Sunday, 29th September 2024

Navratri 2024: ನವರಾತ್ರಿ ವೇಳೆ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ನಾಡಿನ ನವಶಕ್ತಿ ಪೀಠಗಳಿವು

Navratri 2024

ದೀರ್ಘ ರಜೆಯಲ್ಲಿ ಏನು ಮಾಡಬಹುದು ಎಂಬ ಚಿಂತೆ ಪ್ರಯಾಣದ ಉತ್ಸಾಹಿಗಳಿಗೆ ಇರುವುದೇ ಇಲ್ಲ. ರಜೆ ಬರುವ ಎಷ್ಟೋ ಮೊದಲೇ ಅವರದ್ದು ಏನಾದರೊಂದು ಯೋಜನೆ ಸಿದ್ಧವಾಗಿರುತ್ತದೆ. ಆದರೆ ಪ್ರಯಾಣಕ್ಕೆ ಇಷ್ಟೊಂದು ಉತ್ಸಾಹ ಎಲ್ಲರಿಗೂ ಇರುವುದಿಲ್ಲ, ಇರಬೇಕೆಂದಿಲ್ಲ. ನವರಾತ್ರಿಯ (Navratri 2024)ದೀರ್ಘ ರಜೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುವವರು, ದಿನಕ್ಕೊಂದು ಬಣ್ಣದ ಬಟ್ಟೆಗಳನ್ನು ಧರಿಸಿ ಫೋಟೊ ತೆಗೆಯುವವರು, ಉಪವಾಸ ಮಾಡಿ ಬಗೆಬಗೆಯ ಪ್ರಸಾದಗಳನ್ನೇ ತಿಂದುಕೊಂಡಿರುವವರು, ಹೀಗೆ ಹಲವು ಖಯಾಲಿಯ ಜನಗಳಿದ್ದಾರೆ. ಅದು ಅವರವರಿಷ್ಟ.

ಆದರೆ ಕರ್ನಾಟಕದ ಶಕ್ತಿ ಪೀಠಗಳಿಗೆ ಎಂದಾದರೂ ಭೇಟಿ ನೀಡಬೇಕೆಂಬ ಮನಸ್ಸಿದ್ದರೆ, ದಸರೆಗಿಂತ ಒಳ್ಳೆಯ ಸಮಯ ಇನ್ನೊಂದಿಲ್ಲ.

ನವರಾತ್ರಿಯ ದಿನಗಳಲ್ಲಿ ದೇವಿಯ ಸನ್ನಿಧಾನಗಳು ವಿಶೇಷವಾಗಿ ಉಪಾಸನೆಗೊಂಡು, ಸರ್ವಾಲಂಕಾರದಿಂದ ರಾರಾಜಿಸುತ್ತವೆ ಎಂಬುದು ಹೊಸದೇನಲ್ಲ. ಇಂಥ ಸಂದರ್ಭದಲ್ಲಿ ನಮ್ಮ ರಾಜ್ಯದ ನವಶಕ್ತಿ ಪೀಠಗಳಿಗೆ ಭೇಟಿ ನೀಡಿದರೆ ಮೈಗೂಡುವ ಹುಮ್ಮಸ್ಸು, ಆತ್ಮ ಸಂತೋಷ ಬೇರೆಯದ್ದೇ ರೀತಿಯದ್ದು. ಇದೇ ನೆವದಲ್ಲಿ, ದಸರೆಯಲ್ಲಿ ಎಲ್ಲರೂ ಭೇಟಿ ನೀಡಬಹುದಾದ ಕರ್ನಾಟಕದ ನವ ಶಕ್ತಿ ಪೀಠಗಳಿಗೆ ಒಂದು ಸುತ್ತು ಹಾಕಿ ಬಂದರೆ ಹೇಗೆ? ಬನ್ನಿ, ಮೊದಲು ಶೃಂಗೇರಿಯ ಶಾರದೆಯ ಸನ್ನಿಧಾನದಿಂದ ಆರಂಭಿಸೋಣ.

Navratri 2024

1. ಶೃಂಗೇರಿ ಶಾರದೆ:

೮ನೇ ಶತಮಾನದಲ್ಲಿ ಶಂಕರಾಚಾರ್ಯರು ಒಮ್ಮೆ ತುಂಗೆಯ ತಟಕ್ಕೆ ಬಂದಾಗ, ಚೋದ್ಯವೊಂದು ಅವರ ಕಣ್ಣಿಗೆ ಬಿತ್ತು. ತೀವ್ರ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದ ಕಪ್ಪೆಯೊಂದಕ್ಕೆ ಹಾವೊಂದು ಹೆಡೆ ಬಿಚ್ಚಿ ನೆರಳು ನೀಡುತ್ತಿತ್ತು. ಕಡುವೈರಿಗಳೂ ಹಗೆತನ ಮರೆಯುವಂಥ ಈ ಜಾಗಕ್ಕೆ ವಿಶೇಷ ಶಕ್ತಿಯಿದೆ ಎಂಬುದನ್ನು ಮನಗೊಂಡ ಶಂಕರರು, ಶಾರದಾ ಪೀಠವನ್ನಲ್ಲಿ ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ಶಾರದೆ ನಂಬಿದವರನ್ನು ಪೊರೆಯುತ್ತಲೇ ಬಂದಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಈ ಶಕ್ತಿಪೀಠಕ್ಕೆ ಈವರೆಗೆ ಹೋಗದಿದ್ದರೆ, ಒಮ್ಮೆ ಹೋಗಿ ಬನ್ನಿ. ಈಗಾಗಲೇ ಹೋಗಿದ್ದರೂ ಅಮ್ಮನ ಸಮ್ಮುಖಕ್ಕೆ ಇನ್ನೊಮ್ಮೆ ಹೋಗಬಹುದು.

Navratri 2024

2. ಕೊಲ್ಲೂರು ಮೂಕಾಂಬಿಕೆ:

ಇದೂ ಶಂಕರಾಚಾರ್ಯರಿಂದಲೇ ಸ್ಥಿತವಾದ ಶಕ್ತಿ ಪೀಠ. ಈ ದೇವಿಗೊಂದು ಕಥೆಯಿದೆ. ಕೋಲಾ ಎಂಬ ಮಹರ್ಷಿಯನ್ನು ಕೊಂದ ಮೂಕಾಸುರನೆಂಬ ರಕ್ಕಸನನ್ನು ಜಗನ್ಮಾತೆ ಸಂಹರಿಸಿದಳೆನ್ನುತ್ತದೆ ಪುರಾಣ. ಮೂಕಾಸುರನನ್ನು ಕೊಂದವಳು ಮೂಕಾಂಬಿಕೆ ಎನಿಸಿದರೆ, ಕೋಲಾ ಮಹರ್ಷಿಯ ತಾಣ ಕೊಲ್ಲೂರು ಎನಿಸಿತು. ಉಡುಪಿ ಜಿಲ್ಲೆಯ ಸೌಪರ್ಣಿಕಾ ನದಿಯ ದಂಡೆಯ ಮೇಲೆ, ಹಸಿರಾದ ಕೊಡಚಾದ್ರಿ ಬೆಟ್ಟಗಳ ರಮಣೀಯ ಪರಿಸರದಲ್ಲಿರುವ ಈ ಶಕ್ತಿ ಸ್ಥಳಕ್ಕೆ ಭೇಟಿ ನೀಡಲು ನವರಾತ್ರಿಯ ದಿನಗಳು ಒಳ್ಳೆಯ ಕಾಲ.

Navratri 2024

3. ಮೈಸೂರಿನ ಚಾಮುಂಡೇಶ್ವರಿ:

ಮಹಿಷಾಸುರ ಮರ್ಧಿನಿ ನೆಲೆಸಿದ ಕ್ಷೇತ್ರವಿದು. ಈ ಬೆಟ್ಟದ ತಾಯಿಯ ಬಗ್ಗೆ ಜನಪದೀಯವಾಗಿ ಹಲವು ರೀತಿಯ ಕಥೆಗಳಿವೆ. ಮೈಸೂರು ಅರಸರ ಕುಲದೇವತೆ ಈಕೆ. ದೇವಿಯ ಮೂಲ ದೇವಾಲಯವನ್ನು ೧೨ನೇ ಶತಮಾನದಲ್ಲಿ ಹೊಯ್ಸಳ ದೊರೆಗಳು ಕಟ್ಟಿಸಿದರು. ನಂತರ ೧೭ನೇ ಶತಮಾನದಲ್ಲಿ ವಿಜಯನಗರ ದೊರೆಗಳ ಕಾಲದಲ್ಲಿ ದೇವಳಕ್ಕೆ ಹೊಸ ರೂಪು ದೊರೆಯಿತು ಎನ್ನಲಾಗುತ್ತದೆ. ನವರಾತ್ರಿಯ ಅಷ್ಟೂ ದಿನಗಳಂದು ನವನವೀನ ಅಲಂಕಾರಗಳಿಂದ ದೇವಿ ಕಂಗೊಳಿಸುತ್ತಾಳೆ.

Navratri 2024

4. ಸವದತ್ತಿ ಎಲ್ಲಮ್ಮ:

ಬೆಳಗಾವಿಯಿಂದ ೧೧೨ ಕಿ.ಮೀ. ದೂರದಲ್ಲಿರುವ ರೇಣುಕಾ ದೇವಿಯ ದೇವಾಲಯವಿದು. ರಾಮಗಿರಿ ಪರ್ವತಶ್ರೇಣಿಯ ಎಲ್ಲಮ್ಮ ಗುಡ್ಡದ ಮೇಲೆ ಈ ಪೀಠ ಸ್ಥಿತವಾಗಿದೆ. ಫಲವಂತಿಕೆಯನ್ನು ದಯಪಾಲಿಸುವ ದೇವಿಯೆಂದೇ ನಂಬಿದವರು ಆಕೆಯನ್ನು ಪೂಜಿಸುತ್ತಾರೆ. ಚಾಲುಕ್ಯರ ಅವಧಿಯ ಅಂತ್ಯದಲ್ಲಿ ಅಥವಾ ರಾಷ್ಟ್ರಕೂಟದ ಕಾಲದ ಆರಂಭದಲ್ಲಿ ಈ ದೇಗುಲದ ಸ್ಥಾಪನೆ ಆಗಿರಬಹುದು ಎನ್ನಲಾಗುತ್ತದೆ.

Navratri 2024

5. ಸಿಗಂದೂರು ಚೌಡೇಶ್ವರಿ:

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪ್ರಸಿದ್ಧ ಶಕ್ತಿ ಸ್ಥಳವಿದು. ಸಿಗಂದೂರೇಶ್ವರಿ ಎಂದೂ ಕರೆಯಲಾಗುವ ಚೌಡಮ್ಮನ ಭಕ್ತರಲ್ಲಿ ಒಂದು ವಿಶಿಷ್ಟವಾದ ನಂಬಿಕೆಯಿದೆ. ಕಳೆದು ಹೋದದ್ದು ಮರಳಿ ಪಡೆಯುವುದಕ್ಕೆ, ಕಳ್ಳಸುಳ್ಳರ ಭಯ ನಿವಾರಣೆಗೆ ಈ ಸನ್ನಿಧಾನದಲ್ಲಿ ಹರಕೆ ಕಟ್ಟಿಕೊಳ್ಳಲಾಗುತ್ತದೆ. ಕಳ್ಳರನ್ನು ದೇವಿ ಕ್ರೂರವಾಗಿ ಶಿಕ್ಷಿಸಿ, ಭಕ್ತರನ್ನು ರಕ್ಷಿಸುತ್ತಾಳೆ ಎಂಬ ಪ್ರತೀತಿ ವ್ಯಾಪಕವಾಗಿದೆ.

Navratri 2024

6. ಹೊರನಾಡು ಅನ್ನಪೂರ್ಣೇಶ್ವರಿ:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಕಣಿವೆಯ ನಡುವೆ ಭದ್ರಾ ನದಿಯ ದಂಡೆಯ ಮೇಲಿನ ಈ ಶಕ್ತಿ ಪೀಠವನ್ನು ೮ನೇ ಶತಮಾನದಲ್ಲಿ ಸ್ಥಾಪಿಸಲಾಗಿದೆ. ಅಗಸ್ತ್ಯ ಮುನಿಗಳಿಂದ ಸ್ಥಿತವಾದ ಪೀಠವೆನ್ನುತ್ತದೆ ಪುರಾಣ. ಪರಿಪೂರ್ಣ ಆಹಾರ ನೀಡುವ ತಾಯಿಯೆಂದು ಪೂಜಿಸಲಾಗುವ ಈ ದೇವಿಯ ಸೌಮ್ಯ ಮುಖದ ಮೂರ್ತಿ ನಿಂತಿರುವ ಭಂಗಿಯಲ್ಲಿದೆ.

Navratri 2024

7. ಕಟೀಲು ದುರ್ಗಾಪರಮೇಶ್ವರಿ:

ಸಂಗೀತ, ನೃತ್ಯ ಮತ್ತು ಯಕ್ಷಗಾನದಂಥ ಲಲಿತ ಕಲಾಸೇವೆಗಳಿಂದ ಸಂತೃಪ್ತಗೊಳ್ಳುವ ಕಲಾಮಾತೆಯಿವಳು. ನಂಬಿದ ಭಕ್ತರು ಅದಕ್ಕಾಗಿಯೇ ಕಲಾಸೇವೆಗಳನ್ನು ನಡೆಸಿಕೊಡುವ ಹರಕೆಯನ್ನು ಹೊರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ನಂದಿನಿ ನದಿಯ ದಂಡೆಯ ಮೇಲೆ ಈ ತಾಯಿ ನೆಲೆಸಿದ್ದಾಳೆ. ಅರುಣಾಸುರನನ್ನು ಕೊಲ್ಲುವುದಕ್ಕಾಗಿ ದೇವಿಯು ಭ್ರಾಮರೀ ರೂಪವನ್ನು ತಾಳಿದ ಕಥೆಯು ಕಟೀಲಿನ ಸ್ಥಳಪುರಾಣದಲ್ಲಿದೆ.

Navratri 2024

8. ಬಾದಾಮಿ ಬನಶಂಕರಿ:

ಬಾಗಲಕೋಟದ ಬಾದಾಮಿಯಲ್ಲಿರುವ ಬನಶಂಕರಿ ಅಮ್ಮನ ಸನ್ನಿಧಿಯೆಂದರೆ ಹಲವು ತೀರ್ಥಗಳ ಸಂಗಮ. ಹಾಗಾಗಿ ಪಾಪನಾಶಿನಿ ಎಂದು ಈ ಬನದಮ್ಮನನ್ನು ಕರೆಯಲಾಗುತ್ತದೆ. ಪಾಪ ನಿವಾರಣೆಗಾಗಿಯೇ ಭಕ್ತರ ದಂಡು ಇತ್ತ ದೌಡಾಯಿಸುತ್ತದೆ. ಕ್ರಿ.ಶ. ಆರುನೂರರಲ್ಲಿ ಈ ಸನ್ನಿಧಿ ಸ್ಥಾಪನೆಯಾಗಿದ್ದು, ಬಾದಾಮಿ ಚಾಲುಕ್ಯರ ಆರಾಧ್ಯದೈವ ಈಕೆ.

Navratri 2024

9. ಶಿರಸಿಯ ಮಾರಿಕಾಂಬೆ:

ಇಲ್ಲಿಯ ಸ್ಥಳ ಪುರಾಣ ಕುತೂಹಲಕರವಾಗಿದೆ. ಶಿರಸಿಗೆ ಸಮೀಪದ ಹಾನಗಲ್ಲನ್ನು ಹಿಂದೆ ವಿರಾಟನಗರ ಎಂದು ಕರೆಯಲಾಗುತ್ತಿತ್ತು.  ಅಲ್ಲಿನ ಶಕ್ತಿ ಪೀಠದ ಜಾತ್ರೆಯ ನಂತರ, ದೇವಿಯ ವಿಗ್ರಹವನ್ನು ಆಭರಣಗಳ ಜೊತೆಗೆ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಅದನ್ನು ಕದ್ದ ಕಳ್ಳರು ಸಿರ್ಸಿಗೆ ತಂದು, ಆಭರಣಗಳನ್ನು ತೆಗೆದುಕೊಂಡು ದೇವಿಯ ವಿಗ್ರಹವನ್ನು ಕೆರೆಗೆ ಎಸೆದರು. ಆ ಕೆರೆಯನ್ನು ದೇವಿ ಕೆರೆ ಎಂದು ಕರೆಯಲಾಗುತ್ತದೆ. ನಂತರ ಭಕ್ತನೊಬ್ಬರ ಕನಸಿನಲ್ಲಿ ಕಾಣಿಸಿಕೊಂಡ ದೇವಿ, ತಾನು ಕೆರೆಯಲ್ಲಿರುವುದಾಗಿ ತಿಳಿಸಿದಳು. ಕೆರೆಯಲ್ಲಿ ತೇಲುತ್ತಿದ್ದ ಪೆಟ್ಟಿಗೆಯನ್ನು ದಡಕ್ಕೆ ದಂತು ತೆರೆದಾಗ, ಅದರಲ್ಲಿ ದೇವಿಯ ಮೂರ್ತಿ ಇದ್ದಿತ್ತು. ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.