Saturday, 2nd November 2024

ಬೀದಿಗೆ ಬಂತು ನರಸಾಪುರ ಗ್ರಾಮ ಪಂಚಾಯಿತಿ ಜಟಾಪಟಿ

ಪಿಡಿಒ, ಉಪಾಧ್ಯಕ್ಷರ ಜಗಳವೆಂಬ ಮನರಂಜನೆ ನೋಡಲ್ ಅಧಿಕಾರಿ ಸಮ್ಮುಖದಲ್ಲಿ ಸಭೆ 

ವಿಶೇಷ ವರದಿ: ಕೆ.ಎಸ್. ಮಂಜುನಾಥ ರಾವ್

ಕೋಲಾರ: ತಾಲೂಕಿನ ನರಸಾಪುರ ಗ್ರಾಮಪಂಚಾಯತಿ ಪಿಡಿಓ ಮತ್ತು ಸದಸ್ಯರ ನಡುವಿನ ಜಟಾಪಟಿ ಬೀದಿಗೆ ಬಂದಿದ್ದು ಜನತೆಗೆ ಪುಕ್ಕಟೆ ಮನರಂಜನೆಗೆ ಕಾರಣವಾಗಿದೆ.

ನರಸಾಪುರ ಭಾಗವೆಂದರೆ ಮಾಜಿ ಸಚಿವ ಸಿ.ಬೈರೇಗೌಡರ ತವರಾಗಿದ್ದು ಪಂಚಾಯತಿಗೆ ತನ್ನದೇ ಆದ ಘನತೆಯಿದೆ. ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಮುಖಂಡರಿಗೆ ಕಸಿವಿಸಿ ಎನಿಸಿದರೂ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಹಿಸಿಕೊಂಡು ಹೋಗುತ್ತಿದ್ದಾರೆ.

ಬಿಲ್ ಪಾಸ್ ಆಗಿಲ್ಲ: ಪ್ರಸ್ತುತ ಉಪಾಧ್ಯಕ್ಷರಾಗಿರುವ ಸುಮನ್ ತಾಯಿ ಈ ಹಿಂದೆ ಪಂಚಾಯತಿ ಅಧ್ಯಕ್ಷರಾಗಿದ್ದು ನರೇಗಾ ಸೇರಿದಂತೆ ಇತರೆ ಕಾಮಗಾರಿಗಳಲ್ಲಿ 1.50 ಕೋಟಿ ರು. ಗೂ ಹೆಚ್ಚಿನ ಬಿಲ್ ಬಾಕಿ ಇದ್ದು ಇದನ್ನು ಪಾಸ್ ಮಾಡುವಂತೆ ಒತ್ತಡ ಹೇರಲಾಗಿದೆ. ಕಾಮಗಾರಿ ನಿರ್ವಹಣೆಯಲ್ಲಿ ನಿಯಮ ಪಾಲಿಸಿಲ್ಲದ ಕಾರಣ ಬಿಲ್ ಪಾಸ್ ಮಾಡಲು ಸಾಧ್ಯವಿಲ್ಲ ಎಂದು ಪಿಡಿಒ ರವಿ ಉತ್ತರಿಸಿದ್ದಾರೆ.

ಪಿಡಿಒಗೆ ಧಮಕಿ: ಇದರಿಂದ ಕುಪಿತಗೊಂಡ ಉಪಾಧ್ಯಕ್ಷ ಸುಮನ್ ಕೋಟಿ ಕೋಟಿ ಖರ್ಚು ಮಾಡಿ ಅಧಿಕಾರ ಹಿಡಿದಿರುವುದು ಏಕೆ? ನಮ್ಮ ತಾಯಿ ಕಾಲದ ಬಿಲ್ ಬಾಕಿ ಪಾಸ್ ಮಾಡದಿದ್ದರೆ ನೀವು ಟ್ರಾನ್ಸ್‌ಫರ್ ಮಾಡಿಸಿಕೊಂಡು ಹೋಗಿ ಅಥವಾ ಒಂದೆರಡು ತಿಂಗಳು ರಜೆ ಮೇಲೆ ಹೋಗಿ ನಾವು ಬೇರೆ ಪಿಡಿಒ ಹಾಕಿಸಿಕೊಂಡು ಬಿಲ್ ಮಾಡಿಕೊಳ್ಳುತ್ತೇವೆ ಎಂದು ಧಮಕಿ ಹಾಕಿದ್ದಾರೆ. ಇದಕ್ಕೆ ಜಗ್ಗದ ಕಾರಣ ಒಂದಷ್ಟು ಮಂದಿ ಸದಸ್ಯರನ್ನು ಕಟ್ಟಿಕೊಂಡು ಹೋಗಿ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಪಿಡಿಒ ವರ್ಗಾ ಮಾಡಬೇಕೆಂದು ದೂರು ನೀಡಿದ್ದಾರೆ.

ಸುಮನ್ ವಿರುದ್ಧದ ಗುಂಪಿನ ಸದಸ್ಯರು ಪಿಡಿಒ ಒಳ್ಳೆಯವರು, ನಕಲಿ ಬಿಲ್ ಪಾಸ್ ಮಾಡದೇ ಹೋಗಿದ್ದಕ್ಕೆ ಉಪಾಧ್ಯಕ್ಷರು ಸುಳ್ಳು ಆರೋಪ ಮಾಡುತ್ತಿದ್ದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಟ್ರಾನ್ಸ್‌‌ಫರ್ ಬಿಲ್‌ಕುಲ್ ಬೇಡ ಎಂದು ಉನ್ನತಾಧಿಕಾರಿಗಳಿಗೆ ಮನವಿ ಮಾಡುವ ಮೂಲಕ ಸುಮನ್‌ಗೆ ಟಾಂಗ್ ಕೊಟ್ಟಿದ್ದಾರೆ.

ಹೀಗಾಗಿ ಎರಡು ಗುಂಪುಗಳ ನಡುವೆ ಮಾರಾಮರಿ ತಪ್ಪಿಸಲು ಜಿಪಂ ಸಿಇಒ ನಾಗರಾಜ್ ಅವರು ಸಾಮಾನ್ಯ ಸಭೆಗೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡುವ ಮೂಲಕ ಜನರಲ್ ಬಾಡಿ ಸುಸೂತ್ರವಾಗಿ ನಡೆಯುವಂತೆ ಮಾಡಿದ್ದಾರೆ.

ಸುಮನ್ ಆರೋಪ: ಆರು ತಿಂಗಳಲ್ಲಿ ಪಿಡಿಒ ಲಕ್ಷಾಂತರ ರು. ಪಂಚಾಯತಿ ಹಣ ದುರುಪಯೋಗ ಮಾಡಿದ್ದಾರೆ. ಸದಸ್ಯರ ಗಮನಕ್ಕೆ ಬಾರದೆ ಹಣ ಡ್ರಾ ಮಾಡಿದ್ದು ಕಾಮಗಾರಿಗಳಿಗೆ ಬಳಕೆ ಮಾಡಿರುವ ದಾಖಲೆ ಮತ್ತು ಲೆಕ್ಕ ಕೊಡುತ್ತಿಲ್ಲವಾದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂಬುದು ಉಪಾಧ್ಯಕ್ಷ ಸುಮನ್ ಅವರ ಆಗ್ರಹಿಸಿದ್ದಾರೆ.

ಎಸಿಬಿಗೆ ದೂರು ಸಲ್ಲಿಕೆ
2017-18 ಮತ್ತು 18-19ರಲ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಅಂದಿನ ಜಿಪಂ ಸಿಇಒ ರವಿ ಅವರು ಎಸಿಬಿಗೆ ದೂರು ನೀಡಿದ್ದಾರೆ. ದೂರುಗಳ ಹಿನ್ನೆಲೆಯಲ್ಲಿ 02.12.2000 ರಂದು ಪಂಚಾಯತಿಗೆ ಭೇಟಿ ನೀಡಿ ಸಮಗ್ರ ತಪಾಸಣೆ ನಡೆಸಿದ ಸಿಇಒ ಅವರು 14 ನೇ ಹಣಕಾಸು, ವರ್ಗ 2 ಮತ್ತು ನರೇಗಾದಲ್ಲಿ ಭ್ರಷ್ಟಾಚಾರ ನಡೆದಿದ್ದು
ಮೇಲ್ನೋಟಕ್ಕೆ 31 ಲಕ್ಷ ರು. ಅವ್ಯವಹಾರ ಕಂಡು ಬಂದಿರುವುದರಿಂದಾಗಿ ತನಿಖೆ ನಡೆಸಬೇಕೆಂದು ಬೆಂಗಳೂರು ಎಸಿಬಿಯ ಅಪರ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.

***

ಉಪಾಧ್ಯಕ್ಷರ ತಾಯಿ ಶೈಲ ಅವರು ಅಧ್ಯಕ್ಷರಾಗಿದ್ದಾಗ ನಡೆದಿರುವ ಕಾಮಗಾರಿಗಳಿಗೆ ಇದೀಗ ನಾನು ಬಿಲ್ ಪಾಸ್ ಮಾಡಲು ಸಾಧ್ಯವಿಲ್ಲ. ಇಒ ಅಥವಾ ಸಿಇಒ ಅವರ ಬಳಿ ಬಿಲ್ ಪಾಸ್ ಮಾಡಿಸಿಕೊಳ್ಳಲು ನನ್ನ ಅಭ್ಯಂತರವಿಲ್ಲ, ಜಾಯಿಂಟ್ ಅಕೌಂಟ್ ‌ನಿಂದ ನಾನೊಬ್ಬನೇ ಹಣ ಡ್ರಾ ಮಾಡಲು ಆಗಲ್ಲ. ಕಾಮಗಾರಿಗಳ ಕುರಿತಂತೆ ಯಾವುದೇ ತನಿಖೆಗೆ ನಾನು ಸಿದ್ಧವಿದ್ದು ಈ ಬಗ್ಗೆೆ ಇಲಾಖೆ ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.
– ಎಚ್.ಎಂ.ರವಿ ನರಸಾಪುರ ಪಿಡಿಒ