Tuesday, 15th October 2024

ನಾವಿಕ ರೆಡಿ ನಮ್ಮ ನಾವೆಯದೇ ಸಮಸ್ಯೆ

ವೈದ್ಯಕೀಯ ಸಲಕರಣೆ ಕೊಡಲು ಹಲವರು ಉತ್ಸುಕ

ಆದರೆ ಭಾರತಕ್ಕೆ ತರಲು ಬೇಕಿರುವ ಸುಂಕ, ವೆಚ್ಚ ಭರಿಸಲು ಕಷ್ಟ

ನಾವಿಕ ಸಂಸ್ಥೆಯಿಂದ 15 ಮಿಲಿಯನ್ ಡಾಲರ್ ಮೊತ್ತದ ಸಾಮಗ್ರಿ ನೀಡಲು ಬೇಕಿದ್ದ ಸರಕಾರ

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ಕರೋನಾ ಎರಡನೇ ಅಲೆ ಎದುರಿಸಲು ವೈದ್ಯಕೀಯ ಉಪಕರಣದ ಕೊರತೆ ಒಂದೆಡೆ ಎದುರಾಗಿದ್ದರೆ, ಇನ್ನೊಂದೆಡೆ ದೂರದ
ಅಮೆರಿಕದಿಂದ ತಮ್ಮ ತವೂರಿನಲ್ಲಿ ಬಂದಿರುವ ಆಪತ್ತಿಗೆ ಸಹಾಯ ಹಸ್ತ ಚಾಚಲು ಕನ್ನಡಿಗರು ಸಿದ್ಧರಿದ್ದರೂ ಸಾಧ್ಯವಾಗದ ಸ್ಥಿತಿ
ನಿರ್ಮಾಣವಾಗಿದೆ.

ಅಮೆರಿಕದಲ್ಲಿರುವ ನಾವಿಕ ಸಂಸ್ಥೆ , ಕರೋನಾ ಎರಡನೇ ಸಂಕಷ್ಟ ಸಮಯದಲ್ಲಿ ಅತ್ಯಗತ್ಯವಿರುವ 200 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ನೂರು ಕೋಟಿ ರು.ಗೂ ಹೆಚ್ಚು ಮೌಲ್ಯದ ಪಿಪಿಇ ಕಿಟ್, ಸ್ಯಾನಿಟೈಸರ್, ಥರ್ಮಾಮೀಟರ್ ಸೇರಿದಂತೆ ಇನ್ನಿತರೆ ಸಲಕರಣೆ ನೀಡಲು ಸಜ್ಜಾಗಿದ್ದಾರೆ. ಆದರೆ ಮೂಗಿಗಿಂತ ಮೂಗುತಿ ಭಾರ ಎನ್ನುವಂತೆ, ಕೊಡುಗೆ ನೀಡಿರುವ ಸಾಮಗ್ರಿ ಗಳನ್ನು ಭಾರತಕ್ಕೆ ಕಳುಹಿಸಲು ಸಾರಿಗೆ ವ್ಯವಸ್ಥೆಯೇ ಭಾರಿ ಹೆಚ್ಚಳವಾಗಿದೆ.

ವೈದ್ಯಕೀಯ ಸಲಕರಣೆಗಳನ್ನು ವಿದೇಶದಿಂದ ಕಳುಹಿಸಿದರೆ ಅದಕ್ಕೆ ಸುಂಕ ತೆರಿಗೆ ಇರುವುದಿಲ್ಲ. ಇದರೊಂದಿಗೆ ಅದನ್ನು ಭಾರತಕ್ಕೆ ರಫ್ತು ಮಾಡುವುದಕ್ಕೆ ಇಷ್ಟು ದಿನ ಇದ್ದ ಶುಲ್ಕವನ್ನು ಮನ್ನ ಮಾಡುವುದಾಗಿ ಸರಕಾರ ಹೇಳಿತ್ತು. ಆದರೆ ನಾವಿಕ ಸಂಸ್ಥೆಗೆ ರವಾನಿಸಲು ಮುಂದಾದರೂ, ಏರ್ ಇಂಡಿಯಾದ ಕಾರ್ಗೋ ವಿಮಾನದಲ್ಲಿ ಶಿಪ್ಪಿಂಗ್ ಚಾರ್ಜ್ ಎಂದೇ 25ರಿಂದ 40 ಸಾವಿರ ಡಾಲರ್ ಶುಲ್ಕ ಹೇರಿದ್ದಾರೆ.

ಈ ರೀತಿ 25ರಿಂದ 40 ಸಾವಿರ ಡಾಲರ್ ಮೊತ್ತ (ಸುಮಾರು 18ರಿಂದ 40 ಲಕ್ಷ ರು.) ಕಟ್ಟಬೇಕು. ಆದರೆ ಈಗಾಗಲೇ ಕೋವಿಡ್
ನೆರವಿಗೆಂದು ಕೋಟ್ಯಂತರ ರುಪಾಯಿ ಫಂಡ್ ರೈಸ್ ಮಾಡಿದ್ದು, ಪುನಃ ಸಾರಿಗೆ ವ್ಯವಸ್ಥೆಗೆ ಇಷ್ಟು ಕಟ್ಟಬೇಕು ಎಂದರೆ ಕಷ್ಟವಾಗು ತ್ತದೆ. ಆದ್ದರಿಂದ ಕೇಂದ್ರ ಅಥವಾ ರಾಜ್ಯ ಸರಕಾರ ನಾವು ನೀಡುತ್ತಿರುವ ವಸ್ತುಗಳನ್ನು ಉಚಿತವಾಗಿ ಭಾರತಕ್ಕೆ ರಫ್ತು ಮಾಡುವ ವ್ಯವಸ್ಥೆ ಮಾಡಬೇಕು ಎನ್ನುವ ಮಾತುಗಳು ಅಮೆರಿಕ ನಾವಿಕ ಸಂಘಟನೆ ಹೇಳಿದೆ.

ನೂರು ಕೋಟಿಗೂ ಹೆಚ್ಚು: ಅಮೆರಿಕದಲ್ಲಿರುವ ಕನ್ನಡಿಗರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಾಯದೊಂದಿಗೆ ಸುಮಾರು ನೂರು ಕೋಟಿ ರು.ಗೂ ಹೆಚ್ಚು ಮೌಲ್ಯದ ಪಿಪಿಇ ಕಿಟ್, ಸ್ಯಾನಿಟೈಸರ್ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ಕಲೆ ಹಾಕಿದ್ದಾರೆ. ಇದರೊಂದಿಗೆ ಸೇವಾ ಇಂಟರ್‌ನ್ಯಾಷನಲ್ ಸಂಘಟನೆಯೊಂದಿಗೆ ಒಟ್ಟು 200 ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಸಿದ್ಧಪಡಿಸಿದೆ. ಕೂಡಲೇ, ಸರಕಾರ ನಾವಿಕ ಸಂಸ್ಥೆಯ ಈ ಉಪಕರಣಗಳನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಬೇಕಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಫ್ಲೈಟ್ ಸಿಗುತ್ತಿಲ್ಲ: ಈಗಾಗಲೇ ಆಕ್ಸಿಜನ್ ಕಾನ್ಸಟ್ರೇಟರ್‌ಗಳನ್ನು ಭಾರತಕ್ಕೆ ಕಮರ್ಷಿಯಲ್ ವಿಮಾನದ ಮೂಲಕ ಕಳುಹಿಸಲು ಸಂಸ್ಥೆ ಸಜ್ಜಾಗಿತ್ತು. ಆದರೆ ವಿಮಾನ ಹಾರಾಟ ಸ್ಥಗಿತಗೊಂಡ ಕಾರಣ ಕಾರ್ಗೋ ವಿಮಾನದ ಮೊರೆ ಹೋಗಲಾಗಿದೆ. ಆದರೆ ಕಾರ್ಗೋ ವಿಮಾನಗಳು ಸಿಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.

ಜಿಲ್ಲೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್
ಇನ್ನು ನಾವಿಕ ಸಂಸ್ಥೆ ನೀಡುತ್ತಿರುವ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಬೆಂಗಳೂರಿಗೆ ಸೀಮಿತಗೊಳಿಸದೇ, ಇತರ ಜಿಲ್ಲೆಗಳಿಗೆ ನೀಡಲು ಚಿಂತನೆ ನಡೆಸಿದ್ದಾರೆ. ಪ್ರಮುಖವಾಗಿ ಕೊಡಗು, ಬೆಳಗಾವಿ, ಧಾರವಾಡ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ನೀಡಲು ನಿರ್ಧರಿಸಿದೆ. ಸುಮಾರು 25 ಲಕ್ಷ ರು. ವೆಚ್ಚದಲ್ಲಿ ನಾವಿಕ ಸಂಸ್ಥೆ ನೂರು ಹಾಗೂ ಸೇವಾ ಇಂಟರ್‌ನ್ಯಾಷನಲ್ ಸಂಸ್ಥೆಯ ನೂರು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ಸಿದ್ಧಗೊಳಿಸಿ, ಈಗಾಗಲೇ ತಯಾರಿ ಪೂರ್ಣಗೊಳಿಸಿದೆ. ಆದರೆ ಅದನ್ನು ಕರ್ನಾಟಕಕ್ಕೆ ಕಳುಹಿಸುವುದು ಹೇಗೆ ಎನ್ನುವುದೇ ಇದೀಗ ನಮ್ಮ ಮುಂದಿರುವ ಪ್ರಶ್ನೆ ಎಂದು ನಾವಿಕ ಸಂಘದ ಅಧ್ಯಕ್ಷ ವಲ್ಲೀಶ ಶಾಸಿ ಹೇಳಿದ್ದಾರೆ. ಇನ್ನು ನಾವು ನೀಡುತ್ತಿರುವ ಸಾಮಗ್ರಿಗಳನ್ನು ನೇರವಾಗಿ ಕೇಂದ್ರ ಸರಕಾರಕ್ಕೆ ಕೊಟ್ಟರೆ ಕರ್ನಾಟಕಕ್ಕೆ ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಇತರ ದಾರಿಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ.

***

ದೂರದ ಅಮೆರಿಕದಲ್ಲಿ ಕೂತು ಭಾರತದಲ್ಲಿ ಆಗುತ್ತಿರುವ ಕರೋನಾ ಆಘಾತವನ್ನು ಕೇಳುವುದಕ್ಕೆ ಹಿಂಸೆಯಾಗುತ್ತದೆ. ಆದ್ದರಿಂದ ನಮ್ಮಿಂದ ಕನಿಷ್ಠ ನಾಲ್ಕು ಮಂದಿ ಜೀವವಾದರೂ ಉಳಿಯಲು ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಸರಕಾರಗಳು ಕೂಡಲೇ. ಕರೋನಾ ನಿಯಂತ್ರಣ ಸಂಬಂಧಿಸಿದ ಉಪಕರಣಗಳನ್ನು ಪಡೆಯಲು ವ್ಯವಸ್ಥೆ ಮಾಡಿದರೆ ಉತ್ತಮ.ಇಲ್ಲದಿದ್ದರೆ ಅದನ್ನು ರವಾನಿಸಲು ಬೇಕಿರುವ ಮೊತ್ತಕ್ಕೂ ದಾನಿಗಳನ್ನು ಹುಡುಕುತ್ತೇವೆ.
– ವಲ್ಲೀಶ ಶಾಸ, ನಾವಿಕ ಸಂಘದ ಅಧ್ಯಕ್ಷ