Sunday, 15th December 2024

ಕರೋನಾ ಕಳವಳ: ಲಸಿಕೆ ಪಡೆಯಲು ಮೀನಮೇಷ

ಜಿಲ್ಲಾಡಳಿತದ ಮನವಿಗೂ ಸಮರ್ಪಕವಾಗಿ ಸ್ಪಂದಿಸದ ಮಂದಿ

ವಿಶೇಷ ವರದಿ: ಕೆ.ಜೆ.ಲೋಕೇಶ್‌ ಬಾಬು

ಮೈಸೂರು: ಕರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಬೆನ್ನಲ್ಲೇ ಅದನ್ನು ಕಟ್ಟಿ ಹಾಕುವ ಪ್ರಯತ್ನವೂ
ಮೈಸೂರು ಜಿಲ್ಲಾದ್ಯಂತ ತೀವ್ರಗೊಂಡಿದೆ.

ದುರಾದೃಷ್ಟವಶಾತ್ ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಒಂದು ನಿರ್ದಿಷ್ಟ ಸಮುದಾಯವೊಂದರ ಮಂದಿ ಮಾತ್ರ ಸಮರ್ಪಕವಾಗಿ ಸ್ಪಂದಿಸದಿರುವುದು ಅಂಕಿ ಅಂಶಗಳಲ್ಲಿ ವ್ಯಕ್ತವಾಗಿದೆ. ಇದು ಸಾಂಸ್ಕೃತಿಕ ನಗರಿಯಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.
ನಗರದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಮುಸ್ಲಿಂ ಸಮುದಾಯದ ಬಾಹುಳ್ಯ ಹೊಂದಿದ್ದು, ಸದರಿ ಸಮುದಾಯದಲ್ಲಿ 45 ವರ್ಷ ಮೇಲ್ಪಟ್ಟವರು ಅಂದಾಜು 70ರಿಂದ 80 ಸಾವಿರ ಮಂದಿ ಇದ್ದಾರೆ.

ಆದರೆ, ಈವರೆಗೆ ಕರೋನಾ ಲಸಿಕೆ ಪಡೆದವರು ಕೆಲವೇ ಸಾವಿರ ಮಂದಿ ಮಾತ್ರ. ಇದು ಜಿಲ್ಲಾಡಳಿತದ ನೆಮ್ಮದಿಗೆಡಿಸಿದೆ. ಈ ಎಲ್ಲರಿಗೂ ಲಸಿಕೆ ಹಾಕಲಿಕ್ಕಾಗಿ ಜಿಲ್ಲಾಡಳಿತ ಸ್ಥಳೀಯ ಮುಸ್ಲಿಂ ಮುಖಂಡರು, ಧಾರ್ಮಿಕ ನಾಯಕರೊಟ್ಟಿಗೆ ಮೇಲಿಂದ ಮೇಲೆ ಹಲವು ಬಾರಿ ಸಭೆ ನಡೆಸಿ ಜಾಗೃತಿ ಮೂಡಿಸಿದೆಯಾದರೂ ಈವರೆಗೂ ನಿರೀಕ್ಷಿತ ಫಲ ನೀಡಿಲ್ಲ.

ಈ ಬಗ್ಗೆ ಖುದ್ದು ಜಿಲ್ಲಾಧಿಕಾರಿಗಳೇ ಅಖಾಡಕ್ಕಿಳಿದು, ನಗರ ಪಾಲಿಕೆ ಆಯುಕ್ತರು, ಉಪ ಮೇಯರ್ ಅವರೊಂದಿಗೆ ಸಭೆಯಲ್ಲಿ ಭಾಗಿಯಾಗಿ ಮನವಿ ಮಾಡಿ, ಲಸಿಕೆ ಬಗ್ಗೆೆ ತಿಳಿವಳಿಕೆ ಮೂಡಿಸಿದರೂ, ಲಸಿಕೆ ತೆಗೆದುಕೊಳ್ಳಲು ಆ ಸಮುದಾಯದಿಂದ ಹೆಚ್ಚಿನ
ಮಂದಿ ಒಲವು ತೋರದಿರುವುದು ಕಂಡುಬಂದಿದೆ.

ಜಿಲ್ಲಾ ಆರೋಗ್ಯ ಇಲಾಖೆಯ ಅಂದಾಜಿನಂತೆ ಮೈಸೂರು ಜಿಲ್ಲೆೆಯಾದ್ಯಂತ 45 ವರ್ಷ ಮೇಲ್ಪಟ್ಟವರ ಸಂಖ್ಯೆೆ 8.48 ಲಕ್ಷ ಇದೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ಏ.18ರ ವೇಳೆಗೆ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಮೊದಲ ಹಾಗೂ ಎರಡನೇ ಲಸಿಕೆಯನ್ನು ನೀಡಲಾಗಿದೆ.

ಮಾರ್ಚ್ ತಿಂಗಳಲ್ಲಿ 1,07,421 ಜನರಿಗೆ ಕೋವಿಡ್ ಲಸಿಕೆ ಹಾಕಿದ್ದರೆ, ಏ.1ರಿಂದ 17ರವರೆಗೂ 2,92,745 ಲಸಿಕೆಯನ್ನು ಹಾಕಲಾಗಿದೆ. ಇದಕ್ಕೂ ಮುನ್ನ 1 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಲಸಿಕೆ ಪಡೆದವರ ಸಂಖ್ಯೆಯಲ್ಲಿ ಮೈಸೂರು ನಗರ
ನಿವಾಸಿಗಳು ಮುಂಚೂಣಿಯಲ್ಲಿದ್ದರೆ, ಎಚ್ .ಡಿ.ಕೋಟೆ ತಾಲ್ಲೂಕಿನ ಜನರು ಕೊನೆಯ ಸ್ಥಾನದಲ್ಲಿದ್ದಾರೆ ಎಂಬುದನ್ನು ಜಿಲ್ಲಾಡಳಿತದಲ್ಲಿನ ಅಂಕಿಅಂಶಗಳು ದೃಢೀಕರಿಸುತ್ತವೆ.

ಸರ್ಕಾರ ನೀಡಿದ ಗುರಿಯಲ್ಲಿ ಶೇ.50ರಷ್ಟನ್ನು ಸಾಧಿಸಲಾಗಿದೆ. ದಿನದ ಗುರಿ ಶೇ 100 ದಾಟುತ್ತಿದೆ. ಜಿಲ್ಲಾಡಳಿತದ ಸಾರಥ್ಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ಕಂದಾಯ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳು ಪೂರಕವಾಗಿ ಸ್ಪಂದಿಸುತ್ತಿರುವುದು ಲಸಿಕೆ ಅಭಿಯಾನದ ಯಶಸ್ಸಿಗೆ ಕಾರಣವಾಗಿದೆ.

ಅಭಿಯಾನದ ಯಶಸ್ಸಿಗಾಗಿ ಮತ್ತೆ ಐದು ಲಕ್ಷ ಡೋಸ್ ಲಸಿಕೆ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, ಇದು ಮತ್ತಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಅಭಿಯಾನ ಯಶಸ್ವಿಗಾಗಿ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಶ್ರಮಿಸುತ್ತಿದ್ದು, 45 ವರ್ಷ ಮೇಲ್ಪಟ್ಟವರನ್ನು ಲಸಿಕಾ ಕೇಂದ್ರಗಳಿಗೆ ಕರೆ ತರುತ್ತಿದ್ದಾರೆ.

ಆಸ್ಪತ್ರೆಗಳು ಸನ್ನದ್ಧ: ಕರೋನಾ ಸೋಂಕು ತೀವ್ರಗತಿಯಲ್ಲಿ ಉಲ್ಭಣಗೊಂಡು ಪರಿಸ್ಥಿತಿ ಕೈಮೀರುವ ಹಂತ ತಲುಪದಿರುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಎಲ್ಲ ಬಗೆಯ ಬಿಗಿನಿಲುವು ತೆಗದುಕೊಂಡಿದೆ. ಆದರೂ, ಒಂದೊಮ್ಮೆ ಅಂತಹ ಸನ್ನಿವೇಶ ಸೃಷ್ಟಿಯಾದಲ್ಲಿ ಅದನ್ನು ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆ ಸೇರಿದಂತೆ ಸೂಚಿತ ಆಸ್ಪತ್ರೆಗಳಲ್ಲಿ ಕರೋನಾ ಸೋಂಕಿತರಿಗೆಂದೇ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿರಿಸಿ, ಇಂತಿಷ್ಟು ಹಾಸಿಗೆಗಳನ್ನು ಕೊಡಲೇಬೇಕೆಂಬ ಶರತ್ತು ವಿಧಿಸಲಾಗಿದೆ.

ಸಾವಿನಲ್ಲೂ ಹೆಚ್ಚಳ: ಕರೋನಾ ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆಯಲ್ಲೂ ದಿನೇ ದಿನೇ ಹೆಚ್ಚಳವಾಗುತ್ತಿದೆ. 2021ರ ಏಪ್ರಿಲ್ 1ರಿಂದ 19ರವರೆಗೆ ಮೈಸೂರು ಜಿಲ್ಲೆಯಲ್ಲಿ ಕರೋನಾ ಸೋಂಕಿನಿಂದ ಒಟ್ಟು 59 ಮಂದಿ ಸಾವಿಗೀಡಾಗಿದ್ದು,
ಇದು ಕರೋನಾ ಸೋಂಕಿನ ತೀವ್ರತೆಯನ್ನು ಸಾರಿ ಹೇಳುತ್ತಿದೆ.

ಮುಂಚೂಣಿಯಲ್ಲಿ ಮೈಸೂರು
ಕರೋನಾ ಸೋಂಕು ಹರಡುವಿಕೆಯಲ್ಲಿ ರಾಜ್ಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. ವರ್ಷದ ಹಿಂದೆ ಆರಂಭವಾದ ಕರೋನಾ ಸೋಂಕು ಅತಿ ವೇಗವಾಗಿ ವ್ಯಾಪಿಸಿದ್ದ ನಗರಗಳ ಪಟ್ಟಿಯಲ್ಲಿ ಮೈಸೂರು ಕೂಡ ಸ್ಥಾನ ಪಡೆದುಕೊಂಡಿತ್ತಾದರೂ, ಎಲ್ಲ ಕಠಿಣ ನಿಯಮಗಳ ಜಾರಿ ಬಳಿಕ ಅದರ ಸಂಖ್ಯೆ ದಿನಕ್ಕೆ 15ಕ್ಕೆ ಇಳಿದಿತ್ತು. ಆದರೆ, ಇದೀಗ ಕಳೆದ ಒಂದು ವಾರದಿಂದೀಚೆಗೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಸೋಂಕು ಹರಡತೊಡ ಗಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಆದರೂ, 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕುವಲ್ಲಿ ಮೈಸೂರು ಜಿಲ್ಲೆ ಮುಂಚೂಣಿಯಲ್ಲಿದೆ.

***

ಶಾಸಕ ತನ್ವೀರ್ ಸೇಠ್ ಸೇರಿದಂತೆ ಸ್ಥಳೀಯ ರಾಜಕೀಯ ಪ್ರತಿನಿಧಿಗಳು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ
ಮೂಡಿಸಿದ್ದಾರೆ. ಏನೆಲ್ಲಾ ಕಸರತ್ತು ನಡೆಸಿದರೂ, ಲಸಿಕಾ ಅಭಿಯಾನದ ಪ್ರಗತಿ ಇಲ್ಲಿ ಮಾತ್ರ ನಿರೀಕ್ಷೆಯಂತೆ ಸಾಗದೆ ಕುಂಠಿತಗೊಂಡಿದೆ.

ಎಲ್.ರವಿ ಜಿಲ್ಲಾ ಕೋವಿಡ್ ಲಸಿಕಾಧಿಕಾರಿ ಮೈಸೂರು.