೊಸ ಉತ್ಪನ್ನಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆಯನ್ನು ಗಮನಿಸಿದ ನಂತರ ಹಿಟ್ಟನ್ನು ಇತರ ಸ್ಥಳಗಳಿಗೆ ಕೊಂಡೊಯ್ಯಲು ಕೆಎಂಎಫ್ ಯೋಜನೆ ರೂಪಿಸಿದೆ.

ನಂದಿನಿ ಬ್ರಾಂಡ್ ವ್ಯಾಪ್ತಿ ವಿಸ್ತಾರ

ನಂದಿನಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಪಂದ್ಯಾವಳಿಯ ಅಧಿಕೃತ ಕೇಂದ್ರ ಪ್ರಾಯೋಜಕರಾಗಿದ್ದಾರೆ. ಪ್ರೊ ಕಬಡ್ಡಿ ಲೀಗ್ ನ 11ನೇ ಆವೃತ್ತಿಯ ಪ್ರಾಯೋಜಕತ್ವವನ್ನು ನವೆಂಬರ್-ಡಿಸೆಂಬರ್ ನಲ್ಲಿ ನಡೆಸಲು ಕೆಎಂಎಫ್ ಯೋಜಿಸಿದೆ. ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನಲ್ಲಿ ನಡೆದ ಟಿ 20 ಕ್ರಿಕೆಟ್ ವಿಶ್ವಕಪ್ ನಲ್ಲಿ ನಂದಿನಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿತ್ತು.

ಇದನ್ನೂ ಓದಿ: Tirupati Laddu: ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಕೆ

ದೆಹಲಿ ಮಾರುಕಟ್ಟೆಯನ್ನು ಪ್ರವೇಶಿಸುವ ಯೋಜನೆಯೊಂದಿಗೆ ಕೆಎಂಎಫ್ ಕರ್ನಾಟಕದಾಚೆಗೂ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ. ಪ್ರಸ್ತುತ, ನಂದಿನಿಯ ತಾಜಾ ಡೈರಿ ಉತ್ಪನ್ನಗಳು ಕರ್ನಾಟಕ, ಮಹಾರಾಷ್ಟ್ರ (ಮುಂಬೈ, ನಾಗ್ಪುರ, ಪುಣೆ, ಸೋಲಾಪುರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ), ಗೋವಾ, ತೆಲಂಗಾಣದ ಹೈದರಾಬಾದ್, ತಮಿಳುನಾಡಿನ ಚೆನ್ನೈ ಮತ್ತು ಕೇರಳದಲ್ಲಿ ಲಭ್ಯವಿದೆ.