Thursday, 14th November 2024

Naxal Activity: ಚಿಕ್ಕಮಗಳೂರು, ಕಾರ್ಕಳದಲ್ಲಿ ಮತ್ತೆ ನಕ್ಸಲರ ಸದ್ದು, ಕೂಂಬಿಂಗ್‌ ಚುರುಕು

naxal task force

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru) ಹಾಗೂ ಉಡುಪಿ (udupi news) ಜಿಲ್ಲೆಯ ಕಾರ್ಕಳದ (Karkala) ಅರಣ್ಯ ಪ್ರದೇಶಗಳಲ್ಲಿ ನಕ್ಸಲರು (Naxal Activity) ಮತ್ತೆ ಚುರುಕಾಗಿದ್ದಾರೆ. ನಕ್ಸಲ್‌ ಚಳವಳಿಯ ಮುಂಡಗಾರು ಲತಾ, ಜಯಣ್ಣ ಅವರು ಕೊಪ್ಪ ತಾಲ್ಲೂಕಿನ ಕಡೇಗುಂದಿ ಗ್ರಾಮದ ಒಂಟಿ ಮನೆಗೆ ಭೇಟಿ ನೀಡಿರುವುದನ್ನು ಖಚಿತಪಡಿಸಿರುವ ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್‌) ಅಧಿಕಾರಿಗಳು, ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕಿನ ಗಡಿಯಲ್ಲಿ ಇರುವ ಸುಬ್ಬಗೌಡ ಮನೆಗೆ ಲತಾ, ಜಯಣ್ಣ ಮತ್ತು ಇನ್ನಿಬ್ಬರು ಬಂದಿರುವ ಮಾಹಿತಿ ಮೇರೆಗೆ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ನಾಲ್ವರೂ ಮನೆಯಿಂದ ಓಡಿ ಹೋಗಿ ಕಾಡಿನೊಳಗೆ ಪರಾರಿಯಾಗಿದ್ದಾರೆ.

ಮನೆಯಲ್ಲಿ ಮೂರು ಬಂದೂಕು, ಮದ್ದುಗುಂಡು, ಮಾಂಸ ಕೂಡ ಪತ್ತೆಯಾಗಿದೆ. ಕ್ಯಾಲೆಂಡರ್ ಒಂದಕ್ಕೆ ‘ನಕ್ಷತ್ರ’ ಮಾದರಿಯ ಗುರುತನ್ನು ಮಾಡಲಾಗಿದ್ದು, ಅದನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕ್ಸಲರಿಗೆ ಆಶ್ರಯ ನೀಡಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಲತಾ ಸೇರಿ ನಾಲ್ವರು ನಕ್ಸಲರು ಮನೆಗೆ ಬಂದಿರುವುದು ಖಚಿತವಾಗಿದೆ. ಈ ಸಂಬಂಧ ಜಯಪುರ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ(ಯುಎಪಿಎ) ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಕ್ಸಲರ ಶೋಧಕ್ಕೆ ಎನ್‌ಎನ್‌ಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮತ್ತು ನಕ್ಸಲ್‌ ನಿಗ್ರಹ ಪಡೆಯ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಎರಡು ದಿನಗಳಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ಮುನ್ನಡೆಸಿದರು.

ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ(ಐಎಸ್‌ಡಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಂತಿ ಮತ್ತು ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಸುಬ್ಬಗೌಡ ಮನೆಯಲ್ಲಿ ತಪಾಸಣೆ ನಡೆಸಿದರು.

ಕಾರ್ಕಳ ವಲಯದಲ್ಲೂ ಕೂಂಬಿಂಗ್‌ ಚುರುಕುಗೊಳಿಸಲಾಗಿದೆ. ಇಲ್ಲಿ ನಕ್ಸಲ್‌ ನಿಗ್ರಹ ಪಡೆಯ ಕಚೇರಿಯಿದ್ದು, ಈದು ಮುಂತಾದ ಕಡೆಗಳಲ್ಲಿ ನಕ್ಸಲೀಯರು ಚಟುವಟಿಕೆ ಪುನರಾರಂಭಿಸಿದ್ದಾರೆ ಎಂದು ಹೇಳಲಾಗಿದೆ. ಈದು ವಲಯದಲ್ಲಿ ಎಎನ್‌ಎಫ್‌ ಬೀಡುಬಿಟ್ಟಿದೆ.

ಇದನ್ನೂ ಓದಿ: Naxal activity: ಕಾಫಿನಾಡಿನಲ್ಲಿ ಮತ್ತೆ ನಕ್ಸಲ್‌ ಚಟುವಟಿಕೆ; ಮುಂಡಗಾರು ಲತಾ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌