Friday, 22nd November 2024

Navaratri Jewel Trend: ದಾಂಡಿಯಾ ಎಥ್ನಿಕ್‌ವೇರ್ಸ್‌‌ಗೆ ಸಾಥ್‌ ನೀಡುವ ಟ್ರೆಂಡಿ ಆಭರಣಗಳಿವು!

Navaratri Jewel Trend

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ವರ್ಷದ ನವರಾತ್ರಿಯಲ್ಲಿ ಧರಿಸುವ (Navaratri Jewel Trend) ದಾಂಡಿಯಾ ಎಥ್ನಿಕ್‌ವೇರ್ಸ್‌ಗೆ ಸಾಥ್‌ ನೀಡಲು ನಾನಾ ಬಗೆಯ ಆಭರಣಗಳು, ಜ್ಯುವೆಲರಿ ಲೋಕಕ್ಕೆ ಲಗ್ಗೆ ಇಟ್ಟಿವೆ. ದಾಂಡಿಯಾ ನೃತ್ಯ (Dandiya Dance) ಮೂಲತಃ ಉತ್ತರ ಭಾರತದ್ದಾದರೂ ಇದೀಗ ಸ್ಥಳೀಯ ಯುವಕ-ಯುವತಿಯರು ಕೂಡ ಅಪ್ಪಿಕೊಂಡಿದ್ದಾರೆ. ಅಲ್ಲದೇ, ಉದ್ಯಾನನಗರಿಯಲ್ಲಿ, ಈ ಹಬ್ಬದ ಸೀಸನ್‌ನಲ್ಲಿ, ನಾನಾ ಪ್ರಕಾರದ ದಾಂಡಿಯಾ ಮತ್ತು ಗರ್ಬಾ ಡಾನ್ಸ್ ಕಾರ್ಯಕ್ರಮಗಳು ಹಾಗೂ ಡಿಜೆ ನೃತ್ಯದ ಕಾರ್ಯಕ್ರಮಗಳು ನಡೆಯುತ್ತಿವೆ.

ಚಿತ್ರಕೃಪೆ: ಪಿಕ್ಸೆಲ್‌

ಇದಕ್ಕೆ ಪೂರಕ ಎಂಬಂತೆ, ದಾಂಡಿಯಾ ಪ್ರೇಮಿಗಳು ಇಷ್ಟಪಡುವಂತಹ ಹೆವ್ವಿ ಡಿಸೈನ್‌ನ ಆಭರಣಗಳು ಆಗಮಿಸಿವೆ. ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ ಮಿಕ್ಸ್ ಮ್ಯಾಚ್‌ ಜಂಕ್‌ ಜ್ಯುವೆಲರಿಗಳು, ಆಕ್ಸಿಡೈಸ್ಡ್ ಹಾಗೂ ಸಿಲ್ವರ್‌ ಜ್ಯುವೆಲರಿಗಳು ಮತ್ತು ವನ್‌ ಗ್ರಾಮ್‌ ಗೋಲ್ಡ್ ಜ್ಯುವೆಲರಿಗಳು ಅತಿ ಹೆಚ್ಚು ಯುವತಿಯರನ್ನು ಸೆಳೆದಿವೆ ಎನ್ನುತ್ತಾರೆ ಆಭರಣಗಳ ಸ್ಟೈಲಿಸ್ಟ್ ರಾಘವ್‌ ಹಾಗೂ ರಾಮಾಚಾರಿ.

ಮಿಕ್ಸ್ ಮ್ಯಾಚ್‌ ಜಂಕ್‌ ಜ್ಯುವೆಲರಿ ಲೋಕ

ವೈವಿಧ್ಯಮಯ ಮೆಟಲ್‌ಗಳಿಂದ ತಯಾರಿಸಲ್ಪಟ್ಟಿರುವ, ಮಿಕ್ಸ್‌ ಮ್ಯಾಚ್‌ ಡಿಸೈನ್‌ ಹೊಂದಿರುವ ಜಂಕ್‌ ಜ್ಯುವೆಲರಿಗಳು, ಈ ಫೆಸ್ಟಿವ್‌ ಸೀಸನ್‌ನಲ್ಲಿ ಧರಿಸುವ ಯಾವುದೇ ಔಟ್‌ಫಿಟ್‌ಗಳಿಗೂ ಸುಲಭವಾಗಿ ಮ್ಯಾಚ್‌ ಆಗುತ್ತವೆ. ಬೆಲೆಯೂ ಕಡಿಮೆ. ಅಲ್ಲದೇ, ಗ್ರ್ಯಾಂಡ್‌ ಲುಕ್‌ ಕೂಡ ನೀಡುತ್ತವೆ. ಪರಿಣಾಮ, ಈ ಶೈಲಿಯ ಜ್ಯುವೆಲರಿಗಳು ಅತಿ ಹೆಚ್ಚು ಮಾನಿನಿಯರನ್ನು ಆಕರ್ಷಿಸುತ್ತಿವೆ.

ಸಾಂದರ್ಭಿಕ ಚಿತ್ರಗಳು.

ಗ್ರ್ಯಾಂಡ್‌ ಲುಕ್‌ ನೀಡುವ ಆಕ್ಸಿಡೈಸ್ಡ್‌ ಜ್ಯುವೆಲರಿಗಳು

ಬ್ಲ್ಯಾಕ್‌ & ವೈಟ್‌ ಮೆಟಲ್‌ನಲ್ಲಿ, ಊಹೆಗೂ ಮೀರಿದ ಡಿಸೈನ್‌ನಲ್ಲಿ ದೊರಕುವ ಈ ಜ್ಯುವೆಲರಿಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ದೊರೆಯುತ್ತಿವೆ. ಬಿಗ್‌ ಕಡ, ಕಡಗ, ಸೆಟ್‌ ಬ್ಯಾಂಗಲ್ಸ್‌, ಚೋಕರ್ಸ್, ಹ್ಯಾಂಗಿಂಗ್ಸ್‌, ಜುಮ್ಕಾ ಮಾತಾ ಪಟ್ಟಿ, ಮಾಂಗ್‌ ಟೀಕಾ, ಕಮರ್‌ಬಾಂದ್‌ ಹೀಗೆ ಎಲ್ಲಾ ಡಿಸೈನ್‌ನಲ್ಲೂ ದೊರೆಯುತ್ತಿವೆ.

ಸಿಲ್ವರ್‌ ಜ್ಯುವೆಲರಿಗಳು

ಆಂಟಿಕ್‌ ಡಿಸೈನ್‌ ಹೊಂದಿರುವಂತಹ ಬಗೆಬಗೆಯ ಸಿಲ್ವರ್‌ ಜ್ಯುವೆಲರಿಗಳು ಕೂಡ ಈ ಹಬ್ಬದ ಸೀಸನ್‌ನಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ.

ಈ ಸುದ್ದಿಯನ್ನೂ ಓದಿ | Navaratri Colours List 2024: ಹೀಗಿದೆ ನೋಡಿ ಈ ಬಾರಿಯ ನವರಾತ್ರಿ ಕಲರ್ಸ್ ಲಿಸ್ಟ್!

ಒನ್‌ ಗ್ರಾಮ್‌ ಗೋಲ್ಡ್ ಜ್ಯುವೆಲರಿಗಳು

ನೋಡಲು ಬಂಗಾರದಂತೆಯೇ ಕಾಣಿಸುವ ಒನ್‌ ಗ್ರಾಮ್‌ ಗೋಲ್ಡ್ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳು, ಈ ಹಬ್ಬದ ಸೀಸನ್‌ನಲ್ಲಿ ಎಂದಿನಂತೆ ಬೇಡಿಕೆ ಹೆಚ್ಚಿಸಿಕೊಂಡಿವೆ. ಧರಿಸಿದಾಗ ಗ್ರ್ಯಾಂಡ್‌ ಲುಕ್‌ ನೀಡುವ ಇವು ನೋಡಲು ಮಹಿಳೆಯರನ್ನು ಸೆಲೆಬ್ರೆಟಿಯಂತೆ ಬಿಂಬಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)