Thursday, 12th December 2024

ಹಾಲಿನ ದರ ಏರಿಕೆ ಬಿಸಿ ?

ಬೆಂಗಳೂರು: ಜನರಿಗೆ ಹಾಲಿನ ದರ ಏರಿಕೆಯ ಬಿಸಿಯೂ ತಟ್ಟುವ ಸಾಧ್ಯತೆ ಇದೆ.

ಕರ್ನಾಟಕ ಹಾಲು ಮಾರಾಟ ಮಹಾಮಂಡಳವು ಹಾಲಿನ ದರ ಹೆಚ್ಚಿಸುವಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಅವರಿಗೆ ಮನವಿ ಮಾಡಿದೆ. ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಬೇಕೆಂದು ಕೆಎಂಎಫ್‌ನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಸಲ್ಲಿಸಿದ್ದಾರೆ. ಸದ್ಯ ಮೇ 1 ರಿಂದಲೇ ಪರಿಷ್ಕೃತ ದರ ಜಾರಿಯಾಗುವ ಸಾಧ್ಯತ ಇದೆ ಎನ್ನಲಾ ಗುತ್ತಿದೆ.

ಅಮೂಲ್ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಹಾಲಿನ ದರವನ್ನ ಹೆಚ್ಚಿಸಿವೆ. ನಂದಿನಿ ಹಾಲಿನ ದರಕ್ಕೆ ಹೋಲಿಸಿದರೆ ಇತರ ಸಂಸ್ಥೆಗಳ ಹಾಲಿನ ದರವು ಲೀಟರ್‌ಗೆ 8 ರಿಂದ 10 ರೂಪಾಯಿ ಹೆಚ್ಚಿದೆ. ಹೀಗಾಗಿ ನಂದಿನಿ ಹಾಲಿನ ದರವನ್ನು ಕೂಡ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಬೇಕು ಎಂದು ಬೊಮ್ಮಾಯಿಗೆ ಮನವಿ ಮಾಡಲಾಗಿದೆ.

ಹಾಲಿನ ದರ ಹೆಚ್ಚಿಸಬೇಕೆಂದು ಹಲವು ತಿಂಗಳುಗಳಿಂದ ಕೆಎಂಎಫ್‌ ಸರ್ಕಾರದ ಬಳಿ ಮನವಿ ಮಾಡುತ್ತಲೇ ಇತ್ತು. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಾಗ್ರಿ, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಎಲ್ಲಾ ವೆಚ್ಚಗಳೂ ಶೇ 30 ರಷ್ಟು ಏರಿಕೆಯಾಗಿದೆ. ಹೀಗಾಗಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲ ವಾಗುವ ನಿಟ್ಟಿನಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಕೆಎಂಎಫ್‌ ಬೇಡಿಕೆ ಇಟ್ಟಿದೆ. ಈ ಬಾರಿಯಾದರೂ ಸರ್ಕಾರ 3 ರೂಪಾಯಿ ದರ ಹೆಚ್ಚಿಸಿದರೆ. ಅದರಲ್ಲಿ 2 ರೂಪಾಯಿ ರೈತರಿಗೆ ಮತ್ತು 1 ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ನೀಡಲಾಗು ವುದು ಎಂದು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಹಲವು ತಿಂಗಳುಗಳಿಂದ ಕೇಳಿ ಬರುತ್ತಿರುವ ಈ ಬೆಲೆ ಏರಿಕೆ ಬೇಡಿಕೆಗೆ ಈ ಬಾರಿಯಾದರೂ ಸರ್ಕಾರ ಸಹಮತ ಸೂಚಿಸುವ ಎಲ್ಲಾ ಸಾಧ್ಯತೆಗಳಿರುವುದರಿಂದ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ. ಒಂದು ವೇಳೇ ಹೆಚ್ಚಾದರೆ, ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಜನರಿಗೆ ಮತ್ತೊಂದು ಹೊರೆ ಬೀಳಲಿದ್ದು, ಅಂಗಡಿಗಳಲ್ಲಿ ಒಂದು ಲೀಟರ್ ಹಾಲಿನ ದರ 25 ರಿಂದ 28 ರೂಪಾಯಿಗೆ ಹೆಚ್ಚಾಗುವ ಸಾಧ್ಯತೆ ಇದೆ.