Tuesday, 5th November 2024

ಆರ್ಥಿಕ ಸಂಕಷ್ಟ ನೀಗಿಸಿದ ನರೇಗಾ ಯೋಜನೆ

ಸ್ಥಳೀಯವಾಗಿ ಉದ್ಯೋಗ 

ಸಕಾಲಕ್ಕೆ ವೇತನ

1067 ವಲಸೆ ಕಾರ್ಮಿಕರು ನರೇಗಾದಡಿ ಕಾರ್ಯನಿರ್ವಹಣೆ

ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ

ಗ್ರಾಮೀಣ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಆಸರೆಯಾಗಿದ್ದು, ಗ್ರಾಮೀಣ ಭಾಗದ ನಿರುದ್ಯೋಗ ಸಮಸ್ಯೆಗೆ ತಿಲಾಂಜಲಿ ಇಟ್ಟಿದೆ.

ಕರೋನಾ ಎರಡನೇ ಹಾಗೂ ಮೊದಲನೇ ಅಲೆಯಿಂದಾಗಿ ದೂರದ ಮಹಾನಗರಗಳಿಂದ ಮರಳಿ ಹಳ್ಳಿಗಳಿಗೆ ಬಂದಿರುವ 1067 ವಲಸೆ ಕಾರ್ಮಿಕರು ನರೇಗಾದಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಜನರ ಮನವೊಲಿಸಿ, ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದ ರಿಂದ ಕೆಲಸ ಮಾಡುತ್ತಿರುವವರ ಸಂಖ್ಯೆ ಹೆಚ್ಚಿದೆ. 2020-21ರ ಏಪ್ರಿಲ್‌ನಲ್ಲಿ 54,939 ಮಾನವ ದಿನ ಸೃಜಿಸಲಾಗಿತ್ತು. 2020-21ರ ಏಪ್ರಿಲ್‌ನಲ್ಲಿ 1,47,466 ಮಾನವ ದಿನ ಸೃಜಿಸಲಾಗಿದೆ. ಏಪ್ರಿಲ್ ನಲ್ಲಿ 1175 ಹೊಸ ಜಾಬ್ ಕಾರ್ಡ್ ವಿತರಣೆ ಮಾಡಲಾಗಿದೆ.

ಕೈಹಿಡಿದ ದುಡಿಯೋಣ ಬಾ..: ಈ ಜಿಲ್ಲೆಯ 144 ಗ್ರಾಮ ಪಂಚಾಯಿತಿಗಳಲ್ಲೂ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಫನಾನುಭವಿಗಳ ಖಾತೆಗೆ 7.19 ಕೋಟಿ ಪಾವತಿ ಮಾಡಲಾಗಿದೆ. ಕಾರ್ಮಿಕರ ವೈಯಕ್ತಿಕ ಬ್ಯಾಂಕ್ ಖಾತೆಗೆ ವಾರಕ್ಕೊಮ್ಮೆ ಕೂಲಿ ಹಣ ಪಾವತಿಯಾಗುತ್ತಿದೆ. ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ಕಾರ್ಮಿಕರು ತೊಂದರೆ ಇಲ್ಲದೆ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಜಲಶಕ್ತಿ ಅಭಿಯಾನ ಯೋಜನೆಯಡಿಯಲ್ಲಿ ಕೃಷಿ ಹೊಂಡ, ಬದುವು, ಒಳಗಟ್ಟಿ, ಕೆರೆಗಳ ಪುನಶ್ಚೇತನ, ಇಂಗು ಗುಂಡಿಗಳ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಎಲ್ಲ ಕಾಮಗಾರಿಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನಗರ, ಪಟ್ಟಣಗಳಿಂದ ಸ್ವಗ್ರಾಮಗಳಿಗೆ ಮರಳಿದವರಿಗೆ ದುಡಿಮೆ ದೊರೆತಿದ್ದು, ಕುಟುಂಬ ನಿರ್ವಹಣೆಗಾಗಿ ಎದುರಾಗಿದ್ದ ಆರ್ಥಿಕ ಸಂಕಷ್ಟ
ನಿವಾರಣೆಯಾದಂತಾಗಿದೆ.

ಕೃಷಿ ಚಟುವಟಿಕೆಗಳಿಗೆ ಪೂರಕ
ನರೇಗಾ ಯೋಜನೆಯಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳು ಕೃಷಿ ಚಟುವಟಿಕೆಗಳಿಗೆ ಪೂರಕವೇ ಆಗಿರುತ್ತವೆ. ಮಾತ್ರವಲ್ಲದೆ, ಮಣ್ಣು, ಜಲ ಸಂರಕ್ಷಣೆಯ ಜೊತೆಗೆ ಕೃಷಿ ಸಾಗುವಳಿ ಜಮೀನಿನ ಸಮತಟವಾಗಿಸಲು ನೆರವಾಗಿವೆ. ಕೃಷಿ ಜಮೀನುಗಳಿಗೆ ಹಾಕಲಾಗುವ ಬದುವು ನಿರ್ಮಾಣದಿಂದಾಗಿ ಮಳೆ ನೀರು ಜಮೀನಿನಲ್ಲಿಯೇ ಇಂಗಲು ಸಾಧ್ಯವಾಗುತ್ತದೆ. ಅಲ್ಲದೆ, ಕೃಷಿ ಹೊಂಡಗಳ ನಿರ್ಮಾಣದಿಂದಾಗಿ ಮಳೆ ನೀರು ಭೂಮಿಯಲ್ಲಿಯೇ ಉಳಿದು, ಸದಾ ಭೂಮಿಯನ್ನು ತಂಪಾಗಿಸಲು ನೆರವಾಗುತ್ತದೆ. ಒಳಗಟ್ಟಿ ನಿರ್ಮಾಣದಿಂದಾಗಿ ಭೂಮಿ ಹದಗೊಳ್ಳಲು ನೆರವಾಗುತ್ತದೆ. ನರೇಗಾದ ಕಾಮಗಾರಿಗಳು ಕೇವಲ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಮಾತ್ರವಲ್ಲದೆ, ಕೃಷಿ ಕ್ಷೇತ್ರದ ಸಮೃದ್ಧಿ, ಪುನಶ್ಚೇತನಕ್ಕೆ ಸಹಕಾರಿಯಾಗಿದೆ.

***

ನರೇಗಾ ಯೋಜನೆಯಲ್ಲಿ ಜಿಲ್ಲೆಯಾದ್ಯಂತ ಕೈಗೊಳ್ಳಲಾದ ಕಾಮಗಾರಿಗಳು ವೈಜ್ಞಾನಿಕ ಹಾಗೂ ಪಾರದರ್ಶಕತೆಯಿಂದ ಕೂಡಿವೆ. ನರೇಗಾ ಯೋಜನೆಯಲ್ಲಿ ದುಡಿಮೆ ಮಾಡಿದವರಿಗೆ ಸಕಾಲಕ್ಕೆ ವೇತನ ಪಾವತಿಯಾಗಿದೆ. ನರೇಗಾ ಯೋಜನೆಯ ಮೂಲ ಉದ್ಧೇಶಕ್ಕೆ ಅನುಗುಣವಾಗಿ ಯೋಜನೆ ಅನುಷ್ಠಾನ ಗೊಳಿಸಲಾಗಿದೆ.
-ಡಾ.ಸುಶೀಲಾ ಜಿ ಪಂ ಇಸಿಒ ಧಾರವಾಡ